ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ ಪ್ರತಿ ದಿನವೂ ಏರಿಕೆಯಾಗುತ್ತಿದೆ. ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಮತ್ತೆ ಐವರಿಗೆ ಸೋಂಕು ತಗಲಿರುವುದು ದೃಢವಾಗಿದೆ. ಶನಿವಾರ ಸಂಜೆಯ ನಂತರ ಒಟ್ಟು ಏಳು ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ.
ಬೆಳಗಾವಿಯ ರಾಯಬಾಗ ತಾಲೂಕಿನ ನಾಲ್ವರಿಗೆ ಸೋಂಕು ತಗುಲಿದ್ದು, ಬಳ್ಳಾರಿ ಜಿಲ್ಲೆಯ ಓರ್ವನಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಐವರಿಗೂ ದಿಲ್ಲಿಯ ನಿಜಾಮುದ್ದೀನ್ ಸಭೆಯ ನಂಟಿದೆ ಎಂದು ಖಚಿತವಾಗಿದೆ.
ಇಂದು ಬೆಳಗಿನ ಹೆಲ್ತ್ ಬುಲೆಟಿನ್ ನಲ್ಲಿ ಬೆಂಗಳೂರು ಮಡಿವಾಳದ ಪತಿ ಪತ್ನಿಗೆ ಸೋಂಕು ಇರುವ ಬಗ್ಗೆ ಆರೋಗ್ಯ ಇಲಾಖೆ ಖಚಿತಪಡಿಸಿತ್ತು. ರವಿವಾರ ಸಂಜೆ ಮತ್ತೊಂದು ಬುಲೆಟಿನ್ ಬಿಡುಗಡೆ ಮಾಡಿದ್ದು, ಅದರಲ್ಲಿ ಹೊಸ ಐವರು ಸೋಂಕಿತರ ಮಾಹಿತಿ ನೀಡಿದೆ.
ಬೆಳಗಾವಿ ರಾಯಬಾಗದ ಮೂವರು ಮಹಿಳೆಯರು ಮತ್ತು ಓರ್ವ ಪುರುಷನಿಗೆ ಸೋಂಕು ದೃಢವಾಗಿದೆ. ಬಳ್ಳಾರಿಯ 41 ವರ್ಷ ವಯಸ್ಸಿನ ಪುರುಷನಿಗೆ ಸೋಂಕು ಇರುವ ಖಚಿತವಾಗಿದೆ.
ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 151ಕ್ಕೇರಿದೆ. ಇದರಲ್ಲಿ ನಾಲ್ವರು ಮೃತಪಟ್ಟಿದ್ದು, 12 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ.