Advertisement

ಬೆಂಗಳೂರಿನಲ್ಲಿ ಐದು ದಿನ ಮೇಕದಾಟು ಪಾದಯಾತ್ರೆ: ರಾಮಲಿಂಗಾರೆಡ್ಡಿ

07:06 PM Feb 25, 2022 | Team Udayavani |

ಬೆಂಗಳೂರು: ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮೇಕೆದಾಟು ಪಾದಯಾತ್ರೆ ಮಾರ್ಚ್‌ 27ರಿಂದ ರಾಮನಗರದಿಂದ ಮತ್ತೆ ಆರಂಭವಾಗಲಿದ್ದು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರದಿಂದ ಆರಂಭವಾಗುವ ಪಾದಯಾತ್ರೆ ಮೊದಲ ದಿನ ಬಿಡದಿ ತಲುಪಿ ಅಲ್ಲಿ ತಂಗಲಾಗುವುದು. ನಂತರ 28ರಂದು ಬಿಡದಿಯಿಂದ ಬೆಂಗಳೂರಿಗೆ ಬರಲಾಗುವುದು ಎಂದು ಹೇಳಿದರು.

ಈ ಮೊದಲು ಬೆಂಗಳೂರಿನಲ್ಲಿ 5 ದಿನ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಬಜೆಟ್‌ ಅಧಿವೇಶನ ಹಿನ್ನೆಲೆಯಲ್ಲಿ ಕೇವಲ 3 ದಿನಕ್ಕೆ ಇಳಿಸಲಾಗಿದೆ. ಕೆಂಗೇರಿಯಿಂದ ನಾಯಂಡನಹಳ್ಳಿ, ಬನಶಂಕರಿ ದೇವಸ್ಥಾನ, ಜಯದೇವ ಆಸ್ಪತ್ರೆ, ಬಿಟಿಎಂ, ಕೋರಮಂಗಲ, ವಿವೇಕನಗರ, ಹಲಸೂರು, ಜೆಸಿ ಪಾಳ್ಯ, ಟಿವಿ ಟವರ್‌ ಮೂಲಕ ಅರಮನೆ ಮೈದಾನದವರೆಗೆ. ನಂತರ ಸ್ಯಾಕಿ ಟ್ಯಾಂಕ್‌, ಮಲ್ಲೇಶ್ವರಂ, ಶೇಷಾದ್ರಿಪುರಂ, ರೈಲ್ವೆ ನಿಲ್ದಾಣ, ಚಾಮರಾಜಪೇಟೆ, ಅಲ್ಲಿಂದ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನಕ್ಕೆ ತಲುಪಲಿದೆ ಎಂದು ಹೇಳಿದರು.

ಈ ಪಾದಯಾತ್ರೆಯಲ್ಲಿ ಹೆಚ್ಚಿನ ಜನ ಭಾಗವಹಿಸಬೇಕು. ಈ ಮೂರು ದಿನಗಳಲ್ಲಿ ವಾಹನ ಸಂಚಾರ ದಟ್ಟಣೆ ತೊಂದರೆ ಆಗಬಹುದು. ನಾವು ಈ ಹೋರಾಟವನ್ನು ಜನರ ಹಿತಕ್ಕಾಗಿ ಮಾಡುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು.ನಾವು ಹೋರಾಟ ಮಾಡದಿದ್ದರೆ ಈ ಬಂಡ ಬಿಜೆಪಿ ಸರ್ಕಾರ ಎಚ್ಛೆತ್ತುಕೊಳ್ಳುವುದಿಲ್ಲ. ಡಿಪಿಆರ್‌ ಒಪ್ಪಿಗೆ ಪಡೆದು 3 ವರ್ಷಗಳಾದರೂ ಪರಿಸರ ಇಲಾಖೆ ಅನುಮತಿ ಪಡೆಯಲು ಇವರಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಬೆಂಗಳೂರಿಗೆ ಕನಕಪುರ ರಸ್ತೆ, ಮೈಸೂರು ರಸ್ತೆ, ಹೊಸೂರು, ಸರ್ಜಾಪುರ, ಹೊಸಕೋಟೆ, ಹೆಣ್ಣೂರು, ಬಳ್ಳಾರಿ, ಮಾಗಡಿ, ಹೆಸರಘಟ್ಟ ರಸ್ತೆ ಸೇರಿದಂತೆ ಸುಮಾರು 13 ರಸ್ತೆಗಳು ಬೆಂಗಳೂರನ್ನು ಸೇರಲಿದ್ದು, ಈ ಎಲ್ಲ ರಸ್ತೆಗಳಲ್ಲಿ ಸುಮಾರು 15 ಕಿ.ಮೀ ದೂರದಷ್ಟು ಪ್ರದೇಶ ಅಭಿವೃದ್ಧಿಯಾಗಿದ್ದು ಇವರು ಕೊಳವೆಬಾವಿ ಹಾಗೂ ಟ್ಯಾಂಕರ್‌ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಈ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಬೇಕಾಗಿದೆ. ಮೇಕೆದಾಟು ಅನುಷ್ಟಾನಗೊಂಡರೆ ಮುಂದಿನ 50 ವರ್ಷಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ತಿಳಿಸಿದರು.

Advertisement

ಇದನ್ನೂ ಓದಿ :ವಿಶ್ವವನ್ನು ಮೂರನೇ ಮಹಾಯುದ್ಧದ ಮೆಟ್ಟಿಲ ಬಳಿ ನಿಲ್ಲಿಸಿದ‌ ಮಾರ್ಷಲ್ ಹಾಗೂ ವಿದೂಷಕ

ಇದರ ಜತೆಗೆ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ಕುಡಿಯುವ ನೀರು ಪೂರೈಕೆಗೆ ಮೇಕೆದಾಟು ಯೋಜನೆ ಅಗತ್ಯವಾಗಿದೆ. ಈ ಯೋಜನೆಯಿಂದ 2.5 ಕೋಟಿ ಜನರಿಗೆ ಕುಡಿಯುವ ನೀರು ಸಿಗುತ್ತದೆ. ಇದರ ಜತೆಗೆ ಈ ಯೋಜನೆಯಿಂದ 400 ಮೇ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಬಹುದು ಎಂದು ಹೇಳಿದರು.
ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಯೋಜನೆಯ ಡಿಪಿಆರ್‌ ಸಲ್ಲಿಕೆ ಮಾಡಲಾಗಿದ್ದು ಅನುಮತಿ ಪಡೆಯಲಾಗಿತ್ತು. ನಂತರ ಬಂದ ಬಿಜೆಪಿ ಡಬಲ್‌ ಇಂಜಿನ್‌ ಸರ್ಕಾರ ಕೇಂದ್ರ ಪರಿಸರ ಇಲಾಖೆ ಅನುಮತಿ ಪಡೆಯಲು ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು.

ನಾವು ರಾಜ್ಯದ ನೆಲ, ಜಲ, ಭಾಷೆ ವಿಚಾರ ಬಂದಾಗ ಎಲ್ಲ ಪಕ್ಷದ ನಾಯಕರನ್ನು ಕರೆದು ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗುತ್ತಿದ್ದೆವು. ಆದರೆ ಇವರು ಬೇರೆ ಪಕ್ಷದವರನ್ನು ಪರಿಗಣಿಸುತ್ತಿಲ್ಲ. ಇನ್ನು ಇವರುಗಳು ಸಂಸತ್ತಿನಲ್ಲೂ ರಾಜ್ಯದ ವಿಚಾರ ಪ್ರಸ್ತಾಪ ಮಾಡುತ್ತಿಲ್ಲ. ಮೋದಿ ಅವರಿಗೆ ನಮಸ್ಕಾರ ಹಾಕಿ ಬರುತ್ತಿದ್ದಾರೆಯೇ ಹೊರತು, ರಾಜ್ಯದ ವಿಚಾರ ಚರ್ಚಿಸುವ ಶಕ್ತಿ ಹೊಂದಿಲ್ಲ.ಹೀಗಾಗಿ ಈ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಈ ಪಾದಯಾತ್ರೆ ಮಾಡಲಾಗುತ್ತಿದೆ ಎಂದರು.

ಬಿಜೆಪಿಯವರು ಬೆಂಗಳೂರಿಗೆ ಯಾವುದೇ ಕೊಡುಗೆ ನೀಡಿಲ್ಲ. ಬಿಜೆಪಿ ಅಪಪ್ರಚಾರ ಮಾಡುವುದನ್ನು ಇನ್ನಾದರೂ ಬಿಟ್ಟು, ಮುಖ್ಯಮಂತ್ರಿಗಳು ಕೇಂದ್ರದಿಂದ ಅನುಮತಿ ಪಡೆದು ಯೋಜನೆ ಆರಂಭಿಸಲಿ ಸರ್ಕಾರಕ್ಕೆ ಬೇಕಾಗಿರುವ ಎಲ್ಲ ಸಹಕಾರವನ್ನು ನಾವು ನೀಡುತ್ತೇವೆ.

ಕಾಂಗ್ರೆಸ್‌ ಪಕ್ಷ ಒಂದು ರೂಪಾಯಿ ಕೆಲಸ ಮಾಡಿದರೆ 10 ಪೈಸೆ ಪ್ರಚಾರ ಪಡೆಯುತ್ತೇವೆ, ಆದರೆ ಬಿಜೆಪಿ ಅವರು 10 ಪೈಸೆ ಕೆಲಸ ಮಾಡಿ ಒಂದು ರೂಪಾಯಿಯಷ್ಟು ಪ್ರಚಾರ ಪಡೆಯುತ್ತಾರೆ. ಮೋದಿ ಅವರಿಂದ ಹಿಡಿದು ಎಲ್ಲ ಬಿಜೆಪಿ ನಾಯಕರೂ ಹೀಗೆ ಮಾಡುತ್ತಾರೆ ಎಂದರು.

ಪಾದಯಾತ್ರೆ ಮಲ್ಲೇಶ್ವರಂ ಮಾರ್ಗದಲ್ಲಿ ಬರಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರಾ ಎಂಬ ಪ್ರಶ್ನೆಗೆ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ್‌ ಅವರು ನಮ್ಮ ಕ್ಷೇತ್ರವನ್ನು ಪಾದಯಾತ್ರೆಯಿಂದ ಹೋರಾಗಿಡಬೇಡಿ ಎಂದು ಸಲಹೆ ನೀಡಿದ್ದರು. ಅಲ್ಲದೆ ಅರಮನೆ ಮೈದಾನದಿಂದ ನೇರವಾಗಿ ಬಂದರೆ ಸಿಎಂ ನಿವಾಸದ ಬಳಿ ಸಂಚಾರ ದಟ್ಟಣೆ ಉದ್ಭವಿಸುವ ಸಾಧ್ಯತೆ ಇದೆ. ಇದನ್ನು ತಡೆಯಲು ಈ ಮಾರ್ಗ ಆಯ್ಕೆ ಮಾಡಿದ್ದೇವೆ. ಇದರ ಹೊರತಾಗಿ ಬೇರೆ ಕಾರಣವಿಲ್ಲ ಎಂದು ಉತ್ತರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ವಕ್ತಾರರಾದ ಸಿ.ಆರ್‌ ನಾರಾಯಣಪ್ಪ, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ ಹಾಗೂ ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಎಂ.ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next