ಮೈಸೂರು: ನಟ ದರ್ಶನ್ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಮಹತ್ವದ ಅಂಶ ಬೆಳಕಿಗೆ ಬಂದಿದ್ದು, ಅಪಘಾತಕ್ಕೀಡಾದ ಕಾರಿನಲ್ಲಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿಯನ್ನು ನಗರ ಪೊಲೀಸ್ ಆಯುಕ್ತರೇ ಬಹಿರಂಗಪಡಿಸಿದ್ದಾರೆ.
ನಗರದ ಹೆಬ್ಟಾಳು ಸಮೀಪದ ರಿಂಗ್‌ರಸ್ತೆಯಲ್ಲಿ ಸೆ.23ರಂದು ಮಧ್ಯರಾತ್ರಿ ಸಂಭವಿಸಿದ ಅಪಘಾತದಲ್ಲಿ ನಟರಾದ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಗಾಯಗೊಂಡಿದ್ದರು. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತಾದರೂ, ಅಪಘಾತ ನಡೆದಾಗ ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ. ದರ್ಶನ್ ಅವರ ಕಾರಿನಲ್ಲಿ ಇದ್ದವರು ನಾಲ್ವರೇ ಎಂದು ದರ್ಶನ್ ಆಪ್ತರು ಹೇಳುತ್ತಿದ್ದರು. ಆದರೆ, ಪ್ರಕರಣ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರ ರಾವ್, ಅಪಘಾತಕ್ಕೀಡಾದ ಕಾರಿನಲ್ಲಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಘಾತದ ಬಗ್ಗೆ ದರ್ಶನ್ ಅವರ ಡ್ರೆ„ವರ್ ಲಕ್ಷಣ್ ದೂರು ನೀಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಕಾರಿನಲ್ಲಿ ಐದು ಮಂದಿ ಇದ್ದರು. ನಾಲ್ವರಿಗೆ ಗಾಯವಾಗಿದೆ. ಆರು ಜನರೂ ಇರಬಹುದು. ಆದರೆ, ನಿರ್ದಿಷ್ಟವಾಗಿ ಎಷ್ಟು ಜನ ಕಾರಿನಲ್ಲಿದ್ದರು, ಕಾರಿನಲ್ಲಿದ್ದವರು ಮದ್ಯಪಾನ ಮಾಡಿದ್ದರೇ ಎಂಬ ಬಗ್ಗೆ ತನಿಖೆಯಾಗಲಿದೆ. ಅಪಘಾತಕ್ಕೆ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ಗೊತ್ತಾಗಲಿದೆ. ಅಪಘಾತದ ಸ್ಥಳದಲ್ಲಿ ಪೊಲೀಸರು ಇದ್ದ ಬಗ್ಗೆ ಮಾಹಿತಿ ಇಲ್ಲ. ಹಾಗೇನಾದರೂ ಪೊಲೀಸರ ಸಮ್ಮುಖದಲ್ಲಿ ಕಾರನ್ನು ಬೇರೆಡೆಗೆ ಸ್ಥಳಾಂತರ ಮಾಡಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಈ ಮಧ್ಯೆ, ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಎಫ್ಐಆರ್‌ನಲ್ಲಿ ನಾಲ್ಕು ಮಂದಿ ಇದ್ದರೆ, ಆಯುಕ್ತರು ಐದು ಮಂದಿ ಕಾರಿನಲ್ಲಿದ್ದರು ಎಂದಿದ್ದಾರೆ. ಆದರೆ, ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಮೆಡಿಕೋ ಲೀಗಲ್ ಕೇಸ್(ಎಂಎಲ್‌ಸಿ) ವರದಿ ಪ್ರಕಾರ ಕಾರಿನಲ್ಲಿ ಆರು ಮಂದಿ ಪ್ರಯಾಣಿಸಿದ್ದಾರೆ. ಅವರಲ್ಲಿ ನಾಲ್ವರು ಚಿಕಿತ್ಸೆ ಪಡೆದಿದ್ದು, ಇನ್ನಿಬ್ಬರು ಯಾವುದೇ ಗಾಯಗಳಿಲ್ಲದೆ ಆಸ್ಪತ್ರೆಯಲ್ಲಿ ಸಹಜ ತಪಾಸಣೆ ಮಾಡಿಸಿಕೊಂಡು ನಿರ್ಗಮಿಸಿದ್ದಾರೆ.
ದರ್ಶನ್‌ಗೆ ಮುಂದುವರಿದ ಚಿಕಿತ್ಸೆ
ಅಪಘಾತದಲ್ಲಿ ಗಾಯಗೊಂಡಿರುವ ದರ್ಶನ್‌ಗೆ ಬುಧವಾರವೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ದರ್ಶನ್ ಸ್ನೇಹಿತ ಆಂಟೋನಿಗೂ ಚಿಕಿತ್ಸೆ ಮುಂದುವರೆದಿದೆ. ಈ ನಡುವೆ, ದರ್ಶನ್ ತಾಯಿ ಮೀನಾ ತೂಗುದೀಪ ಶ್ರೀನಿವಾಸ್, ನಟ ಬುಲೆಟ್ ಪ್ರಕಾಶ್ ಆಸ್ಪತ್ರೆಗೆ ಭೇಟಿ ನೀಡಿ, ದರ್ಶನ್ ಅವರ ಆರೋಗ್ಯ ವಿಚಾರಿಸಿದರು.