ಉಡುಪಿ: ಪಡಿತರ ಚೀಟಿ ವಿತರಣೆಯಲ್ಲಿ ಇನ್ನೂ ಹಲವಾರು ಗೊಂದಲಗಳಿವೆ. ಜಿಲ್ಲೆಯಲ್ಲಿ ಈಗಾಗಲೇ ಆಧಾರ್ ಲಿಂಕ್ ಆಗದಿ ರುವ 1,20,000 ಮಂದಿಯ ಪಡಿತರ ಚೀಟಿ ಡಿಲೀಟ್ ಆಗಿದ್ದು, ಅವರಿಗೆ ಮರುಪರಿಶೀಲನೆಗೆ ಕ್ರಮ ಕೈಗೊಳ್ಳಿ. ಅದಲ್ಲದೆ ಹೊಸದಾಗಿ ಕಾರ್ಡ್ ಸಹ ನೀಡುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಬಯೋ ಮೆಟ್ರಿಕ್ ಸಹಿತ ಎಲ್ಲ ಗೊಂದಲ ಶೀಘ್ರ ಸರಿಪಡಿಸಿ ಎಂದು ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ಸೂಚಿಸಿದರು.
ಉಡುಪಿ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ(ದಿಶಾ)ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದಕ್ಕೆ ಉತ್ತರಿಸಿದ ಆಹಾರ ಇಲಾಖೆ ಅಧಿಕಾರಿಗಳು, ಬಿಪಿಎಲ್ ಪಡಿತರ ಚೀಟಿಗಾಗಿ 7,900 ಅರ್ಜಿ ಬಂದಿದ್ದು, ಅದರಲ್ಲಿ 3,400 ಅರ್ಜಿಗಳನ್ನು ಗ್ರಾಮ ಲೆಕ್ಕಿಗರಿಗೆ ಪರಿಶೀಲನೆಗೆ ಕಳುಹಿಸಲಾಗಿದೆ. ಅವರೇ ಪರಿಶೀಲಿಸಿ ಅಂತಿಮಗೊಳಿಸಲಿದ್ದಾರೆ ಎಂದರು.
ಉಡುಪಿ ತಾಲೂಕಿನ 11,000, ಕುಂದಾಪುರದ 7,618 ಹಾಗೂ ಕಾರ್ಕಳದಲ್ಲಿ 7,741 ಮಂದಿ ಹೀಗೆ ಜಿಲ್ಲೆಯಲ್ಲಿ ಒಟ್ಟು 26,359ಕ್ಕೂ ಅಧಿಕ ಮಂದಿ ನಿವೇಶನ ರಹಿತರಿದ್ದಾರೆ. ಅದರಲ್ಲಿ ಬಸವ ವಸತಿಯಡಿ ಶೇ. 60ರಷ್ಟು ಹಕ್ಕುಪತ್ರ ವಿತರಣೆ ಗುರಿ ನಿಗದಿಪಡಿಸಲಾಗಿದ್ದು, ಈಗಾಗಲೇ 3,265 ಮಂದಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಉಳಿದ ಯೋಜನೆ ಯಡಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲು ಸಂಸದರು ಸೂಚಿಸಿದರು.
ವಿದ್ಯುತ್ ವ್ಯತ್ಯಯವಾದ ಸಮಯ ದಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಿಗುತ್ತಿಲ್ಲ ಎನ್ನುವ ಹಲವು ದೂರು ಬರುತ್ತಿವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಂಸದೆ ಸೂಚಿಸಿದರು. ಜಿಲ್ಲೆಯಲ್ಲಿ 2ಜಿ 216 ಹಾಗೂ 3ಜಿ 164 ಟವರ್‌ಗಳನ್ನು ಈಗಾಗಲೇ ಅಳವಡಿಸಲಾಗಿದೆ. ಹೆಚ್ಚುವರಿಯಾಗಿ ಇನ್ನೂ 100 ಟವರ್ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು. ಎಡಿಸಿ ಅನುರಾಧಾ, ಜಿ.ಪಂ. ಯೋಜನಾ ನಿರ್ದೇಶಕಿ ನಯನಾ ಉಪಸ್ಥಿತರಿದ್ದರು.