Advertisement

ಪಂಚ ರಾಜ್ಯ ಸಮರ: ಫೆ. 4-ಮಾ. 8ರ ವರೆಗೆ ಚುನಾವಣೆ, ಮಾ. 11ರಿಸಲ್ಟ್

03:45 AM Jan 05, 2017 | Team Udayavani |

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡ ನೋಟು ರದ್ದತಿ ನಿರ್ಧಾರದ “ಅಗ್ನಿಪರೀಕ್ಷೆ’ ಎಂದೇ ಬಿಂಬಿತವಾಗಿರುವ ಉತ್ತರಪ್ರದೇಶ, ಪಂಜಾಬ್‌ ಸೇರಿ ಐದು ರಾಜ್ಯಗಳ ಚುನಾವಣೆಗೆ ಕೇಂದ್ರೀಯ ಚುನಾವಣಾ ಆಯೋಗ ಬುಧವಾರ ಮುಹೂರ್ತ ನಿಗದಿ ಮಾಡಿದೆ. 

Advertisement

ಫೆ. 4ರಿಂದ ಮಾ. 8ರ ವರೆಗೂ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಉತ್ತರ  ಪ್ರದೇಶದಲ್ಲಿ ಏಳು, ಉತ್ತರಾ ಖಂಡ, ಪಂಜಾಬ್‌ ಮತ್ತು ಗೋವಾದಲ್ಲಿ ಒಂದು ಹಾಗೂ ಮಣಿಪುರದಲ್ಲಿ ಎರಡು ಹಂತಗಳ‌ಲ್ಲಿ ಮತದಾನ ಜರಗಲಿದೆ. ಐದೂ ರಾಜ್ಯಗಳ ಚುನಾವಣೆ ಫ‌ಲಿತಾಂಶ ಮಾ. 11ಕ್ಕೆ ಹೊರಬೀಳಲಿದೆ.

16 ಕೋಟಿ ಮತದಾರರು ಐದೂ ರಾಜ್ಯಗಳಲ್ಲಿ 690 ಶಾಸಕರನ್ನು ನಿರ್ಧರಿಸ ಲಿದ್ದಾರೆ. ಮತದಾನಕ್ಕಾಗಿ 1.85 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2012ಕ್ಕೆ ಹೋಲಿಸಿದರೆ ಮತಗಟ್ಟೆಗಳ ಸಂಖ್ಯೆಯಲ್ಲಿ ಶೇ. 15ರಷ್ಟು ಹೆಚ್ಚಳವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್‌ ಜೈದಿ ಪ್ರಕಟಿಸಿದರು.

ರಾಷ್ಟ್ರ ರಾಜಕಾರಣದ ಮೇಲೆ ಅತ್ಯಂತ ಪ್ರಭಾವ ಬೀರುವ, ಜನಸಂಖ್ಯೆ ಹಾಗೂ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಉತ್ತರಪ್ರದೇಶದ ಚುನಾವಣೆ ಮೇಲೆ ಹೆಚ್ಚಿನ ಕುತೂಹಲವಿದೆ. ಪಂಚರಾಜ್ಯಗಳ ಚುನಾವಣೆ ಮುಗಿದ ಎರಡೇ ವರ್ಷಗಳ‌ಲ್ಲಿ ಸಾರ್ವತ್ರಿಕ ಲೋಕಸಭೆ ಚುನಾವಣೆಯೂ ಎದುರಾಗುವುದರಿಂದ ಆ ರಾಜ್ಯದ ಫ‌ಲಿತಾಂಶ ಅತ್ಯಂತ ಮಹತ್ವದ್ದಾಗಿರಲಿದೆ. ಈ ರಾಜ್ಯವನ್ನು ಕೈವಶ ಮಾಡಿಕೊಳ್ಳಲು ಬಿಜೆಪಿ, ಬಿಎಸ್ಪಿ ಯತ್ನಿಸುತ್ತಿದ್ದರೆ, ಅಧಿಕಾರ ಉಳಿಸಿಕೊಳ್ಳಲು ಸಮಾಜವಾದಿ ಪಕ್ಷ ಹರಸಾಹಸ ಪಡುತ್ತಿದೆ. ಪಕ್ಷದೊಳಗಿನ ಆಂತರಿಕ ಕಿತ್ತಾಟ ಸಮಾಜವಾದಿ ಪಕ್ಷಕ್ಕೆ ಬಹುದೊಡ್ಡ ಸಮಸ್ಯೆಯಾಗಿದೆ. ಈ ಮೂರೂ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ಸಿನ ಭರಾಟೆ ಅಷ್ಟಾಗಿ ಕಂಡುಬರುತ್ತಿಲ್ಲ. 403 ವಿಧಾನಸಭೆ ಕ್ಷೇತ್ರಗಳಿರುವ ಉತ್ತರಪ್ರದೇಶದಲ್ಲಿ ಫೆ. 11ರಿಂದ ಮಾ. 8ರ ವರೆಗೆ 7 ಹಂತದಲ್ಲಿ ಚುನಾವಣೆ ನಡೆಯಲಿದೆ.

ಇನ್ನು ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ – ಬಿಜೆಪಿ ಮೈತ್ರಿಕೂಟ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಆಡಳಿತ ವಿರೋಧಿ ಅಲೆಯ ಬಿಸಿ ಅನುಭವಿಸುತ್ತಿದೆ. ಗದ್ದುಗೆಗೇರಲು ಕಾಂಗ್ರೆಸ್‌ ಶತಪ್ರಯತ್ನ ನಡೆಸುತ್ತಿದೆ. ಅಕಾಲಿ – ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವಣ ಅಖಾಡವಾಗಿದ್ದ ಪಂಜಾಬ್‌ನಲ್ಲಿ ಈ ಬಾರಿ ಆಮ್‌ ಆದ್ಮಿ ಪಕ್ಷ ಭರ್ಜರಿ ಸದ್ದು ಮಾಡುತ್ತಿದೆ. 117 ವಿಧಾನಸಬಾ ಕ್ಷೇತ್ರಗಳಿರುವ ಪಂಜಾಬ್‌ನಲ್ಲಿ ಫೆ. 4ರಂದು ಮತದಾನ ನಡೆಯಲಿದೆ.

Advertisement

ಉತ್ತರಾಖಂಡದಲ್ಲಿ ಕಾಂಗ್ರೆಸ್‌ ಆಳ್ವಿಕೆಯಲ್ಲಿದೆ. ಅಧಿಕಾರ ಉಳಿಸಿಕೊಳ್ಳಲು ಆ ಪಕ್ಷ ಪ್ರಯತ್ನಿಸುತ್ತಿದ್ದರೆ, ಗದ್ದುಗೆಗೇರಲು ಬಿಜೆಪಿ ಯತ್ನಿಸುತ್ತಿದೆ. 70 ಕ್ಷೇತ್ರಗಳನ್ನು ಹೊಂದಿರುವ ಉತ್ತರಾಖಂಡದಲ್ಲಿ ಫೆ.15ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌, ಬಿಜೆಪಿ ಹಾಗೂ ಆಪ್‌ ನಡುವೆ ಪೈಪೋಟಿ ಕಂಡುಬರುತ್ತಿರುವ ಗೋವಾದಲ್ಲಿ ಫೆ.4, ಹಾಗೂ ಇತ್ತೀಚೆಗೆ ಹಿಂಸಾಚಾರRಕೆ ಸಾಕ್ಷಿಯಾದ ಮಣಿಪುರದಲ್ಲಿ ಮಾ.4 ಹಾಗೂ ಮಾ.8ರಂದು ಚುನಾವಣೆ ನಡೆಯಲಿದೆ.

5 ರಾಜ್ಯ ಎಲೆಕ್ಷನ್‌ಗೆ 10 ಕ್ರಮ 
1. ಸುಧಾರಿತ ಫೋಟೋ ವೋಟರ್‌ ಸ್ಲಿಪ್‌ 
2. ಮತದಾರರಿಗೆ ಗೈಡ್‌
3. ಮತ ಕೇಂದ್ರಗಳಲ್ಲಿ ಏನು ಮಾಡಬೇಕು, ಮಾಡ ಬಾರದು ಎಂಬುದರ ಭಿತ್ತಿಪತ್ರ 
4.ಮತಯಂತ್ರ ಇಟ್ಟಿರುವ ಟೇಬಲ್‌ ಸುತ್ತ ಮುಚ್ಚಿರುವ ರಟ್ಟಿನ ಎತ್ತರ ಹೆಚ್ಚಳ
5. ಮಹಿಳೆಯರಿಗೆ ಪ್ರತ್ಯೇಕ ಬೂತ್‌, ಮಹಿಳಾ ಸಿಬಂದಿ ಮಾತ್ರ ಇರುವ ಬೂತ್‌ ಸ್ಥಾಪನೆ
6. ಮತ ಹಾಕಲು ಅಂಗವಿಕಲರಿಗೆ ನೆರವು
7. ಮತ ಹಾಕಿದ್ದಕ್ಕೆ ಚೀಟಿ ಖಾತ್ರಿ 
8. ಮತಯಂತ್ರಗಳಲ್ಲಿ ಅಭ್ಯರ್ಥಿ ಫೋಟೋ 
9. ಸೈನಿಕರಿಗೆ ಅಂಚೆ ಮತ ಬದಲು ಇ- ಮತ  
10. ಅಭ್ಯರ್ಥಿ ವೆಚ್ಚಕ್ಕೆ 28 ಲಕ್ಷ ಮಿತಿ.  20,000 ರೂ.ಗಿಂತ ಹೆಚ್ಚಿನ ದೇಣಿಗೆ ಚೆಕ್‌ನಲ್ಲಿ ಮಾತ್ರ 

ರಾಜ್ಯ    ಕ್ಷೇತ್ರಗಳ ಸಂಖ್ಯೆ    ಬಹುಮತಕ್ಕೆ ಬೇಕಾದ ಸ್ಥಾನ    ಚುನಾವಣೆ ದಿನಾಂಕ
1. ಉತ್ತರಪ್ರದೇಶ    403    202    7 ಹಂತ (ಫೆ.11, 15, 19, 23, 27, ಮಾ.4, 8)
2. ಪಂಜಾಬ್‌    117    59    ಫೆ.4
3. ಉತ್ತರಾಖಂಡ    70ಧಿ    36    ಫೆ.15
4. ಮಣಿಪುರ    60    31    2 ಹಂತ (ಮಾ.4, 8)
5. ಗೋವಾ    40    21    ಫೆ.4

ಫೆ.4 ಗೋವಾ, ಪಂಜಾಬ್‌ ಒಂದೇ ಹಂತದ ಮತದಾನ
ಫೆ. 11 ಯುಪಿ 1ನೇ ಹಂತ ಮತದಾನ
ಫೆ.15 ಯುಪಿ 2ನೇ ಹಂತ, ಉತ್ತರಾಖಂಡ ಒಂದೇ ಹಂತದ ಮತದಾನ
ಫೆ.19, ಯುಪಿ 3ನೇ ಹಂತ ಮತದಾನ
ಫೆ.23 ಯುಪಿ 4ನೇ ಹಂತದ ಮತದಾನ
ಫೆ.27 ಯುಪಿ 5ನೇ ಹಂತದ ಮತದಾನ
ಮಾ. 4 ಯುಪಿ 6ನೇ ಹಂತ, ಮಣಿಪುರ 1ನೇ ಹಂತದ ಮತದಾನ
ಮಾ.8 ಯುಪಿ 7ನೇ ಹಂತ, ಮಣಿಪುರ 2ನೇ ಹಂತದ ಮತದಾನ
ಮಾ.11 ಐದೂ ರಾಜ್ಯಗಳ ಮತಗಳ ಎಣಿಕೆ, ಫ‌ಲಿತಾಂಶ

Advertisement

Udayavani is now on Telegram. Click here to join our channel and stay updated with the latest news.

Next