Advertisement

ಅಳದಂಗಡಿ: ಹಿಂಸಾತ್ಮಕವಾಗಿ ಅಕ್ರಮ ಗೋ ಸಾಗಾಟ- ಐವರ ಬಂಧನ

08:40 PM Jan 04, 2023 | Team Udayavani |

ಬೆಳ್ತಂಗಡಿ: ಬಡಗಕಾರಂದೂರು ಸಮೀಪದ ನಡಾಯಿ ಎಂಬಲ್ಲಿ ಓಮ್ನಿ ಕಾರಿನಲ್ಲಿ ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ಪ್ರಕರಣವೊಂದನ್ನು ಜ.4ರಂದು ಬೆಳಗ್ಗಿನ ಜಾವ ವೇಣೂರು ಪೊಲೀಸರು ಪತ್ತೆ ಹಚ್ಚಿದ್ದು ಐವರು ಆರೋಪಿಗಳನ್ನು ಬಂಧಿಸಿ, ಐದು ಜಾನುವಾರುಗಳನ್ನು ಹಾಗೂ ವಾಹನಗಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ. ಮಿಂಚಿನ ದಾಳಿ ನಡೆಸಿ 5 ಗೋವುಗಳನ್ನು ರಕ್ಷಿಸಿದ ಪೊಲೀಸರನ್ನು ಸಾರ್ವಜನಿಕರು ಮುಕ್ತ ಕಂಠಡದಿಂದ ಪ್ರಶಂಸಿದ್ದಾರೆ.

Advertisement

ಕರಾಯ ಗ್ರಾಮದ ಜನತಾ ಕಾಲನಿ ನಿವಾಸಿ ತೌಸೀಫ್‌ (32) ಪುತ್ತಿಲ ಗ್ರಾಮದ ಮಣಿಲ ಮನೆ ಉಸ್ಮಾನ್‌(55), ಪುತ್ತೂರು ತಾಲೂಕು ವಳಾಲು ಗ್ರಾಮದ ಬಜತ್ತೂರಿನ ನಿವಾಸಿ ಇಕ್ಬಾಲ್‌ (34), ಕರಾಯ ಗ್ರಾಮದ ಜನತಾ ಕಾಲನಿ ನಿವಾಸಿ ಇರ್ಫಾನ್‌(25), ಕರಾಯ ಗ್ರಾಮದ ಜನತಾ ಕಾಲನಿ ನಿವಾಸಿ ಅನಾಸ್‌(23) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳ ಮೇಲೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಳದಂಗಡಿ ಪರಿಸರದಲ್ಲಿ ಗೋ ಸಾಗಾಟ ಮಾಡುತ್ತಿದ್ದ ಬಗ್ಗೆ ಹಲವಾರು ದೂರುಗಳಿದ್ದು ಈ ಬಗ್ಗೆ ವೇಣೂರು ಎಸ್‌.ಐ.ಸೌಮ್ಯ, ಎ.ಎಸ್‌.ಐ ವೆಂಕಟೇಶ್‌, ಸಿಬಂದಿಗಳಾದ ಅಭಿಜಿತ್‌, ಪ್ರಶಾಂತ್‌, ರಾಜೇಶ್‌, ಸಚಿನ್‌, ಹನುಮಂತ್‌, ತ್ರಿಮೂರ್ತಿ ಹಾಗೂ ತಂಡ ರಾತ್ರಿಯ ಗಸ್ತು ತಿರುಗುತ್ತಿದ್ದ ವೇಳೆ ಬಡಗಕಾರಂದೂರು ಗ್ರಾಮದ ನಡಾಯಿ ಎಂಬಲ್ಲಿ ನಾರಾವಿ-ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ ಗುರುವಾಯನಕೆರೆ ಕಡೆ ಅನುಮಾನಾಸ್ಪದವಾಗಿ ಬರುತ್ತಿದ್ದ ದ್ವಿಚಕ್ರ ವಾಹನದಲ್ಲಿ ಬಂದವರನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಈ ಗೋಕಳ್ಳ ಸಾಗಾಟ ಪ್ರಕರಣ ಬೆಳಕಿಗೆ ಬಂದಿತ್ತು. ಹಿಂದಿನಿಂದ ಬರುತ್ತಿದ್ದ ಓಮ್ನಿ ಕಾರನ್ನು ತಡೆದು ಪರಿಶೀಲಿಸಿದಾಗ ಕಾರಿನಲ್ಲಿ ಐದು ಜಾನುವಾರುಗಳನ್ನು ಅತ್ಯಂತ ಹಿಂಸಾತ್ಮಕವಾಗಿ ತುಂಬಿ ಸಾಗಾಟ ಗುರುವಾಯನಕೆರೆ ಕಡೆಗೆ ಅಕ್ರಮ ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವುದು ಕಂಡು ಬಂದಿತ್ತು.

ಕಾರಿನಲ್ಲಿ ಚಾಲಕ ಸೇರಿ ಇಬ್ಬರು ಇದ್ದರು. ಕೂಡಲೇ ಐದು ಜಾನುವಾರುಗಳೊಂದಿಗೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಸುಗಳ ಕೈ ಕಾಲುಗಳನ್ನು ಕಟ್ಟಿ ಅತ್ಯಂತ ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗಿತ್ತು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾರುತಿ ಕಾರಿನಲ್ಲಿ ಜಾನುವಾರುಗಳನ್ನು ತುಂಬಿಸಿ, ಅದರ ಎದುರಿನಿಂದ ದ್ವಿಚಕ್ರವಾಹನದಲ್ಲಿ ಇಬ್ಬರು ಬೆಂಗವಲಾಗಿ ಹೋಗುತ್ತಿದ್ದರೆನ್ನಲಾಗಿದೆ. ಕಾರು ಮತ್ತು ದ್ವಿಚಕ್ರ ವಾಹನವನ್ನು ಸ್ವಾಧೀನ ಪಡಿಸಿದ್ದು, ಸ್ವಾಧೀನ ಪಡಿಸಿದ ಜಾನುವಾರುಗಳ ಅಂದಾಜು ಮೌಲ್ಯ 15 ಸಾವಿರ ರೂ. ಹಾಗೂ ವಾಹನಗಳ ಅಂದಾಜು ಮೌಲ್ಯ 1.75 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next