ಮಂಗಳೂರು: ಕೋವಿಡ್ 19 ಆತಂಕದ ಹಿನ್ನೆಲೆಯಲ್ಲಿ ಮೀನುಗಾರಿಕೆ ಗುರು ವಾರ ದಿಂದ ಸಂಪೂರ್ಣ ಸ್ಥಗಿತಗೊಂಡಿದ್ದು, ನಗರದ ಪ್ರಮುಖ ದಕ್ಕೆಯ ಮೀನುಗಾರಿಕಾ ಪ್ರದೇಶ ಬಿಕೋ ಎನ್ನುತ್ತಿದೆ. ಶುಕ್ರವಾರದಿಂದ ಮೀನು ಪ್ರಿಯರಿಗೆ ಮೀನು ಸಿಗಲಾರದು.
ಬುಧವಾರ ದಕ್ಕೆಗೆ ಆಗಮಿಸಿದ ಮೀನುಗಾರಿಕೆ ಬೋಟುಗಳಿಂದ ಮೀನು ಮಾರಾಟ ಮತ್ತು ಸಾಗಾಟಕ್ಕೆ ಅವಕಾಶ ನೀಡದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಂದ ಮೀನನ್ನು ಏನು ಮಾಡ ಬೇಕು ಎಂದು ಮೀನುಗಾರರು ಗೊಂದಲಗೊಂಡರು. ದಕ್ಕೆಯಲ್ಲಿ ಜನ ಸೇರದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದು,ದಕ್ಕೆಯಲ್ಲಿ ಬಂದ್ ವಾತಾವರಣವಿತ್ತು.
ಬುಧವಾರ ತಂದ ಮೀನನ್ನು ಮಾರಾಟ ಮಾಡಲಾಗದೆ ಬಹುತೇಕರು ಕಡಲಿಗೆ ಚೆಲ್ಲಿದ ಘಟನೆ ನಡೆದಿದೆ. ಹಿಡಿದ ಬೆಲೆಬಾಳುವ ಮೀನನ್ನು ಕಡಲಿಗೆ ಚೆಲ್ಲುವ ಸನ್ನಿವೇಶ ಇದೇ ಮೊದಲು ಎಂದು ಮೀನುಗಾರರು ತಿಳಿಸಿದ್ದಾರೆ. ಈ ಮಧ್ಯೆ ಜಿಲ್ಲಾಧಿಕಾರಿಯವರ ವಿಶೇಷ ಅನುಮತಿ ಪಡೆದ ಕೆಲವು ಮೀನುಗಾರರು ಮೀನನ್ನು ಫಿಶ್ ಮೀಲ್‌ಗಳಿಗೆ ಬುಧವಾರ ಸಂಜೆ ಸಾಗಿಸಿದ್ದಾರೆ.
ಬೋಟುಗಳೆಲ್ಲ ದಕ್ಕೆಗೆ ವಾಪಸಾಗಿದ್ದು, ಬಂದರು ಬಹುತೇಕ ಸ್ತಬ್ಧವಾಗಿದೆ. ದಕ್ಕೆಯಲ್ಲಿ ಚಟುವಟಿಕೆಗೆ ಸಂಪೂರ್ಣ ಸ್ಥಗಿತ ಗೊಂಡಿದೆ. ಶುಕ್ರವಾರದಿಂದ ಜನರಿಗೆ ಮೀನು ಸಿಗುವುದು ಅನುಮಾನ.
ಕೋವಿಡ್ 19 ಕಾರಣದಿಂದ ಜನಜೀವನ ಸ್ತಬ್ಧವಾದ ಹಿನ್ನೆಲೆಯಲ್ಲಿ ಮೀನುಗಾರಿಕೆಗೆಂದು ತೆರಳಿದ್ದ ಮೀನುಗಾರರನ್ನು ವಾಪಸ್ ಬರುವಂತೆ ಈ ಹಿಂದೆಯೇ ತಿಳಿಸಲಾಗಿತ್ತು. ರವಿವಾರದಿಂದ ಬೋಟ್‌ಗಳು ವಾಪಸಾ ಗುವುದಕ್ಕೆ ಆರಂಭಿಸಿದ್ದವು. ಮಂಗಳವಾರದ ವರೆಗೆ ಸುಮಾರು 400ರಷ್ಟು ಬೋಟುಗಳು ದಕ್ಕೆಗೆ ಆಗಮಿಸಿ ನಿಲುಗಡೆಗೊಂಡಿದ್ದರು ಮಂಗಳವಾರ ಈ ಸಂಖ್ಯೆ ಅಧಿಕವಿತ್ತು. ಹೀಗಾಗಿ ದಕ್ಕೆಯಲ್ಲಿ ಮೀನುಗಾರರು, ಮಾರಾಟಗಾರರು ಮತ್ತು ಗ್ರಾಹಕರ ಜನಜಂಗುಳಿ ಏರ್ಪಟ್ಟಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ದಕ್ಕೆ ಬಂದ್ ಮಾಡುವಂತೆ ಮೀನುಗಾರಿಕೆ ಇಲಾಖೆಗೆ ಸೂಚಿಸಿದ್ದರು.
ದಯವಿಟ್ಟು ಮನೆಯಲ್ಲಿರಿ
ಆಳಸಮುದ್ರ ಮೀನುಗಾರಿಕೆಗೆ ಕೊನೆಯ ದಿನವಾದ ಬುಧವಾರ ತಡರಾತ್ರಿಯ ವರೆಗೂ ದಕ್ಕೆಯಲ್ಲಿ ಜನಜಾತ್ರೆ ಏರ್ಪಟ್ಟಿತ್ತು. ಸಾಮಾಜಿಕ ಅಂತರ, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಯಾವುದೂ ಇರಲಿಲ್ಲ. ಗುಂಪು ಸೇರಬೇಡಿ… ಎಂದು ಮೀನುಗಾರರೇ ವಿನಂತಿಸುವ ದೃಶ್ಯ ಕಂಡುಬಂತು.