ಪಾಟ್ನಾ: ಬಿಹಾರದಲ್ಲಿ ಸೇತುವೆ ಕುಸಿತ ಪ್ರಕರಣಗಳ ಸಂಖ್ಯೆ ಏರುತ್ತಿದೆ, ಶುಕ್ರವಾರ ಬಿಹಾರದ ಮಧುಬನಿ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದಿದ್ದು ಇದರೊಂದಿಗೆ ಕಳೆದ ಒಂಬತ್ತು ದಿನಗಳಲ್ಲಿ ಬಿಹಾರದಲ್ಲಿ ಒಟ್ಟು ಐದು ಸೇತುವೆಗಳು ಬಿದ್ದಂತಾಗಿದೆ.
ಮಧುಬನಿ ಜಿಲ್ಲೆಯ ಭೇಜಾ ಪೊಲೀಸ್ ಠಾಣೆಯ ಮಾದೇಪುರ್ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು, ಸುಮಾರು 75 ಮೀ ಉದ್ದದ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಈ ವೇಳೆ ಒಂದು ಭಾಗ ಕುಸಿದು ಬಿದ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಮಾರು ಮೂರೂ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆಯು 2021 ರಿಂದ ನಿರ್ಮಾಣ ಆರಂಭಗೊಂಡಿದ್ದು ಇದುವರೆಗೂ ಪೂರ್ಣಗೊಂಡಿಲ್ಲ ಅಲ್ಲದೆ ಬಿಹಾರ ಸರ್ಕಾರದ ಗ್ರಾಮೀಣ ಕಾಮಗಾರಿ ಇಲಾಖೆಯು ಸೇತುವೆ ನಿರ್ಮಿಸುತ್ತಿದೆ ಎನ್ನಲಾಗಿದೆ.
ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಎರಡು ಪಿಲ್ಲರ್ ಗಾಲ ನಡುವೆ ಇರುವ ಉದ್ದನೆಯ ಗರ್ಡರ್‌ನ ಭಾಗ ಕುಸಿದು ಬಿದ್ದಿದೆ ಘಟನೆ ನಡೆಯುತ್ತಿದ್ದಂತೆ ಅಧಿಕಾರಿಗಳು ಸೇತುವೆಯ ಭಾಗಕ್ಕೆ ಪ್ಲಾಸ್ಟಿಕ್ ಹೊದಿಸಿ ಏನು ಆಗಿಲ್ಲ ಎಂಬಂತೆ ನಟಿಸಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿ ಮಾಹಿತಿ ನೀಡಿದ ಅಧಿಕಾರಿಗಳು ಜೂನ್ 24 ರ ಮೊದಲೇ ಈ ಸೇತುವೆ ಕುಸಿದಿರುವುದಾಗಿ ಹೇಳಿಕೊಂಡಿದ್ದಾರೆ. ಅಂದಿನಿಂದಲೇ ಸೇತುವೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಶಿಶ್ ಪಾಸ್ವಾನ್ ಅವರು ಗುತ್ತಿಗೆದಾರ ಅಮರನಾಥ್ ಝಾ ಅವರಿಗೆ ಪತ್ರದ ಮೂಲಕ ತಿಳಿಸಿದ್ದು ಪುನರ್ ನಿರ್ಮಾಣ ಕಾರ್ಯ ನಡೆಸಬೇಕಿದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗುತ್ತಿಗೆದಾರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಸೇತುವೆಯ ಗರ್ಡರ್ ಕುಸಿದಿದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಇತ್ತೀಚಿಗೆ ನಡೆದ ಸೇತುವೆ ಕುಸಿತ ಪ್ರಕರಣಗಳು ಇಲ್ಲಿನ ಭ್ರಷ್ಟಾಚಾರವನ್ನು ಎತ್ತಿ ತೋರಿಸುವಂತಿದೆ. ಕಳೆದ ಒಂಬತ್ತು ದಿನಗಳಲ್ಲಿ ಐದು ಸೇತುವೆಗಳು ಕುಸಿದಿರುವುದು ಸೇತುವೆ ನಿರ್ಮಾಣದಲ್ಲಿನ ಗುಣಮಟ್ಟದ ಕುರಿತು ಅನುಮಾನ ಮೂಡಿಸುವಂತಿದೆ.
ಇದನ್ನೂ ಓದಿ: Ujire: ಬೆಳ್ಳಂಬೆಳಗ್ಗೆ ಭೀಕರ ಅಪಘಾತ;ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಿಧನ