ಉಡುಪಿ: ಫಿಶ್‌ಮೀಲ್ ಸ್ಥಾವರಗಳನ್ನು ಗಲಿಬಿಲಿಗೊಳಿಸಿದ್ದ ತೆರಿಗೆಯನ್ನು ರದ್ದುಪಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ನೇತೃತ್ವದ ನಿಯೋಗ ಕೃತಜ್ಞತೆ ಸಲ್ಲಿಸಿದೆ.
ತೆರಿಗೆಯನ್ನು ರದ್ದುಪಡಿಸಬೇಕು, ಇಲ್ಲವಾದರೆ ಮುಷ್ಕರ ಹೂಡುವುದಾಗಿ ಫಿಶ್‌ಮೀಲ್ ಸ್ಥಾವರಗಳ ಮಾಲಕರ ಸಂಘ ಎಚ್ಚರಿಕೆ ನೀಡಿತ್ತು. ಇದೇ ವೇಳೆ ವಿತ್ತ ಸಚಿವರನ್ನು ಭೇಟಿ ಮಾಡಿ ತೆರಿಗೆ ರದ್ದತಿಗೆ ಮನವಿ ಸಲ್ಲಿಸಲಾಗಿತ್ತು. ಈಗ ನಿರ್ಮಲಾ ಸೀತಾರಾಮನ್ ಅವರು ಹೇಳಿಕೆಯೊಂದನ್ನು ನೀಡಿ ತೆರಿಗೆಯನ್ನು ರದ್ದುಪಡಿಸಿದ್ದಾರೆ. ಮೀನುಗಾರ
ಸಮುದಾಯದವರು ಮತ್ತು ಮೀನುಗಾರರು ಫಿಶ್‌ಮೀಲ್ ಸಂಘಟನೆ ಪರವಾಗಿ ಮನವಿ ಸಲ್ಲಿಸಿದ್ದಾರೆ.
2017ರ ಜು. 1ರಿಂದ 2018 ಡಿಸೆಂಬರ್ ತನಕ ತೆರಿಗೆ ವಿನಾಯಿತಿ ಕೇಳಿದ್ದರೂ ಸರಕಾರ 2017ರ ಜು. 1ರಿಂದ 2019ರ ಸೆ. 30ರ ವರೆಗೆ ತೆರಿಗೆ ವಿನಾಯಿತಿ ನೀಡಿದೆ ಎಂದು ನಿರ್ಮಲಾ ಹೇಳಿದ್ದಾರೆ. ನಿಯೋಗವು ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್ ಮತ್ತು ಬೆಂಬಲ ನೀಡಿದ ಇತರರಿಗೆ ಕೃತಜ್ಞತೆ ಸಲ್ಲಿಸಿದೆ.
ನಿಯೋಗದಲ್ಲಿ ಮಹಾರಾಷ್ಟ್ರದ ಮಾಜಿ ಶಾಸಕ ಪ್ರಮೋದ್ ಜತ್ತಾರ್, ಉದ್ಯಮಿಗಳಾದ ಆನಂದ ಸಿ. ಕುಂದರ್, ಎಚ್.ಟಿ. ಖಾದರ್, ಉದಯ ಸಾಲ್ಯಾನ್, ಬಲರಾಜ್, ದಾವೂದ್ ಸೇಟ್, ಕುರೇಶ್, ಮನೋಜ್ ಕುಶೆ, ಬಶೀರ್, ಹಮೀದ್, ಫಿರೋಜ್ ಅಹಮ್ಮದ್, ರಕ್ಷಿತ್ ಕುಂದರ್, ವಿ.ಎಂ. ತಾಹಿರ್ ಇದ್ದರು.