ಧಾರವಾಡ: ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗದಲ್ಲಿ ತೋಟಗಾರಿಕೆ ಇಲಾಖೆಯು ಮೇ 25ರಿಂದ ಮೇ 29ರ ವರೆಗೆ ತೋಟಗಾರಿಕೆ ಇಲಾಖೆ ಆವರಣದಲ್ಲಿ ವಿವಿಧ ತಳಿ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಿದೆ.
ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ ಮತ್ತು ಹಾವೇರಿ ಜಿಲ್ಲೆಗಳ 50ಕ್ಕೂ ಹೆಚ್ಚು ಮಾವು ಬೆಳೆಗಾರರು ಈ ಮೇಳದಲ್ಲಿ ಭಾಗವಹಿಸಲು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ. ಆಪೂಸ್, ಕಲ್ಮಿ, ಬೈಗಂಪಲ್ಲಿ, ಕರೆಇಶಾಡ, ಮಲ್ಲಿಕಾ, ತೋತಾಪುರಿ, ನೀಲಂ ಸೇರಿದಂತೆ 35ಕ್ಕೂ ಹೆಚ್ಚು ತಳಿಗಳ ಮಾವುಗಳು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಬರಲಿವೆ. ಪ್ರತಿ ಕೆಜಿ ಮಾವಿನ ಹಣ್ಣಿಗೆ ಕನಿಷ್ಠ 150ರಿಂದ ಗರಿಷ್ಠ 250 ರೂ. ವರೆಗೆ ದರ ಇರಲಿದ್ದು, ಸಾರ್ವಜನಿಕರಿಗೆ ವಿವಿಧ ತಳಿಯ ಉತ್ತಮ ಮಾವಿನ ಹಣ್ಣುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. 27ರಂದು ಬೆಳಗ್ಗೆ 11 ಗಂಟೆಗೆ ತೋಟಗಾರಿಕೆ ಕಚೇರಿ ಆವರಣದಲ್ಲಿರುವ ಹಾರ್ಟಿಕ್ಲಿನಿಕ್ ಭವನದಲ್ಲಿ ಮಾವಿನ ಬೆಳೆಯ ಕುರಿತು ಕಾರ್ಯಾಗಾರ ಆಯೋಜಿಸಲಾಗಿದೆ. ಮಾವು ಬೆಳೆದ ಪ್ರಗತಿಪರ ರೈತರು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು, ತಜ್ಞರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಉಪಯುಕ್ತ ಮಾಹಿತಿ ನೀಡಲಿದ್ದಾರೆ.
Advertisement
25ರಂದು ಸಂಜೆ 4 ಗಂಟೆಗೆ ಡಿಸಿ ದೀಪಾ ಚೋಳನ್ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಾರಾಟ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಜಿಪಂ ಸಿಇಒ ಡಾ|ಬಿ.ಸಿ. ಸತೀಶ್ ಅಧ್ಯಕ್ಷತೆ ವಹಿಸಲಿದ್ದು, ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಭಾಗವಹಿಸಲಿದ್ದಾರೆ.
ಕಳೆದ ವರ್ಷದ ಮಾವು ಮಾರಾಟ ಮೇಳದಲ್ಲಿ ನೂರಕ್ಕೂ ಹೆಚ್ಚು ಮಾವು ಬೆಳೆಗಾರರು ಭಾಗವಹಿಸಿ, ಸುಮಾರು 64 ಟನ್ ಮಾವಿನ ಹಣ್ಣು ಮಾರಾಟ ಮಾಡಿದ್ದರು. ಇದರಿಂದ 1 ಕೋಟಿ 29 ಸಾವಿರ ರೂ. ವ್ಯವಹಾರವಾಗಿತ್ತು. ಈಗ ಶನಿವಾರದಿಂದ ಆರಂಭಗೊಳ್ಳಲಿರುವ ಮೇಳದಲ್ಲಿ ವಿವಿಧ ತಳಿ ಮಾವು ಹಣ್ಣುಗಳ ಪ್ರದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, 40ಕ್ಕೂ ಹೆಚ್ಚು ಸುಸಜ್ಜಿತ ಮಳಿಗೆ ಹಾಗೂ ಶಾಮಿಯಾನ ಹಾಕಿಸಲಾಗಿದೆ.
•ಡಾ|ರಾಮಚಂದ್ರ ಮಡಿವಾಳ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ
Related Articles
Advertisement