ಬಾದಾಮಿ: ಹೊಸ ಆಧಾರ್ ಕಾರ್ಡ್ ಪಡೆಯಲು ಮತ್ತು ತಿದ್ದುಪಡಿ ಮಾಡಿಸಲು ಮಂಗಳವಾರ ಬೆಳಗ್ಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಬಂದ ಪೋಷಕರು ಅಂಚೆ ಇಲಾಖೆ ಕಚೇರಿ ಎದುರು ಪ್ರತಿಭಟಿಸಿದರು.
ಆಧಾರ್ ಕಾರ್ಡ್‌ಗಾಗಿ ಬಾದಾಮಿ, ಬೇಲೂರ, ಕುಟುಕನಕೇರಿ, ನಂದಿಕೇಶ್ವರ, ಪಟ್ಟದಕಲ್ಲು, ಹೊಸೂರ, ಕಬ್ಬಲಗೇರಿ, ಕಟಗೇರಿ, ಜಾಲಿಹಾಳ, ಹಿರೇಮುಚ್ಚಳಗುಡ್ಡ ಗ್ರಾಮಗಳ ಪಾಲಕರು-ವಿದ್ಯಾರ್ಥಿಗಳು ಸರದಿಯಲ್ಲಿ ನಿಂತರೂ ಅವಕಾಶ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.
ಗ್ರಾಮೀಣ ಭಾಗದ ಜನರು ಬೆಳಗ್ಗೆ ಅಂಚೆ ಕಚೇರಿಗೆ ಬಂದು ಸರದಿಯಲ್ಲಿ ನಿಲ್ಲುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಬೆಳಗಿನ ಜಾವ 6ಗಂಟೆಗೆ ಮಕ್ಕಳು, ಮೊಮ್ಮಕ್ಕಳನ್ನು ಕಟ್ಟಿಕೊಂಡು ಬಂದರೂ ಅವಕಾಶ ಸಿಗುತ್ತಿಲ್ಲ ಎಂದು ಕುಟುಕನಕೇರಿ ಗ್ರಾಮದ ಮಲ್ಲವ್ವ ಅಳಲು ತೋಡಿಕೊಂಡರು. ಅಂಚೆ ಇಲಾಖೆಗೆ ಬಂದರೆ ಬ್ಯಾಂಕಿಗೆ, ಬಿಎಸ್‌ಎನ್‌ಎಲ್‌ಗೆ ಹೋಗಿ ಎನ್ನುತ್ತಾರೆ. ಮಿನಿ ವಿಧಾನಸೌಧ ನೆಮ್ಮದಿ ಕೇಂದ್ರ, ತಾಲೂಕು ಪಂಚಾಯತ, ಬ್ಯಾಂಕ್ ಮತ್ತು ಅಂಚೆ ಇಲಾಖೆಯಲ್ಲಿ ಆಧಾರ್ ಕಾರ್ಡ್ ಕೊಡುವುದು ಬಂದ್ ಆಗಿದೆ.
ನಾವು ಎಲ್ಲಿಗೆ ಹೋಗಬೇಕು ಎಂದು ಜನರು ಪ್ರಶ್ನಿಸಿದರು. ಬ್ಯಾಂಕ್ ಮತ್ತು ಅಂಚೆ ಇಲಾಖೆಯಲ್ಲಿ ನಿತ್ಯ ಗ್ರಾಹಕರ ಹಣಕಾಸಿನ ವಹಿವಾಟು ಇರುವುದು. ಬ್ಯಾಂಕ್ ಗ್ರಾಹಕರಿಂದ ಗದ್ದಲವಿದ್ದರೆ ನಾಳೆ ಬರುವಂತೆ ಮರಳಿ ಕಳಿಸುತ್ತಾರೆ. ಆಧಾರ್ ಕಾರ್ಡ್‌ಗೆ ಅಧಿ ಕ ಸಂಖ್ಯೆಯಲ್ಲಿ ಮಹಿಳೆಯರೇ ಬರುತ್ತಾರೆ. ಗ್ರಾಮ ಪಂಚಾಯತನಲ್ಲಿ ಆಧಾರ್ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿ ದೊರೆಯವಂತೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.