Advertisement

ಫಿಟ್‌ ಇಂಡಿಯಾ ಆಂದೋಲನ ಮಹೋನ್ನತ ಆಶಯ

10:09 AM Aug 31, 2019 | mahesh |

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ ಫಿಟ್‌ ಇಂಡಿಯಾ ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಕ್ರೀಡಾ ದಿನವಾಗಿರುವ ಗುರುವಾರ ಚಾಲನೆ ನೀಡಿದ್ದಾರೆ. ದೇಶದ ಭವಿಷ್ಯ ಆರೋಗ್ಯಕರವಾಗಿರಲು ಜನರು ದೈಹಿಕ ಕ್ಷಮತೆ ಹೊಂದಿರುವುದು ಅಗತ್ಯ. ಹೀಗಾಗಿ ಫಿಟ್‌ ಇಂಡಿಯಾ ಆಂದೋಲನ ಈ ಹೊತ್ತಿನ ಅಗತ್ಯ ಎಂದಿದ್ದಾರೆ ಮೋದಿ. ದೈಹಿಕ ಕ್ಷಮತೆ ಎನ್ನುವುದು ನಮ್ಮ ಸಂಸ್ಕೃತಿಯಲ್ಲೇ ಹಾಸು ಹೊಕ್ಕಾಗಿತ್ತು. ಆದರೆ ಮನುಷ್ಯ ಆಧುನಿಕನಾಗುತ್ತಾ ಹೋದಂತೆ ಈ ಸಂಸ್ಕೃತಿ ನಮ್ಮ ಬದುಕಿನಿಂದ ದೂರವಾದದ್ದು ದುರದೃಷ್ಟಕರ.

Advertisement

ಬಹುತೇಕ ಭಾರತೀಯರು ಫಿಟ್‌ನೆಸ್‌ ಬಗ್ಗೆ ಬಹಳ ಕಾಳಜಿ ಹೊಂದಿದ್ದಾರೆ, ಆದರೆ ಫಿಟ್‌ ಆಗಿರಲು ಮಾಡುವ ಪ್ರಯತ್ನ ಶೂನ್ಯ ಎನ್ನುವುದು ತಮಾಷೆಯ ಹೇಳಿಕೆಯಾಗಿದ್ದರೂ ಇದರಲ್ಲಿ ವಾಸ್ತವವೂ ಇದೆ. ಶೇ. 64 ಭಾರತೀಯರು ವ್ಯಾಯಾಮ ಮಾಡುವುದೇ ಇಲ್ಲ ಎಂಬುದಾಗಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ವ್ಯಕ್ತವಾಗಿರುವ ಅಂಶ ಈ ಮಾತನ್ನು ಪುಷ್ಟೀಕರಿಸುತ್ತದೆ.

ಬದಲಾದ ಜೀವನಶೈಲಿಯೇ ನಮ್ಮ ದೈಹಿಕ ಕ್ಷಮತೆ ಕುಸಿಯಲು ಕಾರಣ. ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಕೊನೆಗೆ ಪಾತ್ರೆಗಳನ್ನು ತೊಳೆಯುವಂಥ ಮಾಮೂಲು ಗೃಹಕೃತ್ಯಗಳನ್ನು ಮಾಡಲೂ ಈಗ ಯಂತ್ರಗಳು ಬಂದಿವೆ. ಹೀಗಾಗಿ ಮನುಷ್ಯನ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಇದರ ಪರಿಣಾಮವೇ ಬೊಜ್ಜು, ಮಧುಮೇಹದಂಥ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳ ಕಾಟ. ಮಧುಮೇಹದಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಪ್ರಥಮ ಸ್ಥಾನ ಇದೆ ಎನ್ನುವುದು ಫಿಟ್‌ನೆಸ್‌ನ್ನು ನಾವು ಎಷ್ಟು ಹಗುರವಾಗಿ ಪರಿಗಣಿಸಿದ್ದೇವೆ ಎನ್ನುವುದನ್ನು ತಿಳಿಸುತ್ತದೆ. 14 ಕೋಟಿಗೂ ಹೆಚ್ಚು ಮಂದಿ ಬೊಜ್ಜು ಮತ್ತು ಅದಕ್ಕೆ ಸಂಬಂಧಪಟ್ಟ ಕಾಯಿಲೆಯಿಂದ ನರಳುತ್ತಿದ್ದಾರೆೆ.ಮಾನಸಿಕ ಒತ್ತಡ, ಥೈರಾಯ್ಡ ಸಮಸ್ಯೆ, ಸಂಧಿವಾತ ಇತ್ಯಾದಿ ಕಾಯಿಲೆಗಳಿಗೂ ದೈಹಿಕ ಚಟುವಟಿಕೆಗಳಿಗೂ ನೇರ ಸಂಬಂಧವಿದೆ. ದೇಶದ ಪ್ರಧಾನಿಯೇ ಈ ಅಗತ್ಯ ಮನಗಂಡು ದೇಶವಾಸಿಗಳಿಗೆ ಸ್ಫೂರ್ತಿಯಾಗಿರುವುದು ಉತ್ತಮ ನಡೆ.

ಫಿಟ್‌ನೆಸ್‌ ಕುರಿತಾಗಿ ಭಾರತೀಯರು ಹೊಂದಿರುವ ಮನೋಧರ್ಮದಲ್ಲೇ ಲೋಪವಿದೆ. ಈಗಲೂ ನಮ್ಮ ಶಾಲೆಗಳಲ್ಲಿ ಆಟೋಟವನ್ನು ಪಠ್ಯೇತರ ಚಟುವಟಿಕೆ ಎಂದೇ ಪರಿಗಣಿಸಲಾಗುತ್ತಿದೆ. ಇನ್ನೂ ಅದು ಶಿಕ್ಷಣದ ಮುಖ್ಯ ವಾಹಿನಿಗೆ ಸೇರ್ಪಡೆಯಾಗಿಲ್ಲ. ಪಠ್ಯಗಳು ಬಾಕಿ ಉಳಿದಿದ್ದರೆ ದೈಹಿಕ ಶಿಕ್ಷಣದ ಅವಧಿಯನ್ನು ಕಡಿತ ಮಾಡಿ ತರಗತಿಗಳನ್ನು ನಡೆಸುವುದು ನಮ್ಮ ಶಾಲೆಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈಗಿನ ಅಂಕಗಳಿಸುವ ಸ್ಪರ್ಧೆಯಲ್ಲಿ ಮಕ್ಕಳಿಗೆ ಆಟೋಟಗಳು ದುರ್ಲಭವಾಗಿ ಪರಿಣಮಿಸಿವೆ. ಜತೆಗೆ ಟಿವಿ, ಮೊಬೈಲ್‌ನಂಥ “ಟೈಮ್‌ಪಾಸ್‌’ ಮಾಧ್ಯಮಗಳು ಮಕ್ಕಳ ಸಮಯವನ್ನು ಕಬಳಿಸುತ್ತಿದ್ದು, ಇದರ ಪರಿಣಾಮವಾಗಿ ಬಾಲ್ಯದಲ್ಲೇ ಬೊಜ್ಜಿನಂಥ ಕಾಯಿಲೆಗಳು ಬರುತ್ತಿವೆ. ಜನರಲ್ಲೂ ಫಿಟ್‌ನೆಸ್‌ ಬಗ್ಗೆ ಒಂದು ನಕಾರಾತ್ಮಕವಾದ ಭಾವನೆಯಿದೆ.

ದೈಹಿಕ ಕಸರತ್ತುಗಳೆಲ್ಲ ಸೈನ್ಯದಲ್ಲಿದ್ದವರಿಗೆ, ಪೊಲೀಸರಿಗೆ ಮಾತ್ರ ಅಗತ್ಯ ನಾವೇಕೆ ಮಾಡಬೇಕು ಎನ್ನುವುದು ಜನರ ಮನೋಧರ್ಮ. ಕಾರ್ಪೋರೇಟ್‌ ಸಂಸ್ಕೃತಿಯೂ ಜನರಿಗೆ ಸಾಕಷ್ಟು ದೈಹಿಕ ವ್ಯಾಯಾಮಗಳನ್ನು ಪಡೆದುಕೊಳ್ಳಲು ಅವಕಾಶ ಕೊಡುತ್ತಿಲ್ಲ. ಏಕೆ ವ್ಯಾಯಾಮ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಶೇ. 90 ಮಂದಿಯ ಉತ್ತರ ಸಮಯದ ಕೊರತೆ ಎಂಬುದು. ನಿಜವಾಗಿ ನೋಡಿದರೆ ಇದು ಸಮಯದ ಕೊರತೆಯಲ್ಲ ಸಮಯವನ್ನು ಸಮರ್ಪಕವಾಗಿ ಬಳಸುವ ಜಾಣ್ಮೆಯ ಕೊರತೆಯಷ್ಟೆ. ಅದಾಗ್ಯೂ ಈಗೀಗ ಜನರಲ್ಲಿ ಫಿಟ್‌ನೆಸ್‌ ಬಗ್ಗೆ ಅರಿವು ಮೂಡುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ನಗರಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಪಾರ್ಕ್‌ಗಳು, ವಾಕಿಂಗ್‌ ಟ್ರ್ಯಾಕ್‌ಗಳು, ವಾಕಿಂಗ್‌ ಮತ್ತು ಜಾಗಿಂಗ್‌ ಮಾಡುವವರಿಂದ ತುಂಬಿರುವುದು ನಗರವಾಸಿಗಳಲ್ಲಿ ಫಿಟ್‌ನೆಸ್‌ ಬಗ್ಗೆ ಸಾಕಷ್ಟು ಅರಿವು ಮೂಡಿರುವುದರ ದ್ಯೋತಕ. ಫಿಟ್‌ ಇಂಡಿಯಾ ಆಂದೋಲನಕ್ಕೆ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡುವ ಸಾಮರ್ಥ್ಯವಿದೆ. ನಿರ್ದಿಷ್ಟವಾಗಿ ಯುವ ಜನತೆಯನ್ನು ದೈಹಿಕವಾಗಿ ಸದೃಢ ರಾಗಿಸುವ ಮೂಲಕ ಭವಿಷ್ಯದ ಭಾರತವನ್ನು ಆರೋಗ್ಯಕರವಾಗಿ ಕಟ್ಟಬಹುದು. ಇದು ಬರೀ ವ್ಯಕ್ತಿಗತ ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವಲ್ಲ ಬದಲಾಗಿ ಆರೋಗ್ಯ, ಉತ್ಪಾದಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಬೀರುವ ಆಯಾಮಗಳನ್ನೂ ಒಳಗೊಂಡಿದೆ. ಫಿಟ್‌ನೆಸ್‌ ಅನ್ನು ದೈನಂದಿನ ಬದುಕಿನ ಅವಿಭಾಜ್ಯ ಅಂಗವನ್ನಾಗಿಸುವ ಮೂಲಕ ಶಿಕ್ಷಣ ಸಂಸ್ಥೆಗಳು, ಉದ್ಯೋಗದಾತರು ಮತ್ತು ನಿರ್ದಿಷ್ಟವಾಗಿ ಜನರು ಪ್ರಧಾನಿಯ ಮಹೋನ್ನತ ಆಶಯಕ್ಕೆ ದೊಡ್ಡ ಮಟ್ಟದ ಯೋಗದಾನ ನೀಡಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next