Advertisement

ಜೆಲ್ಲಿ ಮೀನು ಹಾವಳಿ: ಮತ್ತೆ ಮೀನುಗಾರಿಕೆಗೆ ಹೊಡೆತ

01:06 AM Oct 30, 2020 | mahesh |

ಗಂಗೊಳ್ಳಿ: ಲಾಕ್‌ಡೌನ್‌, ಹವಾಮಾನ ವೈಪರೀತ್ಯ, ಮೀನುಗಾರಿಕೆ ರಜೆ ಎಲ್ಲ ಮುಗಿಸಿ ಈಗ ಮೀನುಗಾರಿಕೆಗೆ ಇಳಿದ ಕರಾವಳಿ ಭಾಗದ ಬೋಟುಗಳಿಗೆ ಮತ್ತೂಂದು ಸಂಕಟ ಎದುರಾಗಿದೆ. ಮೀನುಗಾರಿಕೆ ಸೀಸನ್‌ನಲ್ಲೇ ಇತರ ಮೀನುಗಳ ಬದಲಾಗಿ ವಿಷಕಾರಿಯಾದ ಜೆಲ್ಲಿ ಮೀನು (ಅಂಬಲಿ ಮೀನು) ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದು, ಮೀನುಗಾರಿಕೆಗೆ ಭಾರೀ ಹೊಡೆತ ಬಿದ್ದಿದೆ.

Advertisement

ಸಾಮಾನ್ಯವಾಗಿ ಸೆಪ್ಟಂಬರ್‌ನಿಂದ ನವೆಂಬರ್‌ವರೆಗೆ ಮೀನುಗಾರರ ಸೀಸನ್‌ ಆಗಿದ್ದು, ಈ ಸಮಯದಲ್ಲಿ ಬಂಗುಡೆ, ಅಂಜಲ್‌, ಕೊಕ್ಕರ್‌, ಶಾಡಿ, ಅರ್ಕೋಳಿ (ಅಂಜಲ್‌), ಬೈಗೆ (ಬೂತಾಯಿ) ಮತ್ತಿತರ ಮೀನುಗಳು ಹೇರಳವಾಗಿ ಬಲೆಗೆ ಬೀಳುತ್ತವೆ. ಆದರೆ ಕಳೆದ 5-6 ದಿನಗಳಿಂದ ಗಂಗೊಳ್ಳಿ, ಮರವಂತೆ, ಶಿರೂರು, ಮಲ್ಪೆ, ಮತ್ತಿತರ ಕಡೆಗಳಲ್ಲಿ ಮೀನುಗಾರಿಕೆಗೆ ತೆರಳಿದ ಬೋಟುಗಳಿಗೆ ಜೆಲ್ಲಿ ಮೀನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದು, ಇದರಿಂದ ಕೆಲವು ಬೋಟುಗಳು ಬರಿಗೈಯಲ್ಲಿ ವಾಪಸ್‌ ಬರುವಂತಾಗಿದೆ.

ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಬೋಟುಗಳಿಗೆ ಸೀಸನ್‌ನಲ್ಲಿ ಹಿಂದೆ 1 ಸಾವಿರದಿಂದ ಒಂದೂವರೆ, ಎರಡು ಸಾವಿರ ಕೆ.ಜಿ.ಯಷ್ಟು ಮೀನುಗಳು ಸಿಗುತ್ತಿದ್ದರೆ, ಈಗ ಈ ಜೆಲ್ಲಿ ಮೀನು ಹಾವಳಿಯಿಂದಾಗಿ 300 ರಿಂದ 500 ಕೆ.ಜಿ.ಯಷ್ಟು ಮಾತ್ರ ಮೀನು ಸಿಗುತ್ತಿದೆ ಎಂದು ಮೀನುಗಾರರೊಬ್ಬರು ಹೇಳಿದ್ದಾರೆ.

ಮತ್ಸ್ಯ ಸಂಕುಲಕ್ಕೆ ಅಪಾಯ
ಹಿಂದೂ ಮಹಾಸಾಗರ – ಶಾಂತಸಾಗರದಲ್ಲಿ ಮಾತ್ರ ಕಂಡುಬರುತ್ತಿದ್ದ ಜೆಲ್ಲಿ ಮೀನಿನ ಹಾವಳಿ ಈಗ ಮಂಗಳೂರಿನಿಂದ ಆರಂಭವಾಗಿ ಕಾರವಾರದವರೆಗೆ ರಾಜ್ಯ ಕರಾವಳಿ ಯಲ್ಲೂ ಹೆಚ್ಚುತ್ತಿದೆ. ಇದರ ಹಾವಳಿ ಯಿಂದ ನಮೀಬಿಯಾ, ಜಪಾನ್‌, ಪೂರ್ವ ಯುರೋಪ್‌ ರಾಷ್ಟ್ರಗಳಲ್ಲಿ ಬೇರೆ ಮೀನುಗಳ ಸಂತತಿ ನಾಶವಾಗಿ ಮೀನುಗಾರಿಕೆಯೇ ಸ್ಥಗಿತಗೊಳ್ಳುವ ಮಟ್ಟಕ್ಕೆ ಮುಟ್ಟಿದೆ. ಮಹಾರಾಷ್ಟ್ರದ ರತ್ನಗಿರಿ, ಸಿಂಧುದುರ್ಗಾದಲ್ಲಿ ಕೆಲವು ವರ್ಷಗಳ ಹಿಂದೆ ಈ ಕಾರಣಕ್ಕೆ ಮೀನುಗಾರಿಕೆಯನ್ನೇ ಸ್ಥಗಿತಗೊಳಿಸಲಾಗಿತ್ತು. ರಾಜ್ಯ ಕರಾವಳಿಯಲ್ಲೂ ಭವಿಷ್ಯದಲ್ಲಿ ಮತ್ಸ é ಸಂಕುಲಕ್ಕೆ ಅಪಾಯ ಎದುರಾಗುವ ಸಂಭವ ಇಲ್ಲದಿಲ್ಲ ಎನ್ನುವುದಾಗಿ ಮಂಗಳೂರಿನ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನ ಸಂಸ್ಥೆ (ಸಿಎಂಎಫ್‌ಆರ್‌ಐ)ಯ ವಿಜ್ಞಾನಿಗಳು ಮಾಹಿತಿ ನೀಡುತ್ತಾರೆ.

ಜೆಲ್ಲಿ ಮೀನು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿರುವುದರಿಂದ ಬೇರೆ ಮೀನು ಸಿಗುವುದು ಕಡಿಮೆಯಾಗಿದೆ. ಈ ಮೀನನ್ನು ಮುಟ್ಟಿದರೆ ತುರಿಕೆ ಕೂಡ ಇರುವುದರಿಂದ ಮೀನುಗಾರರು ಮೀನುಗಾರಿಕೆಗೆ ತೆರಳಲು ಹಿಂದೇಟು ಹಾಕುತ್ತಾರೆ.
– ರಮೇಶ್‌ ಕುಂದರ್‌, ಅಧ್ಯಕ್ಷರು ಪರ್ಸಿನ್‌ ಬೋಟುಗಳ ಮೀನುಗಾರರ ಸಹಕಾರ, ಸಂಘ ಗಂಗೊಳ್ಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next