ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂವ್ ನಲ್ಲಿ ಐವರು ಕಾಶ್ಮೀರೇತರ ಕಟ್ಟಡ ಕಾರ್ಮಿಕರನ್ನು ಉಗ್ರರು ಗುಂಡಿಕ್ಕಿ ಕೊಂಡಿರುವ ಘಟನೆ ಇಂದು ಸಂಜೆ ನಡೆದಿದೆ. ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಈ ಕಾರ್ಮಿಕರನ್ನು ಪಶ್ಚಿಮ ಬಂಗಾಲ ಮೂಲದವರೆಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯವವನ್ನು ಕೈಗೊಂಡಿದೆ. ಸ್ಥಳಕ್ಕೆ ಹೆಚ್ಚಿನ ಪಡೆಗಳನ್ನು ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಮಾಹಿತಿ ನೀಡಿದ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಭಾಗ್ ಸಿಂಗ್ ಅವರು ಈ ಕೃತ್ಯದ ಹಿಂದೆ ಪಾಕಿಸ್ಥಾನದ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕದ ಪರಿಸ್ಥಿತಿಯ ಕುರಿತಾಗಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಐರೋಪ್ಯ ಒಕ್ಕೂಟದ ಸಂಸದರ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿದ ದಿನದಂದೇ ಈ ದಾಳಿ ನಡೆದಿದೆ.
370ನೇ ವಿಧಿ ರದ್ದತಿಯ ಬಳಿಕ ಕಣಿವೆ ರಾಜ್ಯದಲ್ಲಿ ಬಿಗಿ ಭದ್ರತೆ ಏರ್ಪಟ್ಟಿದ್ದು ಇದರಿಂದ ಕೆರಳಿರುವ ಉಗ್ರರು ಈ ಭಾಗದಲ್ಲಿ ಓಡುವ ಟ್ರಕ್ ಗಳನ್ನು ಮತ್ತು ದಿನಗೂಲಿ ಕಾರ್ಮಿಕರನ್ನು ಗುರಿಯಾಗಿಸಿಯೇ ದಾಳಿ ನಡೆಸುತ್ತಿದ್ದಾರೆ. ಅದರಲ್ಲೂ ಹೊರರಾಜ್ಯದ ಕಾರ್ಮಿಕರನ್ನು ಗುರಿಯಾಗಿಸಿ ಉಗ್ರರು ನಡೆಸುತ್ತಿರುವ ದಾಳಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ತೀರಾ ಹೆಚ್ಚಾಗಿದೆ.
ಸೋಮವಾರದಂದು ಅನಂತನಾಗ್ ಜಿಲ್ಲೆಯಲ್ಲಿ ಟ್ರಕ್ ಚಾಲಕರೊಬ್ಬರನ್ನು ಉಗ್ರರು ಗುಂಡಿಕ್ಕಿ ಸಾಯಿಸಿದ್ದರು ಮತ್ತು ಆಗಸ್ಟ್ 05ರ ಬಳಿಕ ಇದುವರೆಗೆ ಉಗ್ರರು ಕಾಶ್ಮೀರದಲ್ಲಿ ಒಟ್ಟಾರೆ ನಾಲ್ಕು ಜನ ಟ್ರಕ್ ಚಾಲಕರನ್ನು ಕೊಂದಿದ್ದಾರೆ.