Advertisement

ಕನ್ನಡಕ್ಕೆ ಬೆಂಗಳೂರು ಹೆಸರಿನಲ್ಲಿ ಐದು ಹೊಸ ಫಾಂಟ್‌

09:29 AM Oct 03, 2022 | Team Udayavani |

ಚಾಮರಾಜನಗರ: ಕನ್ನಡಬಂಡೀಪುರ ಎಂಬ ಹೊಸ ಫಾಂಟ್‌ ನೀಡಿದ್ದ ಆರ್‌. ಮಂಜುನಾಥ ಅವರು ಈಗ ಬೆಂಗಳೂರು ಹೆಸರು ಹೊತ್ತ ಐದು ಹೊಸ ಕನ್ನಡ ಯೂನಿಕೋಡ್‌ ಫಾಂಟ್‌ಗಳನ್ನು ನೀಡಿದ್ದಾರೆ.

Advertisement

ಬೆಂಗಳೂರು ಡಾಟ್‌, ಬೆಂಗಳೂರು ಸ್ಮೂತ್ , ಬೆಂಗಳೂರು ಪಿಕ್ಸೆಲ್‌, ಬೆಂಗಳೂರು ಸ್ಕ್ವೇರ್‌ ಹಾಗೂ ಬೆಂಗಳೂರು ಎಲ್‌ಇಡಿ ಎಂಬ ಐದು ಫಾಂಟ್‌ಗಳನ್ನು ಮಂಜುನಾಥ್‌ ಹೊಸದಾಗಿ ರೂಪಿಸಿ ಬಿಡುಗಡೆ ಮಾಡಿದ್ದಾರೆ. ಅವರ ವೆಬ್‌ ಸೈಟಿಗೆ ಭೇಟಿ ನೀಡಿ ಈ ಫಾಂಟುಗಳನ್ನು ಉಚಿತವಾಗಿ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಯಾರು ಬೇಕಾದರೂ ಬಳಸಬಹುದಾಗಿದೆ. ಗಾಂಧಿ ಜಯಂತಿ ಹಾಗೂ ಸರಸ್ವತಿ ಪೂಜೆ ದಿನವಾದ ರವಿವಾರ ಫಾಂಟ್‌ಗಳನ್ನು ಸಾರ್ವಜನಿಕ ಬಳಕೆಗೆ ನೀಡಿದ್ದಾರೆ.

ಮೈಸೂರು ಜಿಲ್ಲೆಯ ತಿ. ನರಸೀಪುರದವರಾದ ಆರ್‌. ಮಂಜುನಾಥ ಪ್ರಸ್ತುತ ಮೈಸೂರಿನ ಕಂಪೆನಿಯೊಂದರಲ್ಲಿ ಲೀಡ್‌ ಡಿಸೈನರ್‌ ಆಗಿದ್ದಾರೆ. ಗ್ರಾಫಿಕ್‌ ಡಿಸೈನ್‌ನಲ್ಲಿ 11 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಇದೇ ವರ್ಷ ಜನವರಿಯಲ್ಲಿ ಬಂಡೀಪುರ ಎಂಬ ಫಾಂಟ್‌ ತಯಾರಿಸಿ ಬಿಡುಗಡೆ ಮಾಡಿದ್ದರು.

ಬೆಂಗಳೂರಿನ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಾರ್ಗಸೂಚಿಗಾಗಿ ಬಳಸುವ ಫಾಂಟ್‌ಗಳಲ್ಲಿ ಕನ್ನಡ ಅಕ್ಷರಗಳು ಅಷ್ಟೇನೂ ಪರಿಣಾಮಕಾರಿಯಾಗಿ ಡಿಸ್‌ಪ್ಲೇ ಆಗುತ್ತಿಲ್ಲದಿರುವುದನ್ನು ಗಮನಿಸಿದ್ದ ಮಂಜುನಾಥ್‌ ಇದಕ್ಕಾಗಿ ಹೊಸ ಫಾಂಟ್‌ ತಯಾರಿಸಬೇಕೆಂದು ನಿರ್ಧರಿಸಿದರು. ಅಲ್ಲಿರುವ ಹೆಸರುಗಳು ಸರಿಯಾಗಿ ಗೊತ್ತಾಗಬೇಕು ಎಂಬ ಉದ್ದೇಶ ಅವರದು.

Advertisement

ಫಾಂಟ್‌ಗಳ ಪರಿಚಯ
-ಬೆಂಗಳೂರು ಡಾಟ್‌: ಬಿಂದುಗಳನ್ನು ಜೋಡಿಸಿ ಅಕ್ಷರಗಳು ಮೂಡುವಂತೆ ಮಾಡಲಾಗಿದೆ.
-ಬೆಂಗಳೂರು ಸ್ಮೂತ್ : ಈ ಅಕ್ಷರಗಳ ಅಂಚಿನಲ್ಲಿ ನುಣುಪಾದ ವಿನ್ಯಾಸ ಮಾಡಲಾಗಿದೆ.
-ಬೆಂಗಳೂರು ಪಿಕ್ಸಲ್‌: ಅಕ್ಷರಗಳು ಅನೇಕ ಬಾಕ್ಸ್‌ಗಳನ್ನು ಸೇರಿಸಿದ ರೀತಿಯಲ್ಲಿವೆ.
-ಬೆಂಗಳೂರು ಸ್ಕ್ವೇರ್‌: ಇದರಲ್ಲಿ ಬಾಕ್ಸ್‌ ಗಳು ಒಟ್ಟಾಗಿ ಕೂಡಿಕೊಂಡಿವೆ.

ಡೌನ್‌ಲೋಡ್‌ ಹೇಗೆ?
ಈ ಫಾಂಟುಗಳು ಇಂಗ್ಲಿಷ್‌ನಲ್ಲೂ ದೊರಕುತ್ತವೆ. ರೆಗ್ಯುಲರ್‌ ಮತ್ತು ಬೋಲ್ಡ್‌ ಶೈಲಿಯಲ್ಲಿ ಲಭ್ಯವಿವೆ. ಫಾಂಟ್‌ಗಳನ್ನು ಈ ಲಿಂಕ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.
https://aksharatypestudio.in/fonts/bengaluru

ಕನ್ನಡ ಯೂನಿಕೋಡ್‌ನ‌ಲ್ಲಿ ಈಗ ಫಾಂಟುಗಳು ಸೀಮಿತ ಸಂಖ್ಯೆಯಲ್ಲಿವೆ. ಈ ಕೊರತೆಯನ್ನು ನೀಗಿಸಲು ನನ್ನ ಸಣ್ಣ ಪ್ರಯತ್ನ ಇದು. ಉಚಿತವಾಗಿ ನೀಡಿದರೆ ಹೆಚ್ಚು ಬಳಕೆಯಾಗುತ್ತದೆ. ನಮ್ಮ ಭಾಷೆ ಬೆಳವಣಿಗೆಗೆ ನನ್ನ ಕಿರುಕಾಣಿಕೆ.
-ಆರ್‌. ಮಂಜುನಾಥ್‌, ಫಾಂಟ್‌ ಜನಕ

 

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next