ಚಾಮರಾಜನಗರ: ಬ್ರಿಟನ್‌ನಿಂದ ಐವರು ಜಿಲ್ಲೆಗೆ ಆಗಮಿಸಿದ್ದು, ಇಬ್ಬರ ಕೋವಿಡ್ ಪರೀಕ್ಷೆ ನೆಗೆಟಿವ್ ಬಂದಿದೆ. ಇನ್ನು ಮೂವರ ಗಂಟಲು ಮಾದರಿ ಪರೀಕ್ಷೆ ನಡೆಸಲಾಗಿದ್ದು, ನಾಳೆ ಫಲಿತಾಂಶ ನಿರೀಕ್ಷಿಸಲಾಗಿದೆ. ಇವರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಗ್ರಾಮದ ಮೂವರು ಹಾಗೂ ಹನೂರು ತಾಲೂಕಿನ ಒಡೆಯರ ಪಾಳ್ಯದ ಟಿಬೆಟಿಯನ್ ಕಾಲೋನಿಯ ಇಬ್ಬರು ಲಂಡನ್‌ನಿಂದ ಆಗಮಿಸಿದ್ದಾರೆ.
ಐರ್ಲೆಂಡ್‌ನಲ್ಲಿ ಇಂಜಿನಿಯರ್ ಆಗಿರುವ ವ್ಯಕ್ತಿ ಮೂಲತಃ ಹಾಸನ ಜಿಲ್ಲೆಯವರಾಗಿದ್ದು, ಡಿ.18ರಂದು ಹೊರಟು, ಲಂಡನ್ ಮಾರ್ಗವಾಗಿ ಬ್ರಿಟಿಷ್ ಏರ್‌ವೇಸ್‌ನಲ್ಲಿ ಡಿ. 19ರಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಕ್ವಾರಂಟೈನ್ ನಲ್ಲಿರುವ ಉದ್ದೇಶದಿಂದ ಚಿಕ್ಕಲ್ಲೂರಿನ ತೋಟದ ಮನೆಯಲ್ಲಿರುವ ಮಾವನ ಮನೆಗೆ ಬಂದಿದ್ದಾರೆ. ಗಂಡ ಹೆಂಡತಿ ಮಗು ಆಗಮಿಸಿದ್ದು, ಆರೋಗ್ಯ ಇಲಾಖೆ ಇವರ ಮಾಹಿತಿ ಸಂಗ್ರಹಿಸಿದೆ. ಬುಧವಾರ ಇವರ ಗಂಟಲು ಮಾದರಿ ಪರೀಕ್ಷೆ ನಡೆಸಲಾಗಿದ್ದು, ಗುರುವಾರ ಫಲಿತಾಂಶ ಬರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ದಂಪತಿಯನ್ನು ಹೋಂ ಐಸೋಲೇಷನ್‌ನಲ್ಲಿರಲು ಸೂಚಿಸಲಾಗಿದೆ. ಇವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪಾಲಿಕೆ ಚುನಾವಣೆಗಳಲ್ಲಿ ಪಕ್ಷದ ಚಿಹ್ನೆಯಿಂದಲೇ ಅಭ್ಯರ್ಥಿಗಳ ಸ್ಪರ್ಧೆ; ಡಿ.ಕೆ ಶಿವಕುಮಾರ್
ಇದಲ್ಲದೇ, ಇಬ್ಬರು ಟಿಬೆಟಿಯನ್ ಕಾಲೋನಿಗೆ ಡಿ. 5ನೇ ತಾರೀಕು ಬಂದಿದ್ದಾರೆ. ಬಂದ ತಕ್ಷಣ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ. ಫಲಿತಾಂಶ ನೆಗೆಟಿವ್ ಬಂದಿದೆ. ಯಾವುದೇ ಲಕ್ಷಣಗಳಿಲ್ಲ. ಆದರೂ ಇವರನ್ನು ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ ಎಂದರು.
ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗ್ರತೆ ವಹಿಸಿದೆ. ಜನರು ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಬೇಕು. ಮಾಸ್‌ಕ್ ಧರಿಸುವಿಕೆ, ಭೌತಿಕ ಅಂತರ ಕಾಪಾಡಬೇಕು. ಚಳಿಗಾಲವಿರುವುದರಿಂದ ಆರೋಗ್ಯದತ್ತ ಗಮನ ನೀಡಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ತಿರುಗಾಡಬಾರದು ಎಂದು ಮನವಿ ಮಾಡಿದರು.