ಕಾನ್ಪುರ : ಇಲ್ಲಿನ ಸರಕಾರಿ ಲಾಲಾ ಲಜಪತ್ ರಾಯ್ ಆಸ್ಪತ್ರೆಯ ಐಸಿಯು ನಲ್ಲಿ ಕಳೆದ 24 ತಾಸುಗಳಲ್ಲಿ ಐದು ರೋಗಿಗಳ ಸಾವು ಸಂಭವಿಸಿದೆ. ಮೃತ ರೋಗಿಗಳ ಬಂಧುಗಳು ಮತ್ತು ಮನೆಯವರು “ಐಸಿಯು ನಲ್ಲಿನ ಎಸಿ ಕೆಟ್ಟು ಹೋಗಿರುವುದೇ ಈ ಸಾವುಗಳಿಗೆ ಕಾರಣ’ ಎಂದು ದೂರಿದ್ದಾರೆ.
ಆಸ್ಪತ್ರೆಯ ಐಸಿಯು ಘಟಕದಲ್ಲಿ ಕಳೆದ ಬುಧವಾರದಿಂದಲೇ ಎಸಿ ಯಂತ್ರ ಕೆಟ್ಟುಹೋಗಿದ್ದು ಆ ಬಗ್ಗೆ ಹೆಡ್ ನರ್ಸ್ ಆಸ್ಪತ್ರೆಯ ಆಡಳಿತೆಗೆ ಲಿಖೀತ ದೂರು ನೀಡಿದ್ದರು. ಇದನ್ನು ಅನುಸರಿಸಿ ರೋಗಿಗಳಿಗೆ ಅನುಕೂಲವಾಗಲೆಂದು ಐಸಿಯು ಘಟಕದ ಕಿಟಕಿಗಳನ್ನು ತೆರೆದಿಡಲಾಗಿತ್ತು.
ಆದರೆ ನಗರದಲ್ಲೀಗ ವಿಪರೀತ ಸೆಖೆ, ಧಗೆ ಇರುವ ಕಾರಣ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ; ಕೊನೆಗೆ ನಾವೇ ಕೈಬೀಸಣಿಗೆಯನ್ನು ಬಳಸಿದೆವು; ಹಾಗಿದ್ದರೂ ಅದರಿಂದಲೂ ಯಾವುದೇ ಪ್ರಯೋಜನವಾಗಲಿಲ್ಲ; ಪರಿಣಾಮವಾಗಿ ಬುಧವಾರ – ಗುರುವಾರದ ನಡುವೆ ಐವರು ರೋಗಿಗಳು ಮೃತಪಟ್ಟರು ಎಂದು ರೋಗಿಗಳ ಮನೆಯವರು ಹೇಳಿದ್ದಾರೆ.
ಐಸಿಯು ಘಟಕದ ಪ್ರಭಾರಾಧಿಕಾರಿಯಾಗಿರುವ ಸೌರಭ್ ಅಗ್ರವಾಲ್ ಅವರು ಐಸಿಯು ಎಸಿ ಗಳು ಕೆಟ್ಟಿರುವುದು ಹೌದೆಂದು ಒಪ್ಪಿಕೊಂಡಿದ್ದಾರೆ; ಆದರೆ ಎಸಿ ಕೆಟ್ಟಿರುವುದರಿಂದಲೇ ರೋಗಿಗಳ ಸಾವು ಸಂಭವಿಸಿದೆ ಎಂದು ಹೇಳುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ಗಣೇಶ ಶಂಕರ ವಿದ್ಯಾರ್ಥಿ ಮೆಮೋರಿಯಲ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರು, “ಐಸಿಯುನಲ್ಲಿ ಎಸಿ ಕೆಟ್ಟಿರುವುದರಿಂದ ರೋಗಿಗಳ ಸಾವು ಸಂಭವಿಸಿಲ್ಲ; ಬದಲು ತೀವ್ರ ಅನಾರೋಗ್ಯ ಮತ್ತು ಹೃತ್‌ಕ್ರಿಯೆ ನಿಂತು ರೋಗಿಗಳು ಸತ್ತಿದ್ದಾರೆ’ ಎಂದು ಹೇಳಿದ್ದಾರೆ.
ಹಾಗಿದ್ದರೂ ಈ ಒಟ್ಟು ಘಟನೆಯ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟರಲ್ಲಿ ದೂರು ದಾಖಲಿಸಲಾಗಿದೆ. ಅವರು ಖುದ್ದು ಆಗಮಿಸಿ ತನಿಖೆ ನಡೆಸಿದ್ದಾರೆ. ಮೃತಪಟ್ಟಿರುವ ರೋಗಿಗಳ ಕುಟುಂಬದವರಿಗೆ ಎಲ್ಲ ರೀತಿಯಲ್ಲಿ ನೆರವಾಗುವ ಭರವಸೆಯನ್ನು ಅವರು ನೀಡಿದ್ದಾರೆ.
ಕೆಲ ತಿಂಗಳ ಹಿಂದೆ ಗೋರಖ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಇಲ್ಲದ ಕಾರಣಕ್ಕೆ ಹಲವಾರು ಶಿಶುಗಳ ಸಾವು ಸಂಭವಿಸಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ.