ಜೈಪುರ/ಹೈದರಾಬಾದ್: ಅಬ್ಬರದ ಪ್ರಚಾರ, ನಾಯಕರ ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾದ ಪಂಚ ರಾಜ್ಯಗಳ ಚುನಾವಣೆಗೆ ಶುಕ್ರವಾರ ತೆರೆಬಿದ್ದಿದೆ. ಡಿಸೆಂಬರ್ 11ರಂದು ಎಲ್ಲ 5 ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದ್ದು, ಇನ್ನು 3 ದಿನಗಳಲ್ಲಿ ಮತದಾರರು ಬರೆದಿರುವಂಥ ರಾಜಕೀಯ ಪಕ್ಷಗಳು ಹಾಗೂ ನಾಯಕರ ಭವಿಷ್ಯ ಬಯಲಾಗಲಿದೆ. ಮಿಜೋರಾಂ, ಛತ್ತೀಸ್‌ಗಡ, ಮಧ್ಯ ಪ್ರದೇಶದ ಬಳಿಕ ಶುಕ್ರವಾರ ಕೊನೆಯ 2 ರಾಜ್ಯಗಳಾದ ರಾಜಸ್ಥಾನ ಹಾಗೂ ತೆಲಂಗಾಣ ವಿಧಾನಸಭೆಗಳ ಮತದಾನ ಪೂರ್ಣಗೊಂಡಿದ್ದು, ಕ್ರಮವಾಗಿ ಶೇ.72.67 ಹಾಗೂ ಶೇ.67ರಷ್ಟು ಮತದಾನ ದಾಖಲಾಗಿದೆ. ಎರಡೂ ರಾಜ್ಯಗಳಲ್ಲಿ ಕೆಲವು ಕಡೆ ನಡೆದ ಸಣ್ಣ ಪುಟ್ಟ ಘರ್ಷಣೆ ಹೊರತು ಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜಸ್ಥಾನದ ಅಲ್ವಾರ್‌ನ ಶಹಜಹಾನ್‌ಪುರದಲ್ಲಿ ಕೆಲವು ಕಿಡಿಗೇಡಿಗಳು ಮತಗಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಅವರನ್ನು ತಡೆ ಯಲೆಂದು ಅರೆಸೇನಾ ಪಡೆಯ ಯೋಧರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಬಿಕಾನೇರ್‌ನ ಕೊಲಾಯತ್‌ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸಿಕಾರ್‌ನಲ್ಲೂ ಎರಡು ಪಕ್ಷಗಳ ಕಾರ್ಯಕರ್ತರ ಜಟಾಪಟಿ ವರದಿಯಾಗಿದೆ.
ಯಾದವ್ ವಿರುದ್ಧ ರಾಜೇ ಆಕ್ರೋಶ: ತಮ್ಮ ವಿರುದ್ಧ ಅವ ಹೇಳನಕಾರಿಯಾಗಿ ಮಾತನಾಡಿ ರುವ ಜೆಡಿಯು ನಾಯಕ ಶರದ್ ಯಾದವ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜಸ್ಥಾನದ ಸಿಎಂ ವಸುಂಧರಾ ರಾಜೇ ಆಗ್ರಹಿಸಿದ್ದಾರೆ. ಅವರ ಹೇಳಿಕೆಯಿಂದ ನನಗೆ ಅವಮಾನವಾಗಿದೆ. ಇದು ಇಡೀ ಸ್ತ್ರೀಕುಲಕ್ಕೆ ಮಾಡಿದ ಅಪಮಾನ ಎಂದೂ ಅವರು ಹೇಳಿದ್ದಾರೆ. ಗುರುವಾರ ಕಾರ್ಯ ಕ್ರಮವೊಂದರಲ್ಲಿ ಮಾತನಾಡಿದ್ದ ಯಾದವ್ ಅವರು, “ರಾಜೇ ಅವರು ದಪ್ಪಗಾಗಿದ್ದಾರೆ. ಅವರಿಗೆ ಸ್ವಲ್ಪ ವಿಶ್ರಾಂತಿ ನೀಡಬೇಕು’ ಎಂದು ಹೇಳಿದ್ದರು. ಇದೇ ವೇಳೆ, ಯಾದವ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿಪಿಎಂ ನಾಯಕಿ ಬೃಂದಾ ಕಾರಟ್, “ಶರದ್ ಯಾದವ್‌ರಂಥ ಹಿರಿಯ ನಾಯಕರು ಇಂಥ ಹೇಳಿಕೆ ನೀಡಿದ್ದು ಆಕ್ಷೇಪಾರ್ಹ. ಅವರು ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆದು, ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ನನ್ನ ಹೆಸರೇ ಇಲ್ಲ: ತೆಲಂಗಾಣದ ಬಂಜಾ ರಾಹಿಲ್ಸ್ ಮತ ದಾರರ ಪಟ್ಟಿಯಲ್ಲಿ ನನ್ನ ಹೆಸರೇ ಇರಲಿಲ್ಲ. ಹಾಗಾಗಿ ಹಕ್ಕು ಚಲಾಯಿಸಲು ಆಗಲಿಲ್ಲ ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಆರೋಪಿಸಿದ್ದಾರೆ. ತಿಂಗಳ ಹಿಂದೆ ಆನ್‌ಲೈನ್‌ನಲ್ಲಿ ನೋಡಿದಾಗ ಹೆಸರಿತ್ತು. ಆದರೆ, ಈಗ ಪರೀಕ್ಷಿಸಿದಾಗ ಹೆಸರು ಕಾಣೆ ಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಗದ್ದರ್ ಮತದಾನ: ಖಟ್ಟರ್ ಎಡಪಂಥೀಯ ವಾದಿ, ಕ್ರಾಂತಿ ಗೀತೆ ಹಾಗೂ ಜನಪದ ಹಾಡುಗಾರ 70 ವರ್ಷದ ಗದ್ದರ್(ಗುಮ್ಮಡಿ ವಿಠಲ್ ರಾವ್) ಅವರು ಜೀವನದಲ್ಲಿ ಇದೇ ಮೊದಲ ಬಾರಿಗೆ ಹಕ್ಕು ಚಲಾಯಿಸಿದ್ದಾರೆ.
ವಸುಂಧರೆ ಕೈಬಿಟ್ಟಿತೆ ರಾಜಸ್ಥಾನ, ಫಲಿಸಿದ ಕೆಸಿಆರ್ ತಂತ್ರ
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ ಹಿಂದಿ ಭಾಷಿಕರೇ ಹೆಚ್ಚಿರುವ ರಾಜ್ಯಗಳಾಗಿದ್ದು, ಲೋಕಸಭೆ ಚುನಾವಣೆ ದೃಷ್ಟಿಯಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರಮುಖವಾದ ರಾಜ್ಯಗಳಾಗಿವೆ. ಅದರಲ್ಲೂ 2014ರ ಲೋಕಸಭೆ ಚುನಾವಣೆಯಲ್ಲಿ ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಭಾರೀ ಸಾಧನೆಯನ್ನೇ ಮಾಡಿತ್ತು. ಇದೀಗ ವಿಧಾನಸಭೆಯ ಫಲಿತಾಂಶ 2019ರ ಲೋಕಸಭೆ ಚುನಾವಣೆ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಇವುಗಳ ಮೇಲೆ ಎಲ್ಲರ ಕಣ್ಣಿದೆ. ಶುಕ್ರವಾರ ಸಂಜೆ ಬಿಡುಗಡೆಯಾದ ವಾಹಿನಿಗಳ ಮತಗಟ್ಟೆ ಭವಿಷ್ಯ ಇಂತಿದೆ.
ಮೋದಿಯವರ ಭಾರತದಲ್ಲಿ ಇವಿಎಂಗಳಿಗೆ ವಿಚಿತ್ರ ಶಕ್ತಿಯಿರುತ್ತದೆ. ಹಾಗಾಗಿ, ಇವಿಎಂಗಳನ್ನಿಟ್ಟಿರುವ ಸ್ಟ್ರಾಂಗ್ ರೂಂ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಒಂದು ಕಣ್ಣಿಟ್ಟಿರಿ.
ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಆಂಜನೇಯನ ಜಾತಿ ಪ್ರಮಾಣಪತ್ರ ನೀಡುವಂತೆ ವಾರಾಣಸಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಒಂದು ವಾರದೊಳಗೆ ಸರ್ಟಿಫಿಕೆಟ್ ನೀಡದೇ ಇದ್ದಲ್ಲಿ ಜಿಲ್ಲಾಡಳಿತದ ಕಚೇರಿ ಮುಂದೆ ಧರಣಿ ಆರಂಭಿಸುತ್ತೇವೆ.
ಶಿವಪಾಲ್ ಯಾದವ್, ಪ್ರಗತಿಶೀಲ ಸಮಾಜವಾದಿ ಪಕ್ಷದ ನಾಯಕ