Advertisement

`ಐದು ವರ್ಷದ ಆಡಳಿತದಿಂದ ದೇಶದಲ್ಲಿ  ಅಭಿವೃದ್ಧಿ ಸಾಧ್ಯವಿಲ್ಲ’

04:38 PM Sep 19, 2017 | Team Udayavani |

ಉಡುಪಿ: ಕೇವಲ ಐದು ವರ್ಷದ ಆಡಳಿತದಿಂದ ದೇಶದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಕನಿಷ್ಠ 15-20 ವರ್ಷಗಳಾದರೂ ಬೇಕು. ಅಲ್ಲದೇ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಸರಕಾರಗಳಿದ್ದರೂ ಅಭಿವೃದ್ಧಿ ಮಾಡಲಾಗುವುದಿಲ್ಲ. ಆದ್ದರಿಂದ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಪಣತೊಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Advertisement

ಅವರು ರವಿವಾರ ಅಲೆವೂರಿನ ರಾಂಪುರದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಮತ್ತು ಬಿಜೆಪಿ ಅಲೆವೂರು ಗ್ರಾಮ ಸಮಿತಿ, ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾ ಸಹಭಾಗಿತ್ವದಲ್ಲಿ  ಪಂಡಿತ್‌ ದೀನದಯಾಳ್‌ ಜನ್ಮ ಶತಾಬ್ದಿ ಪ್ರಯುಕ್ತ ಬೃಹತ್‌ ಕಾರ್ಯಕರ್ತರ ಸಮಾವೇಶ ಹಾಗೂ ವಿವಿಧ ಮೋರ್ಚಾಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. 

ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಮೂರು ವಿಷಯಗಳ ಬಗ್ಗೆ ಜನರಿಗೆ ಭರವಸೆ ನೀಡಿದ್ದೆವು. ದೇಶದ ಗಡಿಗಳ ರಕ್ಷಣೆ ಮಾಡುತ್ತೇವೆ, ದೇಶದಲ್ಲಿ ಭ್ರಷ್ಟಾಚಾರ ರಹಿತ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಮತ್ತು ಪ್ರಪಂಚದಲ್ಲಿ ಭಾರತಕ್ಕೆ ಗೌರವ ಸಿಗುವಂತೆ ಮಾಡುತ್ತೇವೆ ಎಂದು ಹೇಳಿದ್ದೆವು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಮೂರುವರೆ ವರ್ಷದಲ್ಲಿ ಆಡಳಿತ ನೀಡಿದ್ದಾರೆ. ಅಭಿವೃದ್ಧಿ  ವಿಚಾರದಲ್ಲಿ ಭಾರತ ಪ್ರಪಂಚದ ಎಲ್ಲ  ದೇಶಗಳಿಗಿಂತ ದಾಪುಗಾಲು ಹಾಕುತ್ತಿದೆ. ಅದರಿಂದ ಭಾರತಕ್ಕೆ ಗೌರವ ಸಿಕ್ಕಿದೆ. ಭಾರತದ ಪ್ರಧಾನಿ ಪ್ರಪಂಚದ ನೇತೃತ್ವ ವಹಿಸಬೇಕು ಎನ್ನುವ ನಿರೀಕ್ಷೆಗಳಿವೆ ಎಂದರು. 

ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕುಂಠಿತಗೊಂಡಿದೆ. ಕೇಂದ್ರದಿಂದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯಾದರೂ ಅದನ್ನು ಬಳಸದೇ ದುರುಪಯೋಗ ಪಡಿಸಲಾಗುತ್ತಿದೆ.  

ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ಅಧಿಕಾರಕ್ಕೇರಿಸಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.  ಬಿಜೆಪಿ ಯುವ ಮೋರ್ಚಾ ಗ್ರಾಮ ಸಮಿತಿ ಅಧ್ಯಕ್ಷ ಪ್ರಸಾದ್‌ ಪೂಜಾರಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.

Advertisement

ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರತ್ನಾಕರ ಹೆಗ್ಡೆ, ಮಂಗಳೂರು ವಿಭಾಗ ಉಸ್ತುವಾರಿ ಉದಯಕುಮಾರ್‌ ಶೆಟ್ಟಿ, ಮಾಜಿ ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್‌, ಕಾಪು ಕ್ಷೇತ್ರ ಅಧ್ಯಕ್ಷ ಪ್ರವೀಣ್‌ ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್‌ ಶೆಟ್ಟಿ ಗುರ್ಮೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುಯಿಲಾಡಿ ಸುರೇಶ್‌ ನಾಯಕ್‌, ಯಶಪಾಲ ಸುವರ್ಣ, ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಕುಂದರ್‌, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್‌, ಜಿ.ಪಂ. ಸದಸ್ಯೆ ಶಿಲ್ಪಾ ಸುವರ್ಣ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌, ಸದಸ್ಯೆ ಬೇಬಿ ರಾಜೇಶ್‌, ಬಿಜೆಪಿ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ರವಿ ಸೇರಿಗಾರ್‌, ಅಲೆವೂರು ಪಂಚಾಯತ್‌ ಉಪಾಧ್ಯಕ್ಷೆ ಜಯಲಕ್ಷ್ಮೀ ಹಂಸರಾಜ್‌ ಮೊದಲಾದವರಿದ್ದರು. 

ಸಮಾವೇಶದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತ ಹರೀಶ್‌ ಸೇರಿಗಾರ್‌ ಅವರನ್ನು ಸಮ್ಮಾನಿಸಲಾಯಿತು. ಗ್ರಾಮ ಸಮಿತಿ ಅಧ್ಯಕ್ಷ ಅಶೋಕ ಕುಮಾರ್‌ ಸ್ವಾಗತಿಸಿದರು. ಅಲೆವೂರು ಪಂಚಾಯತ್‌ ಅಧ್ಯಕ್ಷ ಶ್ರೀಕಾಂತ ನಾಯಕ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಭಾರತದಲ್ಲಿ  3 ಕೋಟಿ ಬಾಂಗ್ಲಾ ದೇಶಿಗರು ಒಳನುಸುಳಿ ಅಕ್ರಮ  ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಅವರು ಹೇಗೆ ಬಂದರು? ಎಂದು ಪ್ರಶ್ನಿಸಿದ ಶೋಭಾ ಕರಂದ್ಲಾಜೆ, ಕಳೆದ 70 ವರ್ಷಗಳ ಕಾಲ ಭಾರತ ಮತ್ತು ಬಾಂಗ್ಲಾ ದೇಶದ ನಡುವೆ ಗಡಿಬೇಲಿಯೇ ಇರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಒಂದು ವರ್ಷದಲ್ಲಿ ಎರಡು ದೇಶಗಳ ಗಡಿಯನ್ನು ಗುರುತಿಸಿ ಬೇಲಿ ಹಾಕುವ ಕೆಲಸ ನಡೆಸಲಾಗಿದೆ. ಅಕ್ರಮ ವಲಸೆ ಕಡಿಮೆಯಾಗಿದೆ. ದೇಶದ ಅಭಿವೃದ್ಧಿ ಕೆಲಸದಿಂದ ನಾವು ಮುಂಚೂಣಿಯಲ್ಲಿದ್ದೇವೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next