ಮುಂಬೈ: ಕೋವಿಡ್-19 ಸೋಂಕು ಅದೆಷ್ಟೋ ಜನರ ಜೀವನವನ್ನು ನರಕವನ್ನಾಗಿಸಿದೆ. ಅದೆಷ್ಟೋ ಜನರ ಪ್ರಾಣ ಕಸಿದ ಸೋಂಕು, ಬಹಳಷ್ಟು ಜನರು ಕೆಲಸ ಕಳೆದುಕೊಳ್ಳುವಂತೆ ಮಾಡಿದೆ. ಕೋವಿಡ್ ಕಾರಣದಿಂದ ಜನರ ಜೀವನ ಶೈಲಿಯೂ ಬದಲಾಗಿದೆ.
ಅಕ್ಷಯ್ ಪಾರ್ಕರ್, ಕಳೆದ ಎಂಟು ವರ್ಷಗಳಿಂದ ಪ್ರತಿಷ್ಠಿತ ಪಂಚತಾರಾ ಹೋಟೆಲ್ ನಲ್ಲಿ ಬಾಣಸಿಗನಾಗಿ ದುಡಿಯುತ್ತಿದ್ದರು. ಕುಟುಂಬದಲ್ಲಿ ಇವರು ಒಬ್ಬರೇ ದುಡಿಯುವ ಕೈ ಆದ ಕಾರಣ ಜವಾಬ್ದಾರಿಯೂ ಹೆಚ್ಚಿತ್ತು. ಆದರೆ ಕೋವಿಡ್ ಕಾರಣದಿಂದ ಅಕ್ಷಯ್ ಪಾರ್ಕರ್ ಕೆಲಸ ಕಳೆದುಕೊಳ್ಳಬೇಕಾಯಿತು.
ದುಡಿಯುವ ಅನಿವಾರ್ಯತೆ ಇರುವ ಅಕ್ಷಯ್ ಪಾರ್ಕರ್ ಕೆಲಸ ಕಳೆದುಕೊಂಡ ಬೇಸರದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತಿಲ್ಲ. ಬದಲಾಗಿ ರಸ್ತೆ ಬದಿಯಲ್ಲಿ ಬಿರಿಯಾನಿ ಸ್ಟಾಲ್ ಆರಂಭಿಸಿದ್ದಾರೆ.
ಮುಂಬೈನ ದಾದರ್ ನಲ್ಲಿರುವ ಶಿವಾಜಿ ಮಂದಿರದ ಸಮೀಪ ಸಣ್ಣ ಸ್ಟಾಲ್ ಹಾಕಿರುವ ಅಕ್ಷಯ್ ಪಾರ್ಕರ್ ಇಲ್ಲಿ ಬಿರಿಯಾನಿ ಮಾರುತ್ತಾರೆ. ವೆಜ್ ಬಿರಿಯಾನಿ, ಎಗ್ ಬಿರಿಯಾನಿ ಮತ್ತು ಚಿಕನ್ ಬಿರಿಯಾನಿ ತಯಾರಿಸಿ ಮಾರಾಟ ಮಾಡುವ ಅಕ್ಷಯ್ ಹೊಸ ವ್ಯಾಪಾರದಲ್ಲಿ ಯಶಸ್ವಿಯಾಗಿದ್ದಾರೆ.
ಬೀಯಿಂಗ್ ಮಾಲವಾನಿ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಅಕ್ಷಯ್ ಪಾರ್ಕರ್ ಬಗ್ಗೆ ಬರೆಯಲಾಗಿದ್ದು, ಪೋಸ್ಟ್ ವೈರಲ್ ಆಗಿದೆ.