ಮಹಾಲಿಂಗಪುರ: ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಹಾಗೂ ಘಟಪ್ರಭಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಬಾಗಲಕೋಟೆ ಜಿಲ್ಲೆಯ ಐದು ಸೇತುವೆ ಜಲಾವೃತಗೊಂಡಿವೆ.
ಹಿರಣ್ಯಕೇಶಿ ನದಿಯ ನೀರು ಧುಪದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಹರಿದು ಬರುತ್ತಿರುವುದರಿಂದ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ, ನಂದಗಾಂವ, ಮುಧೋಳ ತಾಲೂಕಿನ ಮಿರ್ಜಿ, ಚನ್ನಾಳ, ಜಾಲಿಬೇರಿ ಸೇರಿದಂತೆ ಒಟ್ಟು ಐದು ಸೇತುವೆಗಳು ಜಲಾವೃತವಾಗಿವೆ.
ಎರಡನೇ ಬಾರಿ ಸೇತುವೆಗಳು ಬಂದ್: ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ನಂದಗಾಂವ-ಅವರಾದಿ ಮತ್ತು ಅಕ್ಕಿಮರಡಿ-ಮಿರ್ಜಿ ಸೇತುವೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಕಳೆದ ಹದಿನೈದು ದಿನಗಳಲ್ಲಿ ಎರಡನೇ ಬಾರಿಗೆ ಸೇತುವೆಗಳು ಜಲಾವೃತವಾಗಿವೆ.
ಮುಧೋಳ ತಾಲೂಕಿನ ಢವಳೇಶ್ವರ ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ಸೇತುವೆ ಮಾರ್ಗವಾಗಿ ನೆರೆಯ ಗೋಕಾಕ ತಾಲೂಕಿನ ಸಂಚಾರ ಕಡಿತಗೊಂಡಿದೆ. ನದಿ ಪಕ್ಕದ ಹೊಲಗದ್ದೆಗಳಿಗೂ ನೀರು ನುಗ್ಗಿದೆ.
ಗೋಕಾಕ ಮತ್ತು ಮೂಡಲಗಿ ತಾಲೂಕಿನ ಅವರಾದಿ, ಯರಗುದ್ರಿ, ತಿಮ್ಮಾಪುರ, ಢವಳೇಶ್ವರ, ಅರಳಿಮಟ್ಟಿ, ವೆಂಕಟಾಪುರ, ಬೀಸನಕೊಪ್ಪ ಗ್ರಾಮಗಳ ಜನರು ದಿನನಿತ್ಯ ವ್ಯಾಪಾರ ವಹಿವಾಟುಗಳಿಗೆ ಮಹಾಲಿಂಗಪುರವನ್ನೆ ಹೆಚ್ಚಾಗಿ ಅವಲಂಬಿಸಿದ್ದು, ಸೇತುವೆ ಜಲಾವೃತಗೊಂಡಿದ್ದರಿಂದ ಗ್ರಾಮಗಳ ಜನತೆ ತೀವ್ರ ತೊಂದರೆ ಅನುಭವಿಸುತಿದ್ದಾರೆ.