ಹೊನ್ನಾವರ: ಗಾಳಿ ಮಳೆಯಿಂದ ಸ್ಥಗಿತವಾಗಿದ್ದ ಮೀನುಗಾರಿಕೆ ಇದೀಗ ಆರಂಭವಾಗಿದೆ. ಮೊದಲ ದಿನ 30 ಬೋಟ್‌ಗಳು ಕಡಲಿಗಿಳಿದಿದ್ದವು. ಭರ್ಜರಿ ಮೀನು ಬೇಟೆ ನಡೆಸಿದರೂ ಅಳವೆ ಸಮಸ್ಯೆಯಿಂದಾಗಿ ಒಳಬರಲು ಸಾಧ್ಯವಾಗಿಲ್ಲ.
ಕೇವಲ 3 ಬೋಟ್‌ಗಳು ಮೀನು ತಂದವು. ಇಂದೂ 25ಬೋಟ್‌ಗಳು ಕಡಲಿಗಿಳಿದಿವೆ. ಕೇವಲ 2ಬೋಟ್‌ಗಳು ಬಂಗಡೆ ಮೀನು ತಂದಿವೆ.
ಪ್ರತಿರ್ಷದಂತೆ ಶರಾವತಿ ಸಂಗಮದ ಅಳವೆಯಲ್ಲಿ ಹೂಳು ತುಂಬಿದೆ. ಪ್ರವಾಹದ ವೇಗವನ್ನು ಅವಲಂಬಿಸಿ ನೀರಿನಡಿ ಹೂಳು ಸ್ಥಿತ್ಯಂತರವಾಗುವುದರಿಂದ ಕಾಳಜಿ ಪೂರ್ವಕವಾಗಿ ಹೊರಹೋದರೂ ಮೀನು ತುಂಬಿಕೊಂಡು ಭಾರವಾದ ಬೋಟ್‌ಗಳನ್ನು ಒಳತರುವುದು ಸವಾಲು. ರಸ್ತೆಯಲ್ಲಿ ಹೊಂಡಗಳು ಕಾಣುತ್ತವೆ. ಹೊಂಡ ತಪ್ಪಿಸಲು ಹೋಗಿ ಅಪಘಾತಗಳಾಗುತ್ತವೆ. ನೀರಿನಡಿ ಹೊಯ್ಗೆದಿಬ್ಬಗಳು ಕಾಣುವುದಿಲ್ಲ. ಯಾವ ಲೆಕ್ಕಾಚಾರ ಹಾಕಿಬಂದರೂ ಬೋಟ್ದಿಬ್ಬಕ್ಕೆ ಅಪ್ಪಳಿಸಿದರೆ ಕಥೆ ಮುಗಿದಂತೆ. ಹಲವಾರು ವರ್ಷಗಳ ಈ ಸಮಸ್ಯೆಗೆ ಕೇಂದ್ರ ಸರ್ಕಾರ ಶಾಶ್ವತ ಪರಿಹಾರಕ್ಕಾಗಿ ಹಣ ಮಂಜೂರು ಮಾಡಿತ್ತು. ಬಂದರಿನ 100 ಎಕರೆ ಭೂಮಿಯನ್ನು ಗುತ್ತಿಗೆ ಪಡೆದವರು ಅಳವೆ ವಹಿಸಿಕೊಂಡರು. ಅಳವೆಗೆ ಬಂದ ಸರ್ಕಾರಿ ಹಣ ಮರಳಿ ಹೋಯಿತು.
ನಾಲ್ಕುವರ್ಷ ಕಳೆದರೂ ಅಳವೆ ಹೂಳೆತ್ತಲಿಲ್ಲ, ಮೀನುಗಾರರ ಕಷ್ಟ ಬಗೆಹರಿಯಲಿಲ್ಲ. ರವಿವಾರ ಯಾಂತ್ರಿಕೃತ ನಾಡದೋಣಿಯಲ್ಲಿ ಮೀನುಗಾರಿಕೆಗೆ ಹೊರಟ ಇಬ್ಬರಲ್ಲಿ ಒಬ್ಬ ಮರಳಲಿಲ್ಲ. ಇನ್ನೊಬ್ಬ ಕಷ್ಟಪಟ್ಟು ದಡ ಸೇರಿದ. ಅಳವೆ ಸಮಸ್ಯೆ ಬಗ್ಗೆ ಮೀನುಗಾರರು ಸಿಟ್ಟುಗೊಂಡಿದ್ದಾರೆ. ಹೇಗೆ ಹೋರಾಡಬೇಕೋ ತಿಳಿಯುತ್ತಿಲ್ಲ. ಜೊತೆಯಲ್ಲಿ ಬಂದರು ಗುತ್ತಿಗೆದಾರರು ನಿರ್ಮಾಣ ಕಾರ್ಯ ಆರಂಭಿಸಿದ್ದು ಮೀನುಗಾರಿಕಾ ರಸ್ತೆ ವಾಹನ ಓಡಿಸಲು ಸಾಧ್ಯವಿಲ್ಲದಷ್ಟು ಹಾಳಾಗಿದೆ. ಒಂದೆಡೆ ಕುಸಿದಿದೆ. ಮೀನುಗಾರರ ವಾಹನಗಳು ಓಡಾಡಲು ಕಷ್ಟವಾಗುತ್ತಿದೆ. ಕಳೆದ ಹಂಗಾಮಿನಲ್ಲಿ ಮೀನು ಉತ್ಪಾದನೆ ಕಡಿಮೆ ಇತ್ತು. ಈ ಬಾರಿ ಭಾರೀ ಮೀನು ಬೀಳುತ್ತಿದೆ. ದಂಡೆಗೆ ತರುವುದೇ ಸಮಸ್ಯೆ. ಮತ್ತೆ ಹೋರಾಟ ಆರಂಭಿಸುತ್ತೇವೆ ಎನ್ನುತ್ತಾರೆ ಮೀನುಗಾರರು.