ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪ್ರಕರಣಕ್ಕೆ ಸಂಬಂಧಿಸಿ ಗಲಭೆಯ ಮಾಸ್ಟರ್ ಮೈಂಡ್ ಎನ್ನಲಾದ ವಾಸಿಂ ಪಠಾಣ, ರೌಡಿಶೀಟರ್ ಅಬ್ದುಲ್ ಮಲ್ಲಿಕ ಬೇಪಾರಿ ಸೇರಿದಂತೆ ಒಂಬತ್ತು ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇದುವರೆಗೆ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 135ಕ್ಕೇರಿದೆ.
ಗಲಭೆ ನಂತರ ಕಳೆದ ಮೂರ್‍ನಾಲ್ಕು ದಿನಗಳಿಂದ ತಲೆಮರೆಸಿಕೊಂಡಿದ್ದ ವಾಸಿಂನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಈತ ಗಲಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನೇ, ಈತನ ಪೂರ್ವಾಪರ ಏನೆಂಬುದರ ಕುರಿತು ಪೊಲೀಸರು ಸುಮಾರು ಐದಾರು ತಾಸು ತೀವ್ರ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಆತ ತಾನು ಯಾವುದೇ ಮಸೀದಿಗೆ ಸಂಬಂಧಪಟ್ಟವನ್ನಲ್ಲವೆಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ನಂತರ ವಾಸಿಂ ಮೊದಲು ಹೈದರಾಬಾದ್ ನಲ್ಲಿದ್ದ. ನಂತರ ಪೊಲೀಸರು ಪತ್ತೆಗೆ ಮುಂದಾಗಿದ್ದಾರೆ ಎಂಬುದನ್ನು ಅರಿತು ಮುಂಬೈಗೆ ತೆರಳಿ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಾನೆ.
ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರ ತಂಡ ಬುಧವಾರ ರಾತ್ರಿ ಆತನನ್ನು ವಶಕ್ಕೆ ಪಡೆದು ಬೆಳಗಾವಿಗೆ ಕರೆ ತಂದಿದ್ದಾರೆ. ಗುರುವಾರ ಮಧ್ಯಾಹ್ನ ಹಳೇಹುಬ್ಬಳ್ಳಿ ಠಾಣೆಗೆ ಹೆಚ್ಚಿನ ವಿಚಾರಣೆಗಾಗಿ ಕರೆದುಕೊಂಡು ಬಂದಿದ್ದಾರೆ. ವಾಸಿಂ ಬಂಧನವಾದ ಬಗ್ಗೆ ಸಾರ್ವಜನಿಕವಾಗಿ ತಿಳಿದರೆ ಹೆಚ್ಚಿನ ಜನರು ಸೇರಬಹುದೆಂಬ ಹಿನ್ನೆಲೆಯಲ್ಲಿ ಆತ ಬೆಳಗಾವಿಯಲ್ಲಿದ್ದಾಗ ಅವನಿಂದ, ನಾನು ಘಟನೆಯಲ್ಲಿ ಯಾವುದೇ ತಪ್ಪು ಮಾಡಿಲ್ಲ. ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಿ ಎಂಬ ವಿಡಿಯೋವುಳ್ಳ ಸಂದೇಶ ಹರಿಬಿಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಗುರುವಾರ ಪೊಲೀಸರು ಬಂಧಿತರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲು ಹಳೇಹುಬ್ಬಳ್ಳಿ ಠಾಣೆಯಿಂದ ಕರೆದೊಯ್ಯುತ್ತಿದ್ದಾಗ ಅವರ ಕುಟುಂಬದ ಸದಸ್ಯರೆಲ್ಲ ಸೇರಿದ್ದರು. ಗಲಭೆಗೆ ಸಂಬಂಧಿಸಿ ಬಂಧಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತ ಸಾಗಿದೆ.