ಮುಳಬಾಗಿಲು: ತಾಲೂಕಿನ ಕೆಲವು ಗ್ರಾಮಗಳಿಗೆ ಅಳವಡಿಸಲಾದ ನಾಮಫಲಕ ಗಳು ಶಿಥಿಲಾವಸ್ಥೆ ತಲುಪಿದ್ದರೆ, ಕೆಲವು ಕಡೆ ಅಳವಡಿಸೇ ಇಲ್ಲ. ಹತ್ತಾರು ವರ್ಷಗಳ ಹಿಂದೆ ಕಲ್ಲುಗಳನ್ನು ನೆಟ್ಟು ಅದರ ಮೇಲೆ ಆಯಾ ಗ್ರಾಮಗಳ ಹೆಸರು ಬರೆಯಲಾಗುತ್ತಿತ್ತು. ಇದರಿಂದ ಅಪರಿಚಿತರಿಗೆ ಅನುಕೂಲವಾಗುತ್ತಿತ್ತು. ಈಗ ಹಿಂದೆ ಅಳವಡಿಸಿದ್ದ ಕಲ್ಲಿನ ನಾಮಫಲಕಗಳು ವಾಹನಗಳು ಡಿಕ್ಕಿ ಹೊಡೆದು, ಗಾಳಿ, ಮಳೆಗೆ ಕುಸಿದು ಬಿದ್ದಿವೆ. ಆದರೆ, ಅವುಗಳನ್ನು ಸಂಬಂಧಪಟ್ಟ ಅಧಿಕಾರಿ ಗಳು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಹೊಸದಾಗಿಯೂ ಅಳವಡಿಕೆ ಮಾಡಿಲ್ಲ.
ತಾಲೂಕಿನಲ್ಲಿ 350ಕ್ಕೂ ಅಧಿಕ ಹಳ್ಳಿಗಳಿದ್ದು, ಅವುಗಳನ್ನು ಗುರುತಿಸಲು ಪ್ರಮುಖ ರಸ್ತೆಗಳ ಗೇಟ್‌ಗಳಲ್ಲಿ ಕೆಲವು ಕಡೆ ನಾಮಫಲಕ ಹಾಕಲಾಗಿದೆ. ಮುಳಬಾಗಿಲು ಐತಿಹಾಸಿಕ, ಚಾರಿತ್ರಿಕ ಹಿನ್ನೆಲೆ ಹೊಂದಿರುವ ತಾಲೂಕು. ಪ್ರವಾಸಿ ತಾಣವೂ ಆಗಿದೆ. ಪ್ರತಿ ದಿನ ಪ್ರವಾಸಿ ಗರು ಬರುತ್ತಾರೆ. ಅಂತೆಯೇ ಗ್ರಾಮೀಣ ಪ್ರದೇಶಗಳ ಬಸ್ ನಿಲ್ದಾಣ ಬದಿಯಲ್ಲಿ ಆ ಪ್ರದೇಶವನ್ನು ಗುರುತಿಸಲು ಕಲ್ಲು ಬಂಡೆ, ಸಿಮೆಂಟ್ ಗೋಡೆ ಮತ್ತು ಕಬ್ಬಿಣದ ಕಂಬಗಳಿಂದ ಆಯಾ ಗ್ರಾಮಗಳಲ್ಲಿ ನಾಮಫಲಕ ಹಾಕಲಾಗಿದೆ. ಹಲವೆಡೆ ನಾಮಫಲಕಗಳು ಮುರಿದು ಬಿದ್ದಿದ್ದರೆ, ಕೆಲವು ನಾಮಫಲಕಗಳಿಗೆ ಖಾಸಗಿ ಶಾಲಾ ಕಾಲೇಜು, ಸಿನಿಮಾ, ಕಂಪನಿಗಳ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಇದರಿಂದ ಗ್ರಾಮಗಳ ಹೆಸರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಅಂತಹ ಐತಿಹಾಸಿಕ ತಾಣವಾದ ಆವಣಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಾಮಫಲಕ ಶಿಥಿಲವಾಗಿದೆ. ಇದರಿಂದ ಪ್ರಯಾಣಿಕರು ಸ್ಥಳಿಯರನ್ನು ಕೇಳಿ ಮುಂದೆ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಕೆಜಿಎಫ್ ರಸ್ತೆಯ ಮಾರ್ಗವಾಗಿ ಕಾಶೀಪುರ, ಗಂಜಿಗುಂಟೆ ಮೂಲಕ ಆವಣಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದೆ. ವಿರೂಪಾಕ್ಷಿ ಮೂಲಕವಾಗಿಯೂ ಆವಣಿಗೆ ರಸ್ತೆ ಮಾರ್ಗ ಇರುವುದರಿಂದ ಗಂಜಿಗುಂಟೆ ವೃತ್ತದಲ್ಲಿ ನಾಮಫಲಕ ಅಳವಡಿಸಲಾಗಿದೆ. ಅದು ಈಗ ನಾಶವಾಗಿರುವ ಕಾರಣ ಹೊಸಬರಿಗೆ ಆವಣಿಗೆ ಯಾವ ಕಡೆ ಹೋಗಬೇಕೆಂಬುದು ದಾರಿ ತೋಚದೇ ಪರದಾಡುವಂತಾಗಿದೆ. ತಾಲೂಕಿನ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ಹಣ ಬಿಡುಗಡೆ ಮಾಡುತ್ತಿದೆ. ರಸ್ತೆ ಅಭಿವೃದ್ಧಿ ಅಥವಾ ದುರಸ್ತಿ ಮಾಡಿದ ನಂತರ ಸಂಬಂಧಪಟ್ಟ ಇಲಾಖೆ, ಸ್ಥಳೀಯ ಆಡಳಿತ ಗ್ರಾಮಗಳಲ್ಲಿ, ಗೇಟ್ ಗಳಲ್ಲಿ ನಾಮಫಲಕ ಅಳವಡಿಸುವುದಿಲ್ಲ.
ಶಿಥಿಲಗೊಂಡ ನಾಮಫಲಕಗಳನ್ನೂ ಸರಿಪಡಿಸಲ್ಲ. ಇದರಿಂದ ಅಪರಿಚಿತರಿಗೆ, ವಾಹನ ಸವಾರರಿಗಳು ಗ್ರಾಮಗಳನ್ನು ಗುರುತಿಸಲು ಆಗುವುದಿಲ್ಲ ಎಂದು ಕರ್ನಾಟಕ ರೈತ ಸೇನೆ ಜಿಲ್ಲಾಧ್ಯಕ್ಷ ಚಲ್ಲಪಲ್ಲಿ ಎಂ.ಸಿ.ಕೃಷ್ಣಾರೆಡ್ಡಿ ಹೇಳಿದರು.
-ಎಂ.ನಾಗರಾಜಯ್ಯ