ಬೀದರ: ಬಾಲಕಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಆರೋಪಿಗೆ ಸ್ಥಳೀಯ ಪೋಕ್ಸೋ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.
ಅತ್ಯಾಚಾರಕ್ಕೆ ಯತ್ನಿಸಿದ ಮತಿನ್ ಗೌಸೊದ್ದೀನ್ಗೆ ಶಿಕ್ಷೆ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಮತ್ತೆ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 1 ಲಕ್ಷ ರೂ. ಪರಿಹಾರ ನೀಡಲು ಶಿಫಾರಸ್ಸು ಮಾಡಿ ನ್ಯಾಯಾಧಿಧೀಶರಾದ ಮಂಜುನಾಥ ಜಿ.ಎ. ತೀರ್ಪು ನೀಡಿದ್ದಾರೆ.
ಘಟನೆ ವಿವರ: ಜಿಲ್ಲೆಯ ಗ್ರಾಮವೊಂದರಲ್ಲಿ 2017ರ ಜನವರಿ ತಿಂಗಳಲ್ಲಿ ಪ್ರಾಥಮಿಕ ಶಾಲೆಗೆ ಹೋಗಿದ್ದ ಬಾಲಕಿ ಮೂತ್ರ ವಿಸರ್ಜನೆಗೆ ಹೊರಗಡೆ ಹೋಗಿದ್ದಾಗ ಮತಿನ್ ಎತ್ತಿಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ್ದ. ಸ್ಥಳೀಯರು ನೋಡಿ ಬೆನ್ನಟ್ಟಿದ್ದಾಗ ಓಡಿ ಹೋಗಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖಾ ಅಧಿಕಾರಿಯಾಗಿದ್ದ ಡಿವೈಎಸ್ಪಿ ಎಸ್.ವೈ. ಹುಣಸಿಕಟ್ಟಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ಸರ್ಕಾರಿ ಅಭಿಯೋಜಕ ಶರಣಗೌಡ ಸರ್ಕಾರದ ಪರ ವಾದ ಮಂಡಿಸಿದ್ದರು.