ವರನಟ ಡಾ. ರಾಜ ಕುಮಾರ್ ಮೂವರು ಪುತ್ರರೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಬಿಗ್ ಸ್ಟಾರ್ ಆಗಿ ಚಿತ್ರರಂಗದಲ್ಲಿ ತಮ್ಮದೇ ಸ್ಥಾನಮಾನ, ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ರಾಜ್ ಕುಟುಂಬದ ಅನೇಕರು ಈಗಾಗಲೇ ನಾಯಕ ನಟರಾಗಿ, ನಿರ್ಮಾಪಕರಾಗಿ, ವಿತರಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕರಾಗಿ, ತಂತ್ರಜ್ಞರಾಗಿಯೂ ಹಲವರು ತೆರೆಮರೆಯಲ್ಲಿ ಸಕ್ರಿಯರಾಗಿದ್ದಾರೆ. ಇವೆಲ್ಲದರ ನಡುವೆ ಇದೇ ಮೊದಲ ಬಾರಿಗೆ ಡಾ. ರಾಜ್ ಕುಟುಂಬದಿಂದ ಚಿತ್ರರಂಗಕ್ಕೆ ನಾಯಕ ನಟಿಯೊಬ್ಬರ ಪರಿಚಯವಾಗುತ್ತಿದೆ. ಅವರೇ ಧನ್ಯ ರಾಮ್‌ಕುಮಾರ್. ಸದ್ಯ ಧನ್ಯಾ ರಾಮ್‌ಕುಮಾರ್ ಅವರ ಚೊಚ್ಚಲ ಚಿತ್ರ “ನಿನ್ನ ಸನಿಹಕೆ’ ಇಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧನ್ಯಾ ಮಾತನಾಡಿದ್ದಾರೆ…
1 ಇಂದು ನಿಮ್ಮ ಚೊಚ್ಚಲ ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಂದರ್ಭ ಹೇಗನಿಸುತ್ತಿದೆ?
ತುಂಬಾ ಎಕ್ಸೈಟ್ ಆಗಿದ್ದೀನಿ. ನನ್ನ ಮೊದಲ ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಭಯವಿದೆ. ಇದುವರೆಗೂ ನನ್ನನ್ನು ಯಾರೂ ತೆರೆಯ ಮೇಲೆ ನೋಡಿಲ್ಲ. ಈಗ ಮೊದಲ ಬಾರಿಗೆ ತೆರೆಮೇಲೆ ಬರುತ್ತಿದ್ದೇನೆ. ನೋಡಿ ಏನನ್ನುತ್ತಾರೆ ಎಂಬ ಕುತೂಹಲ ಇದೆ.
2 ಸಿನಿಮಾ ರೆಡಿಯಾಗಿದ್ದರೂ ಬಿಡುಗಡೆ ತಡವಾಯಿತು. ಆಗಿನ ನಿಮ್ಮ ಭಾವನೆ?
ಆ ಕ್ಷಣ ತುಂಬಾ ಕಷ್ಟವಾಗಿತ್ತು. ಅದರಲ್ಲೂ ಮೊದಲ ಬಾರಿಗೆ ನಟಿಸಿದ ನನ್ನಂಥವರಿಗೆ ಸಹಜವಾಗಿಯೇ ಎಕ್ಸೆ„ಟ್‌ಮೆಂಟ್ ಜಾಸ್ತಿ ಇರುತ್ತದೆ. ಆದರೆ, ಬಿಡುಗಡೆಯಾಗುತ್ತಿಲ್ಲ. ನನ್ನ ಮುಂದೆ ಒಂದು ಕೇಕ್ ಇಟ್ಟು, ಅದನ್ನು ತಿನ್ನುವ ಹಾಗಿಲ್ಲ ಎಂದು ಹೇಳಿದಂತಿತ್ತು. ಎಲ್ಲವೂ ರೆಡಿ ಇತ್ತು. ನಾನು ಸಿನಿಮಾ ನೋಡಿದ್ದೀನಿ. ಯಾರಿಗೂ ತೋರಿಸುವ ಹಾಗಿಲ್ಲ. ಒಂಥರಾ ಕಟ್ಟಿಹಾಕಿದ ರೀತಿ ಇತ್ತು. ಯಾವಾಗ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ. ಈಗ ಆ ದಿನ ಬಂದಿದೆ.
3 ನಿಮ್ಮ ಮನೆಯಲ್ಲಿ ಯಾರ್ಯಾರು ಈ ಸಿನಿಮಾ ನೋಡಿದ್ದಾರೆ?
ನಮ್ಮಲ್ಲಿ ನಾನು ಮತ್ತು ನಮ್ಮಮ್ಮ ಮಾತ್ರ ಈ ಸಿನಿಮಾ ನೋಡಿರೋದು. ಅಮ್ಮ ನೋಡಿ ಖುಷಿಯಾದರು. ನಾನು ಏನೂ ತಪ್ಪು ಮಾಡಿಲ. ಬಹಳ ಚೆನ್ನಾಗಿ ನಟಿಸಿದ್ದೀನಿ, ಹೊಸಬಳ ತರಹ ಅನಿಸುತ್ತಿಲ್ಲ ಎಂದು ಅಮ್ಮ ಹೇಳಿದರು. ಆದರೆ, ನನಗೆ ಕೆಲವು ತಪ್ಪುಗಳು ಕಾಣಿಸಿವೆ. ನನ್ನ ಹೇರ್‌ಸ್ಟೈಲ್ ಬದಲಿಸಬಹುದಿತ್ತು ಎನಿಸಿತು.
ಇದನ್ನೂ ಓದಿ:ಸಕ್ಸಸ್ ಮೀಟ್ ಸಂಭ್ರಮ ತಂದ ಭರವಸೆ: ಸಕ್ಸಸ್ ರೇಟ್ ಹೆಚ್ಚಾಗೋ ನಿರೀಕ್ಷೆ
4 ನೀವು ರಾಜ್ ಮೊಮ್ಮಗಳು ಎನ್ನುವುದು ನಿಮಗೆ ಚಿತ್ರರಂಗದಲ್ಲಿ ಎಷ್ಟು ಪ್ಲಸ್?
ಪ್ಲಸ್, ಮೈನಸ್ ಅನ್ನೋದಕ್ಕಿಂತ, ಇದು ನನಗೆ ದೊಡ್ಡ ಜವಾಬ್ದಾರಿ. ಇಲ್ಲಿ ಹುಟ್ಟಿರುವುದೇ ನನಗೆ ದೊಡ್ಡ ಆಶೀರ್ವಾದ. ಈ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಕ್ಕೆ ನಾನು ಸಿದ್ಧ. ಅವರ ಹೆಸರಿಗೆ ಯಾವ ರೀತಿಯಲ್ಲೂ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳೋದು ನನ್ನ ಕೆಲಸ.
5 ಹೊಸ ಕಥೆಗಳು ಬರುತ್ತಿವೆಯಾ?
ಸಾಕಷ್ಟು ಕಥೆಗಳು ಬರುತ್ತಿವೆ. ಇದುವರೆಗೂ ಕೇಳಿದ ಕಥೆಗಳು ಅಷ್ಟಾಗಿ ಇಷ್ಟವಾಗಲಿಲ್ಲ. ಅಭಿನಯಕ್ಕೆ ಇನ್ನಷ್ಟು ಸ್ಕೋಪ್ ಇರುವಂತಹ ಪಾತ್ರಗಳನ್ನು ಮಾಡಬೇಕು ಎಂಬುದು ನನ್ನಾಸೆ.ನನಗೆ ಸುಮ್ಮನೆ ಶೋಪೀಸ್ ಆಗಿರುವುದಕ್ಕೆ ಇಷ್ಟವಿಲ್ಲ. ನನಗೆ ನನ್ನ ಪ್ರತಿಭೆಯನ್ನು ಹೊರತರಬೇಕು ಎನ್ನುವಂತಹ ಆಸೆ ಇದೆ. ಆ ತರಹದ ಸಿನಿಮಾಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ.
ರವಿ ರೈ