ಕುಣಿಗಲ್ : ಮಹಿಳೆಯನ್ನು ಚುಡಾಸಿದ್ದ ಸಂಬಂಧ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಯುವಕನೋರ್ವನಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಅಂಚೆಪಾಳ್ಯ ಸೇತುವೆ ಬಳಿ ನಡೆದಿದೆ.
ತಾಲೂಕಿನ ಹುತ್ರಿದುರ್ಗ ಹೋಬಳಿ ಅಂಚೇಪಾಳ್ಯ ಗ್ರಾಮದ ಕಿರಣ್ ಹಲ್ಲೆಗೆ ಒಳಗಾದ ಯುವಕ, ಘಟನೆಗೆ ಸಂಬಂಧಿಸಿದಂತೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಸದ್ಯ ಬೆಂಗಳೂರು ಯಲಹಂಕ ನಿವಾಸಿ ರಾಕೇಶ್ ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ.
ಘಟನೆ ವಿವರ
ಕುಣಿಗಲ್ ತಾಲೂಕು ಹುತ್ರಿದುರ್ಗ ಹೋಬಳಿ ಕಲ್ಲನಾಯಕನಹಳ್ಳಿ ಗ್ರಾಮದ ಪವನ್, ಕಿರಣ್, ಮುನಿರಾಜು, ಬಾಲಕೃಷ್ಣ ಎಂಬುವರು ಮಾರ್ಕೋನಹಳ್ಳಿ ಜಲಾಶಯ ತುಂಬಿ ಕೋಡಿ ಬಿದ್ದ ಕಾರಣ ಜಲಾಶಯವನ್ನು ನೋಡಿಕೊಂಡು ತಮ್ಮ ಗ್ರಾಮಕ್ಕೆ ವಾಪಸಾಗುತ್ತಿರಬೇಕಾಗರೆ ರಾಷ್ಟ್ರೀಯ ಹೆದ್ದಾರಿ 75 ರ ಎಡಿಯೂರು ಕಡೆಯಿಂದ ಬೆಂಗಳೂರು ಕಡೆಗೆ ಕಾರು ಚಾಲನೆ ಮಾಡಿಕೊಂಡು ಹೊಗುತ್ತಿದ್ದ ಮಹಿಳೆಯೋರ್ವಳನ್ನು ದ್ವಿಚಕ್ರ ವಾಹನದಲ್ಲಿ ಬಂದ ಐದು ಮಂದಿ ಆರೋಪಿಗಳು ರಸ್ತೆ ಉದ್ದಕ್ಕೂ ಚುಡಾಯಿಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಕಿರಣ್ ಮೇಲೆ ಬೆಂಗಳೂರಿನ ಯುವಕ ಗುಂಪು ಚಾಕುವಿನಿಂದ ಹಣೆ ಮೇಲೆ ಹಲ್ಲೆ ನಡೆಸಿ, ಬಳಿಕ ಹೊಟ್ಟೆಗೆ ಇರಿಯಲು ಯತ್ನಿಸಿದರು. ಕಿರಣ್ ಕೈ ಅಡ್ಡ ಹಿಡಿದಾಗ ಗಾಯವಾಗಿದೆ. ರಕ್ತಸ್ರಾವವಾದ ಕಿರಣ್ ತನ್ನ ಜತೆಗೆ ಬಂದಿದ್ದ ಪವನ್, ಮುನಿರಾಜು ಆರೋಪಿಗಳ ಹಲ್ಲೆಯಿಂದ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನ ಚಲಾಯಿಸಿಕೊಂಡು ಓಡಿ ಹೋದರು.
ಗಾಯಾಳು ಕಿರಣ್ ಹಾಗೂ ಆತನ ಸ್ನೇಹಿತರು ಘಟನೆ ಸಂಬಂಧ ಅಂಚೇಪಾಳ್ಯದ ಮಂಜೇಶ್‌ಗೌಡ ಅವರಿಗೆ ತಿಳಿಸಿದರು, ಬಳಿಕ ಮಂಜೇಶ್‌ಗೌಡ ಅವರ ಕಾರಿನಲ್ಲಿ ಪವನ್, ಧನಜಯ್ಯ, ಆನಂದ್, ಅರುಣ್ ಅವರನ್ನು ಕೂರಿಸಿಕೊಂಡು ಆರೋಪಿಗಳ ಪತ್ತೆಗೆ ತೆರಳಿದ್ದು, ಆರೋಪಿಗಳು ದ್ವಿಚಕ್ರ ವಾಹನದಲ್ಲಿ ತಿಪ್ಪಸಂದ್ರ ಬಳಿ ಹೋಗುತ್ತಿದ್ದಾ ಆಗ ಕಾರನ್ನು ಅಡ್ಡ ನಿಲ್ಲಿಸಿ ಬೈಕ್ ನಿಲ್ಲಿಸುವಂತೆ ತಿಳಿಸಿದಾಗ, ನಾಲ್ಕು ಮಂದಿ ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾದರು. ರಾಕೇಶ್ ಎಂಬ ಆರೋಪಿಯನ್ನು ಹಿಡಿದು ಕುಣಿಗಲ್ ಪೊಲೀಸರ ವಶಕ್ಕೆ ನೀಡಿದರು. ಪವನ್ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಎಸ್ಪಿ ಭೇಟಿ
ಘಟನೆ ವಿಚಾರ ತಿಳಿಯುತ್ತಿದಂತೆ ಕುಣಿಗಲ್ ಗೆ ದೌಡಾಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರ್, ಎಎಸ್‌ಪಿ ಉದೇಶ್ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಅವರ ಮಾರ್ಗದರ್ಶನಲ್ಲಿ ಡಿವೈಎಸ್‌ಪಿ ಜಿ.ಆರ್.ರಮೇಶ್, ಸಿಪಿಐ ಗುರುಪ್ರಸಾದ್ ಅವರ ನೇತೃತ್ವದ ಪೊಲೀಸ್ ತಂಡ ರಚಿಸಿ ತಲೆ ಮಾರಿಸಿಕೊಂಡಿದ್ದ ನಾಲ್ವರು ಆರೋಪಿಗಳ ಪತ್ತೆಗೆ ಬಲೆ ಬೀಸಿದರು, ಕಾರ್ಯಚರಣೆ ನಡೆಸಿದ ಪೊಲೀಸರು ಕುಣಿಗಲ್ ತಾಲೂಕಿನ ಮುನಿಯನಪಾಳ್ಯ ಗ್ರಾಮದ ಸಂದೀಪ್, ಬೆಂಗಳೂರು ಮೂಲದ ದೀಕ್ಷಿತ್, ಸಂತೋಷ್, ಸೋಮಶೇಖರ್ ಅವರನ್ನು ಬಂಧಿಸಿದ್ದಾರೆ.