ಐದು ಬಾರಿಯ ಗ್ರಾಂಡ್ ಸ್ಲ್ಯಾಮ್ ಚಾಂಪಿಯನ್ ಟೆನ್ನಿಸ್ ಲೋಕದ ಬೆಡಗಿ ಮರಿಯಾ ಶರಪೋವಾ ಅವರು ತಮ್ಮ 32ನೇ ವಯಸ್ಸಿನಲ್ಲಿ ವೃತ್ತಿಪರ ಟೆನಿಸ್ ಗೆ ವಿದಾಯ ಘೋಷಿಸಿದ್ದಾರೆ. ರಷ್ಯಾ ಮೂಲದ ಈ ಟೆನಿಸ್ ಆಟಗಾರ್ತಿ ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದ ಮಹಿಳಾ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು.
2004ರಲ್ಲಿ ತನ್ನ 17ನೇ ವಯಸ್ಸಿನಲ್ಲೇ ವಿಂಬಲ್ಡನ್ ಅಂಗಳದಲ್ಲಿ ಚಾಂಪಿಯನ್ ಶಿಪ್ ಪಟ್ಟ ಮುಡುಗೇರಿಸಿಕೊಂಡಿದ್ದ ಶರಪೋವಾ ಮಹಿಳಾ ಟೆನಿಸ್ ಲೋಕದ ಸೆನ್ಷೇಷನಲ್ ತಾರೆಯಾಗಿ ಗುರುತಿಸಿಕೊಂಡಿದ್ದರು ಮಾತ್ರವಲ್ಲದೇ ತಮ್ಮ ಸ್ನಿಗ್ದ ಸೌಂದರ್ಯದ ಕಾರಣದಿಂದಾಗಿ ಮಾಡೆಲಿಂಗ್ ಲೋಕದ ಹಾಟ್ ಸ್ಟಾರ್ ಆಗಿಯೂ ಗುರುತಿಸಿಕೊಂಡಿದ್ದರು.
‘ನಾನು ಇದಕ್ಕೆ ಹೊಸಬಳು, ಹಾಗಾಗಿ ದಯವಿಟ್ಟು ನನ್ನನ್ನು ಕ್ಷಮಿಸಿ. ಟೆನ್ನಿಸ್ — ನಾನು ನಿನಗೆ ವಿದಾಯ ಹೇಳುತ್ತಿದ್ದೇನೆ’ ಎಂದು ಶರಫೊವಾ ತನ್ನ ವಿದಾಯ ನುಡಿಯಲ್ಲಿ ತಿಳಿಸಿದ್ದಾರೆ.
ಉದ್ದೀಪನಾ ಔಷಧಿ ಸೇವನೆಗಾಗಿ 15 ತಿಂಗಳು ವೃತ್ತಿಪರ ಟೆನಿಸ್ ನಿಂದ ನಿಷೇಧಕ್ಕೊಳಗಾಗಿ 2017ರಲ್ಲಿ ಮರಳಿ ಬಂದ ಶರಪೋವಾ ಗಾಯ ಮತ್ತು ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದರು.
ಮಾಜೀ ಅಗ್ರ ಶ್ರೆಯಾಂಕದ ಈ ಆಟಗಾರ್ತಿ ಈ ವರ್ಷ ಕೇವಲ ಎರಡು ಕೂಟಗಳಲ್ಲಿ ಮಾತ್ರವೆ ಭಾಗವಹಿಸಿದ್ದರು ಮತ್ತು ಆಸ್ಟ್ರೇಲಿಯಾ ಓಪನ್ ಟೆನಿಸ್ ಕೂಟದಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಈ ಸೋಲಿನ ಬಳಿಕ ಶರಪೋವಾ ವಿಶ್ವ ಶ್ರೇಯಾಂಕ 373ಕ್ಕೆ ಕುಸಿದಿತ್ತು.