Advertisement

ಮೈತ್ರಿ ಸರ್ಕಾರ ಐದು ವರ್ಷ ಸುಭದ್ರ

03:30 AM Apr 14, 2019 | Team Udayavani |

ದೇವನಹಳ್ಳಿ: ಬಿಜೆಪಿಯವರು ಮತ್ತೆ ಮುಖ್ಯಮಂತ್ರಿ ಆಗುವ ಹಗಲುಗನಸು ಕಾಣುತ್ತಿದ್ದು, ಅದು ಈಡೇರುವುದಿಲ್ಲ. ನಮ್ಮಲ್ಲಿ ಯಾವ ಶಾಸಕರೂ ರಾಜೀನಾಮೆ ಕೊಡುವುದಿಲ್ಲ. ಯಾವುದೇ ಗೊಂದಲಗಳಿಲ್ಲದೇ ಮೈತ್ರಿ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.

Advertisement

ನಗರದ ಹೊಸ ಬಸ್‌ ನಿಲ್ದಾಣದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಹಮ್ಮಿಕೊಂಡಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಬಿಜೆಪಿಯ ಕೆಲವು ಮುಖಂಡರು ಇನ್ನೂ ಪ್ರಚಾರಕ್ಕೆ ಬಂದಿಲ್ಲ. ನಮ್ಮಲ್ಲೂ ಕೆಲವರು ಬಂದಿಲ್ಲ. ಅದನ್ನು ನಾವು ಬಗೆಹರಿಸಿಕೊಳ್ಳುತ್ತೇವೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿ ಆಗಿದ್ದಾಗ ನನ್ನನ್ನು ಗುರುತಿಸಿ ರೇಷ್ಮೆ ಸಚಿವರನ್ನಾಗಿ ಮಾಡಿದ್ದರು. ನಾನು ಉಪ ಮುಖ್ಯಮಂತ್ರಿ ಆಗಿ ಈ ಮಟ್ಟಕ್ಕೆ ಬರಬೇಕಾದರೆ ಅವರ ಸಹಕಾರ ಅಪಾರವಾಗಿದೆ. ನೂರಕ್ಕೆ ನೂರರಷ್ಟು ವೀರಪ್ಪ ಮೊಯ್ಲಿ ಅವರು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಜನ ಬಿಜೆಪಿ ಅಭ್ಯರ್ಥಿ ನಂಬುತ್ತಾರೆಯೇ?: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕತೆ ಎಲ್ಲರಿಗೂ ತಿಳಿದಿದೆ. ಐದು ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಎಷ್ಟು ಜನರಿಗೆ ಕೆಲಸ ಮಾಡಿಕೊಟ್ಟಿದ್ದಾರೆ. ಚುನಾವಣೆ ಬಂದ ನಂತರ ಮತ್ತೆ ಇಲ್ಲಿಗೆ ಬಂದಿದ್ದಾರೆ. ಇಂತಹವರನ್ನು ಜನರು ನಂಬುತ್ತಾರೆಯೇ ಎಂದು ಪ್ರಶ್ನಿಸಿದರು. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಇರುವುದರಿಂದ ವೀರಪ್ಪ ಮೊಯ್ಲಿ ಅವರ ದೂರದೃಷ್ಟಿಯಿಂದ ಹಾಗೂ ಪರಮಶಿವಯ್ಯ ವರದಿ ಆಧಾರಿತ ನೇತ್ರಾವತಿ ತಿರುವಿನ ಒಂದು ಭಾಗವಾದ ಎತ್ತಿನಹೊಳೆ ಯೋಜನೆಯಿಂದ 24 ಟಿಎಂಸಿ ನೀರು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮುಂತಾದ ಕಡೆ ಬಂದೇ ಬರುತ್ತದೆ ಎಂದು ತಿಳಿಸಿದರು.

ಮೊಯ್ಲಿ ಗೆಲ್ಲಿಸಿದರೆ ಕ್ಷೇತ್ರ ಅಭಿವೃದ್ಧಿ: ಜೂನ್‌ ವೇಳೆಗೆ ಅರಸೀಕೆರೆ ತನಕ ಎತ್ತಿನಹೊಳೆ ನೀರು ಬರುವಂತೆ ಆಗುತ್ತದೆ. ನನ್ನ ಕ್ಷೇತ್ರ ಕೊರಟಗೆರೆ ತಾಲೂಕಿನ ಭೆ„ರಗೊಂಡಲು ಗ್ರಾಮದಲ್ಲಿ ಐದು ಸಾವಿರ ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡು, ಅಲ್ಲಿಂದ ಮುಂದೆ ನೀರು ಬರುವಂತೆ ಮಾಡಲಾಗುವುದು. ವೀರಪ್ಪ ಮೊಯ್ಲಿ ಅವರು ಈ ವಿಚಾರವಾಗಿ ಅನೇಕ ಟೀಕೆ, ಟಿಪ್ಪಣಿಗಳಿಗೆ ಒಳಗಾಗಿದ್ದರೂ ಛಲ ಬಿಡದೆ ಈ ಭಾಗಕ್ಕೆ ನೀರು ಹರಿಸಲು ಬದ್ಧರಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಿಸರ್ಗ ನಾರಾಯಣಸ್ವಾಮಿ 86,906 ಹಾಗೂ ಕಾಂಗ್ರೆಸ್‌ನ ವೆಂಕಟಸ್ವಾಮಿ 69,956, ಬಿಜೆಪಿ 9,280 ಮತಗಳನ್ನು ಪಡೆದಿರುವ ಅಂಕಿ ಅಂಶ ನನ್ನ ಕೈಯಲ್ಲಿದೆ. 9,280 ಮತ ಪಡೆದಿರುವ ಬಿಜೆಪಿಗೆ ಈ ಬಾರಿ ಐದು ಸಾವಿರ ಮತಗಳನ್ನು ಪಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡರೆ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದರು.

Advertisement

ಮೋದಿ ಮಹಾ ಸುಳ್ಳುಗಾರ: ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ಜತೆ ಯುದ್ಧ ನಡೆದಿತ್ತು. ಆಗ ರಾಜಕೀಯವಾಗಿ ಸರ್ಜಿಕಲ್‌ ಸ್ಟ್ರೈಕ್‌ ಅನ್ನು ಬಳಸಿಕೊಂಡಿಲ್ಲ. ಈಗ ನರೇಂದ್ರ ಮೋದಿ ಸರ್ಕಾರ ಒಂದೇ ಒಂದು ಸರ್ಜಿಕಲ್‌ ಸ್ಟ್ರೈಕ್‌ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತಯಾಚಿಸುತ್ತಿರುವುದು ಮಾನ, ಮರ್ಯಾದೆ ಇಲ್ಲದಂತಾಗಿದೆ. ಚುನಾವಣಾ ಆಯೋಗ ಈ ವಿಚಾರವನ್ನು ತೆಗೆದುಕೊಳ್ಳಬೇಡಿ ಎಂದು ಹೇಳಿದ್ದರೂ ಪದೇ ಪದೆ ಅದನ್ನೇ ಹೇಳುತ್ತಾ ಹೋಗುತ್ತಿದ್ದಾರೆ. ಇಡೀ ದೇಶದಲ್ಲಿಯೇ ಸುಳ್ಳುಗಳ ಸರಮಾಲೆಗಳ ರೀಲು ಬಿಡುವ ವ್ಯಕ್ತಿ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿ ಎಂದು ಲೇವಡಿ ಮಾಡಿದರು.

ಶಾಸಕ ನಿಸರ್ಗ ಎಲ್‌.ಎನ್‌.ನಾರಾಯಣಸ್ವಾಮಿ, ಮಾಜಿ ಶಾಸಕ ಕೆ.ವೆಂಕಟಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಬಿ.ಶ್ರೀನಿವಾಸ್‌, ಕಾರ್ಯಾಧ್ಯಕ್ಷ ಆರ್‌.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನಕುಮಾರ್‌, ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್‌, ಜಿಪಂ ಸದಸ್ಯರಾದ ಲಕ್ಷ್ಮೀನಾರಾಯಣ್‌, ಕೆ.ಸಿ.ಮಂಜುನಾಥ್‌,

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ಆರ್‌.ರವಿಕುಮಾರ್‌, ಕೆಪಿಸಿಸಿ ಸದಸ್ಯರಾದ ಪಟಾಲಪ್ಪ, ಚಿನ್ನಪ್ಪ, ಚೇತನ್‌ಗೌಡ, ತಾಪಂ ಮಾಜಿ ಸದಸ್ಯ ಲಕ್ಷ್ಮಣ್‌ಗೌಡ, ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ಅಧ್ಯಕ್ಷ ಲೋಕೇಶ್‌, ಮಾಜಿ ಪುರಸಭಾಧ್ಯಕ್ಷ ಎಂ.ಮೂರ್ತಿ, ಮಾಜಿ ಉಪಾಧ್ಯಕ್ಷೆ ಆಶಾರಾಣಿ, ಎಪಿಎಂಸಿ ಅಧ್ಯಕ್ಷ ಕೆ.ವಿ.ಮಂಜುನಾಥ್‌, ಉಪಾಧ್ಯಕ್ಷ ಸುಧಾಕರ್‌, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೊಣ್ಣಪ್ಪ, ಟೌನ್‌ ಜೆಡಿಎಸ್‌ ಅಧ್ಯಕ್ಷ ಮುನಿನಂಜಪ್ಪ, ತಾಲೂಕು ಸೊಸೆ„ಟಿ ಅಧ್ಯಕ್ಷ ಶ್ರೀರಾಮಯ್ಯ, ತಾಪಂ ಸದಸ್ಯ ಮಹೇಶ್‌, ಕಾರಹಳ್ಳಿ ಶ್ರೀನಿವಾಸ್‌, ವೆಂಕಟೇಶ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಕೆ.ಆರ್‌.ನಾಗೇಶ್‌, ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಅಧ್ಯಕ್ಷ ಮಾರುತಿ, ರಾಮಚಂದ್ರಪ್ಪ, ಚಂದ್ರಶೇಖರ್‌, ಮೈತ್ರಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next