Advertisement
ಹವಾಮಾನ ವೈಪರೀತ್ಯ, ಅವೈಜ್ಞಾನಿಕ ಮೀನುಗಾರಿಕೆ, ಇನ್ನಿತರ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಮೀನಿನ ಸಂತತಿ ನಾಶವಾಗುತ್ತಿದ್ದು, ಇದು ಕರಾವಳಿಯ ಮೀನುಗಾರಿಕೆ ಕ್ಷೇತ್ರಕ್ಕೆ ಭಾರೀ ಹೊಡೆತವನ್ನೇ ನೀಡುತ್ತಿದೆ. ಕಳೆದೊಂದು ವಾರದಿಂದ ಮೀನುಗಾರಿಕೆ ನಡೆದುದಕ್ಕಿಂತ ನಡೆಯದೇ ಇರುವ ದಿನಗಳೇ ಹೆಚ್ಚು ಎನ್ನುವುದಾಗಿ ಮೀನುಗಾರರು.
ದ.ಕ., ಉಡುಪಿ ಹಾಗೂ ಉ.ಕ. ಜಿಲ್ಲೆಗಳಲ್ಲಿ 9 ಸಾವಿರಕ್ಕೂ ಮಿಕ್ಕಿ ನಾಡದೋಣಿಗಳಿದ್ದು, 27 ಸಾವಿರಕ್ಕೂ ಅಧಿಕ ಮಂದಿ ನಾಡದೋಣಿಯನ್ನೇ ಅವಲಂಬಿಸಿದ್ದಾರೆ. ಉಡುಪಿಯಲ್ಲಿ 1,600ಕ್ಕೂ ಮಿಕ್ಕಿ ಹಾಗೂ ದ.ಕ.ದಲ್ಲಿ 1 ಸಾವಿರಕ್ಕೂ ಅಧಿಕ ಆಳಸಮುದ್ರ ಬೋಟುಗಳಿದ್ದು ಸಾವಿರಾರು ಮಂದಿ ಜೀವನೋಪಾಯಕ್ಕಾಗಿ ಮೀನುಗಾರಿಕೆ ಆಶ್ರಯಿಸಿದ್ದಾರೆ. ಸೀಸನ್‌ನಲ್ಲೇ ಮೀನುಗಾರಿಕೆಯಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಕಠಿನ ಕಾನೂನು ಅಗತ್ಯ
ಬುಲ್‌ಟ್ರಾಲ್, ಲೈಟ್ ಫಿಶಿಂಗ್‌ನಿಂದ ಮೊಟ್ಟೆ ಸಹಿತ ಮೀನಿನ ಮರಿಗಳ ನಾಶ ಆಗುತ್ತಿದೆ. ಈ ಅವಧಿಯಲ್ಲಿ ನಿಜವಾಗಿಯೂ ರಾತ್ರಿ ವೇಳೆ ಪರ್ಸಿನ್ ಬೋಟುಗಳಿಗೆ ಉತ್ತಮ ಮೀನುಗಾರಿಕೆ ಇರುತ್ತಿತ್ತು. ಆದರೆ ಮೀನಿನ ಸಂತತಿಯೇ ಕಡಿಮೆ ಆಗುತ್ತಿರುವುದು ಆತಂಕಕಾರಿ ಸಂಗತಿ. ಸಣ್ಣ ಬಲೆ ನಿಷೇಧ, ಅವೈಜ್ಞಾನಿಕ ಮೀನುಗಾರಿಕೆ ಬಗ್ಗೆ ಸರಕಾರ, ಅಧಿಕಾರಿಗಳು ಕಠಿನ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ ಎನ್ನುತ್ತಾರೆ ಉತ್ತರ ಕರ್ನಾಟಕದ ಮೀನುಗಾರ ಮಹೇಶ್.
Related Articles
ಮೀನಿನ ಬರದಿಂದಾಗಿ ಮಾರುಕಟ್ಟೆಗಳಲ್ಲಿ ಎಲ್ಲ ವಿಧದ ಮೀನಿನ ದರವೂ ದುಬಾರಿಯಾಗಿದೆ. ಹೆಚ್ಚಾಗಿ ಸಿಗುತ್ತಿರುವ ಬಂಗುಡೆ ಕೆ.ಜಿ.ಗೆ 200 ರೂ. ಇದೆ. ಇನ್ನು ಬೂತಾಯಿ 120 ರೂ., ಅಂಜಲ್‌ಗೆ 700 ರೂ., ಪಾಂಪ್ಲೆಟ್‌ಗೆ 1 ಸಾವಿರ ರೂ., ಕೊಡ್ಡಾಯಿ (ಕೊಡ್ವಾಯಿ)ಗೆ 250 ರೂ., ಬೊಂಡಾಸ್‌ಗೆ 250 ರೂ. ವರೆಗೆ ಏರಿಕೆಯಾಗಿದೆ.
Advertisement
ಬಂಗುಡೆ ಮಾತ್ರ ಅಲ್ಪ ಪ್ರಮಾಣದಲ್ಲಿ ಲಭ್ಯಋತುವಿನ ಆರಂಭದಲ್ಲಿ ಚಂಡಮಾರುತ, ಮಳೆಯಿಂದಾಗಿ ಅಡ್ಡಿಯಾಗಿದ್ದರೆ, ಈಗ ಮಳೆ, ಪರಿಸ್ಥಿತಿ ತಕ್ಕ ಮಟ್ಟಿಗೆ ಅನುಕೂಲವಿದ್ದರೂ ಮೀನೇ ಸಿಗದ ಪರಿಸ್ಥಿತಿ ಇದೆ. ಆಗಸ್ಟ್‌ನಿಂದ ಸೆಪ್ಟಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್‌ನಲ್ಲಿ ಮಂಗಳೂರು, ಮಲ್ಪೆ, ಗಂಗೊಳ್ಳಿ, ಮರವಂತೆ, ಭಟ್ಕಳ, ಕಾರವಾರ ಸೇರಿದಂತೆ ಕರಾವಳಿ ಭಾಗದಲ್ಲಿ ಉತ್ತಮ ಮೀನುಗಾರಿಕೆ ಆಗುತ್ತದೆ. ಆದರೆ ಈ ಬಾರಿ ಮಾತ್ರ ಬಂಗುಡೆ ಬಿಟ್ಟರೆ ಬೇರೆ ಬೂತಾಯಿ, ಅಂಜಲ್, ಪಾಂಪ್ಲೆಟ್‌ನಂತಹ ಮೀನುಗಳು ಸಿಗುತ್ತಿಲ್ಲ. ಅದರಲ್ಲೂ ಬಿಳಿ ಅಂಜಲ್ ಅಂತೂ ಸಿಕ್ಕೇ ಇಲ್ಲ ಎನ್ನುತ್ತಿದ್ದಾರೆ ಮೀನುಗಾರರು. ಪ್ರತಿಕೂಲ ಹವಾಮಾನ ಕಾರಣ
ಪ್ರತಿಕೂಲ ಹವಾಮಾನದಿಂದಾಗಿ ಎಲ್ಲೆಡೆ ಮೀನಿನ ಲಭ್ಯತೆ ಕಡಿಮೆಯಾಗಿದೆ. ಹಿಂಗಾರು ಮಳೆ ಮುಗಿದ ಬಳಿಕ ಮತ್ತೆ ಸರಿಯಾಗಬಹುದು. ಡಿಸೆಂಬರ್‌ನಿಂದ ಮತ್ತೆ ಉತ್ತಮ ಮೀನುಗಾರಿಕೆ ಆಗುವ ನಿರೀಕ್ಷೆಯಿದೆ ಎಂದು ಉಡುಪಿ ಜಿಲ್ಲಾ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್. ತಿಳಿಸಿದ್ದಾರೆ. ಯಾಕೋ ಮೀನು ಸಿಗುವ ಪ್ರಮಾಣ ತುಂಬಾ ಕುಸಿದಿದೆ. ಕಳೆದ ವರ್ಷವೂ ಹೀಗೆ ಎರಡು ತಿಂಗಳು ಇರಲಿಲ್ಲ. ಡಿಸೆಂಬರ್‌ನಲ್ಲಿ ಚೇತರಿಸಿಕೊಂಡಿತ್ತು. ಪರ್ಸಿನ್ ಬೋಟುಗಳು, ದೋಣಿಯವರು ತೆರಳುತ್ತಿಲ್ಲ. ದಿನಾ ಹೋಗಿ ಬರುವ ಕೆಲ ಸಣ್ಣ ಟ್ರಾಲ್ ಬೋಟುಗಳು ಮಾತ್ರ ತೆರಳುತ್ತಿವೆ. ಹೆಚ್ಚಿನ ಬೋಟುಗಳಿಗೆ ಡೀಸೆಲ್ ಖರ್ಚಿನಷ್ಟು ಸಹ ಮೀನು ಸಿಗದೇ ಇರುವುದರಿಂದ ತೀರದಲ್ಲೇ ನಿಲ್ಲಿಸಿ ಉತ್ತಮ ದಿನಕ್ಕಾಗಿ ಕಾಯುತ್ತಿದ್ದೇವೆ.
– ಬಸವ ಖಾರ್ವಿ, ಗಂಗೊಳ್ಳಿ ತ್ರಿಸೆವೆಂಟಿ ಮೀನುಗಾರರ ಸಂಘದ ಅಧ್ಯಕ್ಷ -ಪ್ರಶಾಂತ್ ಪಾದೆ