Advertisement

ಪತ್ನಿಯರಿಬ್ಬರು ಸೇರಿ ಐವರ ಬಂಧನ

12:59 PM Apr 25, 2017 | Team Udayavani |

ದಾವಣಗೆರೆ: ತಮ್ಮನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿ, ಆ ದಂಧೆಯ ಹಣವನ್ನು ಜೂಜು, ಮೋಜಿಗೆ ಖರ್ಚು ಮಾಡುತ್ತಿದ್ದ ಪತಿಯ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಪತ್ನಿಯರು ಸೇರಿ ಒಟ್ಟು ಐವರು ಆರೋಪಿಗಳನ್ನು ಗಾಂಧಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

Advertisement

ಅಶೋಕ ನಗರದ ನಿವಾಸಿ ಹನುಮಂತಪ್ಪ (38)ನ ಕೊಲೆ ಪ್ರಕರಣದ ಸಂಬಂಧ ಆತನ ಪತ್ನಿಯರಾದ ರೇಣುಕಾ (30), ಸುಧಾ (26), ಕಾಯಿಪೇಟೆ ಕರ್ನಾಟಕ ಎಲೆಕ್ಟ್ರಿಕಲ್‌ ಅಂಗಡಿ ಮಾಲೀಕ ದಿನೇಶ್‌ (28), ಕೆಲಸಗಾರ ಮಾಲತೇಶ್‌ (26), ಮಂಜುನಾಥ(19)ರನ್ನು ಬಂಧಿಸಲಾಗಿದೆ ಎಂದು ಸೋಮವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಮೂಲತಃ ಹರಿಹರ ತಾಲ್ಲೂಕು ದೇವರಬೆಳಕೆರೆ ಗ್ರಾಮದ ಹನುಮಂತಪ್ಪ ಇಟ್ಟಿಗೆ ವ್ಯಾಪಾರ ಮಾಡುತ್ತಿದ್ದ. ಆತನ ಇಬ್ಬರು ಪತ್ನಿಯರು ನೀಡಿದ ಹೇಳಿಕೆಯಂತೆ, ತಮ್ಮ ಪತಿ ಹಣಕ್ಕಾಗಿ ನಮ್ಮಿಂದ ವೇಶ್ಯಾವಾಟಿಕೆ ಮಾಡಿಸುತ್ತಿದ್ದ. ಜೂಜು, ಮೋಜಿಗಾಗಿ ಹಣ ಕೇಳುತ್ತಿದ್ದ. ಈ ಸಂಬಂಧ ಅನೇಕ ಬಾರಿ ಜಗಳ ಸಹ ನಡೆದಿತ್ತು.

ವೇಶ್ಯಾವಾಟಿಕೆ ವಿರೋಧಿಸಿದರೆ ದೈಹಿಕ ಹಿಂಸೆ ನೀಡುತ್ತಿದ್ದನೆಂದು ಆರೋಪಿಗಳು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಸುಧಾಳನ್ನು ಕಾಯಿಪೇಟೆಯಲ್ಲಿನ ಕರ್ನಾಟಕ ಎಲೆಕ್ಟ್ರಿಕಲ್‌ ಮಾಲೀಕ ದಿನೇಶ್‌ ಪ್ರೇಮಿಸುತ್ತಿದ್ದ. ತನ್ನ ಪೀÅತಿಗಾಗಿ ಸುಧಾಳ ಪತಿ ಹನುಮಂತಪ್ಪ ಕೇಳಿದಾಗಲೆಲ್ಲಾ ದುಡ್ಡು ಕೊಟ್ಟಿದ್ದ. ಒಟ್ಟು 15 ಲಕ್ಷ ರೂ. ಗಳನ್ನು ಹನುಮಂತಪ್ಪಗೆ ನೀಡಿದ್ದನಂತೆ.

ಆ ಹಣವನ್ನ ಜೂಜು ಆಡಿ ಸೋತಿದ್ದ ಹನುಮಂತಪ್ಪ, ಮತ್ತೆ 10 ಲಕ್ಷ ರೂ. ಕೊಡಿಸುವಂತೆ ಸುಧಾಳನ್ನು ಒತ್ತಾಯಿಸುತ್ತಿದ್ದ. ಆತನ ಹಿಂಸೆ ತಾಳದೇ ಸುಧಾ, ರೇಣುಕಾ, ದಿನೇಶ್‌ ಆತನನ್ನು ಕೊಲೆಗೈಯ್ಯಲು ನಿರ್ಧರಿಸಿದ್ದರು ಎಂದು ಎಸ್ಪಿ ಹೇಳಿದರು. 

Advertisement

ಕಳೆದ ಏ.20ರಂದು ಮಧ್ಯರಾತ್ರಿ 2 ಗಂಟೆ ವೇಳೆಗೆ ದಿನೇಶ್‌, ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಾಲತೇಶ್‌ ಮತ್ತು ಮಂಜುನಾಥ್‌ರ ಸಹಾಯದೊಂದಿಗೆ ಹನುಮಂತಪ್ಪನನ್ನು ನಗರದ ಬಾತಿ ಬಳಿ ಇರುವ ಆಯುರ್ವೇದ ಕಾಲೇಜು ಬಳಿ ಕರೆದೊಯ್ದು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದು, ಆತನ ಶವವನ್ನು ಬಾತಿ ಕೆರೆಯಲ್ಲಿ ಎಸೆದಿದ್ದರೆಂದು ಅವರು ತಿಳಿಸಿದರು. 

ಬಾತಿ ಕೆರೆಯಲ್ಲಿ ಅಪರಿಚಿತ ಶವ ಪತ್ತೆಯಾದ ನಂತರ ತನಿಖೆ ನಡೆಸಿದಾಗ ಆತ ಅಶೋಕ ನಗರ ನಿವಾಸಿ ಎಂಬುದು ಬೆಳಕಿಗೆ ಬಂತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಗಾಂಧಿನಗರ ಪೊಲೀಸರು ಡಿಎಸ್‌ಪಿ ಅಶೋಕ್‌ ಕುಮಾರ್‌, ಸಿಪಿಐ ಉಮೇಶ್‌ರ, ಪಿಎಸ್‌ಐ ಗುರುಲಿಂಗಯ್ಯ ತಮ್ಮ ಸಿಬ್ಬಂದಿಯೊಂದಿಗೆ ಕೊಲೆ ಪ್ರಕರಣ ಭೇದಿಸಿದ್ದಾರೆ.

ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ, ಸಿಬ್ಬಂದಿಗೆ ಬಹುಮಾನ ನೀಡುವುದಾಗಿ ಎಸ್ಪಿ ತಿಳಿಸಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧ ವಂಟಿಗೋಡಿ, ಡಿಎಸ್‌ಪಿ ಅಶೋಕ್‌ಕುಮಾರ್‌, ಸಿಪಿಐ ಉಮೇಶ್‌, ಪಿಎಸ್‌ಐ ಗುರುಲಿಂಗಯ್ಯ ಸುದ್ದಿಗೋಷ್ಠಿಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next