Advertisement
ಈ ಸಂಬಂಧ ಬಾಗಲಗುಂಟೆಯ ನವೀನ್ ಕುಮಾರ್ (30), ತುಮಕೂರು ಜಿಲ್ಲೆ ಶಿರಾ ತಾಲೂಕಿನ ಸಚಿನ್ (26), ದೊಡ್ಡಬಿದರಕಲ್ಲಿನ ದೇವರಾಜ್ (25), ಬೀದರ್ ಜಿಲ್ಲೆ ಹುಮ್ನಾಬಾದ್‌ನ ಸಂಜಯ್ ಕುಮಾರ್ ಶೀಲವಂತ (29) ಹಾಗೂ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕರಿಸಿದ್ದೇಶ್ವರ (34) ಎಂಬುವವರನ್ನು ಬಂಧಿಸಲಾಗಿದೆ.
Related Articles
Advertisement
ಒಂದು ಐಡಿಗೆ 600ರೂ: ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪಿ ನವೀನ್ ಕುಮಾರ್, ಸಂಜಯ್ ಕುಮಾರ್‌ನನ್ನು ಸಂಪರ್ಕಿಸಿ ಹಣದ ಆಮಿಷವೊಡ್ಡಿ ಚುನಾವಣಾ ಆಯೋಗದ ಇಆರ್‌ಎಂಎಸ್ ವೈಬ್‌ಸೈಟ್‌ನ ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಡಿಜಿಟಲ್ ಕೀಗಳನ್ನು ಪಡೆದುಕೊಂಡಿದ್ದ.
ಬಳಿಕ ಸಚ್ಚಿನ್ ಮತ್ತು ದೇವರಾಜ್ ನಡೆಸುತ್ತಿದ್ದ ಸೈಬರ್ ಕೆಫೆಯಲ್ಲೇ ಕುಳಿತು ಅನಧಿಕೃತವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ ಗುರುತಿನ ಚೀಟಿ ನೀಡುತ್ತಿದ್ದ. ಇದಕ್ಕಾಗಿ ಪ್ರತಿಯೊಬ್ಬರಿಂದ ತಲಾ 500ರಿಂದ 600 ರೂ. ಪಡೆಯುತ್ತಿದ್ದ. ಆರೋಪಿಗಳು ನಕಲಿ ಮತದಾರರ ಗುರುತಿನ ಚೀಟಿಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದರು. ಹೀಗಾಗಿ ಸಾರ್ವಜನಿಕರು ಹಣ ಕೊಟ್ಟು ಹೆಸರು ನೊಂದಾಯಿಸುತ್ತಿದ್ದರು.
ಗಡುವು ಮುಗಿದರೂ ಬೆಳೆದ ಪಟ್ಟಿ!: ಬಿಬಿಎಂಪಿ ಅಧಿಕಾರಿಗಳು ಆಯೋಗದ ವೆಬ್‌ಸೈಟ್ ಪರಿಶೀಲಿಸಿದಾಗ ಹೊಸ ಮತದಾರರ ಪಟ್ಟಿಯಲ್ಲಿ ಆರೋಪಿಗಳು ಗುರುತಿನ ಚೀಟಿ ಮಾಡಿಸಿಕೊಟ್ಟವರ ದಾಖಲೆಗಳು ಅಪ್‌ಲೋಡ್ ಆಗಿರಲಿಲ್ಲ. ಕೆಲ ಪ್ರಕರಣಗಳಲ್ಲಿ ಗುರುತಿನ ಚೀಟಿ ಪಡೆದವರ ಮಾಹಿತಿ ಇರಲಿಲ್ಲ.
ಈ ಮಧ್ಯೆ ಏ.14ಕ್ಕೆ ಮತದಾರರ ಪಟ್ಟಿಗೆ ಸೇರ್ಪಡೆ ದಿನಾಂಕ ಮುಕ್ತಾಯವಾದರೂ ವೆಬ್‌ಸೈಟ್‌ನಲ್ಲಿ ದಿನದಿಂದ ದಿನಕ್ಕೆ ಹೆಸರುಗಳು ಹೆಚ್ಚುತ್ತಲೇ ಇದ್ದವು. ಇದರಿಂದ ಅನುಮಾನಗೊಂಡ ದಾಸರಹಳ್ಳಿ ವಲಯದ ಸಹಾಯಕ ಚುನಾವಣಾಧಿಕಾರಿ ನಾಗರತ್ನ ಹಾಗೂ ಹೇರೋಹಳ್ಳಿ ಉಪ ವಲಯ ಸಹಾಯಕ ಚುನಾವಣಾಧಿಕಾರಿ ಅನಂತರಾಮಯ್ಯ ಪೀಣ್ಯ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದರು.
5 ಲಕ್ಷ ಸಂಪಾದನೆ: ದಾಸರಹಳ್ಳಿ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ನಂದಿನಿಲೇಔಟ್, ಲಗ್ಗೆರೆ, ರಾಜಗೋಪಾಲನಗರ ವ್ಯಾಪ್ತಿಯ ಮತದಾರರನ್ನು ಸೆಳೆದು ಅಕ್ರಮ ದಂಧೆ ನಡೆಸುತ್ತಿದ್ದ ಆರೋಪಿಗಳು ಇದುವರೆಗೂ 900ರಿಂದ 1000 ನಕಲಿ ಗುರುತಿನ ಚೀಟಿಗಳನ್ನು ನೀಡಿ ವಂಚನೆ ಮಾಡಿದ್ದಾರೆ. ಹೀಗೆ 5 ಲಕ್ಷ ರೂ ಸಂಪಾದನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ನಮಗೂ ಕಾರ್ಡ್ ಬೇಕೆಂದ ಅಧಿಕಾರಿಗಳು: ಆರೋಪಿಗಳ ದಂಧೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಚುನಾವಣಾಧಿಕಾರಿಗಳ ಸಹಾಯ ಪಡೆದ ಪೊಲೀಸರು, ಅಕ್ರಮವಾಗಿ ಗುರುತಿನ ಚೀಟಿ ಪಡೆದ ಸಾರ್ವಜನಿಕರನ್ನು ಸಂಪರ್ಕಿಸಿದ್ದರು.
ಬಳಿಕ ನಮಗೂ ಗುರುತಿನ ಚೀಟಿ ಬೇಕಿದೆ ಎಂದು ಹೇಳಿ ಆರೋಪಿಗಳ ಬಗ್ಗೆ ಮಾಹಿತಿ ಪದೆಕೊಂಡು ಬಳಿಕ ನೇರವಾಗಿ ದೊಡ್ಡಬಿದರಕಲ್ಲಿನ ಸೈಬರ್ ಕೆಫೆಗೆ ಹೋಗಿ ಮತದಾರರ ಗುರುತಿನ ಚೀಟಿ ಬಗ್ಗೆ ವಿಚಾರಿಸಿದ್ದರು. ಆಗ ಸ್ಥಳದಲ್ಲಿದ್ದ ಆರೋಪಿ ನವೀನ್ ಕುಮಾರ್, ಗುರುತಿನ ಚೀಟಿ ಮಾಡಿಕೊಡುವುದಾಗಿ ಹೇಳಿದ. ಈ ಸಂದರ್ಭದಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಂಧೆಯ ಸಂಪೂರ್ಣ ಮಾಹಿತಿ ತಿಳಿದುಬಂದಿದೆ.