Advertisement

ಮೀನುಗಾರಿಕೆ ನಿಷೇಧ: ಬೆಸ್ತರ ಬದುಕು ದುಸ್ತರ

06:00 AM Jun 23, 2018 | |

ಕಾಸರಗೋಡು: ಮತ್ಸ್ಯ ಸಂಪತ್ತನ್ನು ಹೆಚ್ಚಿಸುವ ಉದ್ದೇಶದಿಂದ ಮೀನುಗಾರಿಕೆ ನಿಷೇಧಿಸಿದರೂ ಅದನ್ನೇ ಕಸುಬನ್ನಾಗಿಸಿಕೊಂಡ ಮೀನು ಕಾರ್ಮಿಕರಿಗೆ ಕೆಲಸವಿಲ್ಲದೆ ಕಷ್ಟದ ಪರಿಸ್ಥಿತಿ ಎದುರಾಗಿದೆ. ಕೆಲಸವಿಲ್ಲದೆ 52 ದಿನಗಳು ಉಪವಾಸ ಮತ್ತು ಸಂಕಷ್ಟದ ದಿನಗಳಾಗಲಿವೆ. 

Advertisement

ಮೀನುಗಾರಿಕೆ ನಿಷೇಧ ಜಾರಿಗೆ ಬಂದ ದಿನದಿಂದಲೇ ಮೀನುಗಾರರಿಗೆ ಸಂಕಷ್ಟದ ದಿನಗಳು ಆರಂಭಗೊಂಡಿವೆ.
ಮೀನುಗಾರಿಕೆ ನಿಷೇಧದಿಂದ ಮತ್ಸ್ಯ ಸಂಪತ್ತು ಹೆಚ್ಚುವುದು ನಿಜವಾಗಿದ್ದರೂ ಮೀನು ಕಾರ್ಮಿಕರಿಗೆ ಕಷ್ಟಕಾಲವೆಂದೇ ಪರಿಗಣಿಸಲಾಗಿದೆ. ನಿತ್ಯ ದುಡಿದರೆ ಮಾತ್ರ ಊಟ   ಎನ್ನುವಂತಿರುವ ಮೀನು ಕಾರ್ಮಿಕರಿಗೆ ಕೆಲಸವಿಲ್ಲದೆ ಹೈರಾಣಾಗಿದ್ದಾರೆ. ಸಂಪಾದನೆಗೆ ಅನ್ಯ ಮಾರ್ಗವಿಲ್ಲದೆ ಈ ಬಡ ಮೀನುಗಾರರ ಕುಟುಂಬಗಳು ಹಸಿವಿನಿಂದ ತತ್ತರಿಸುವಂತೆ ಮಾಡಿದೆ. ಮೀನುಗಾರಿಕೆ ಬಿಟ್ಟರೆ ಬೇರೆ ಕೆಲಸ ಮಾಡಿ ಅಭ್ಯಾಸವಿಲ್ಲದ ಬೆಸ್ತರಿಗೆ ಬೇರೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ಬೆರಳೆಣಿಕೆಯ ಮಂದಿ ಬೇರೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದರೂ ಕೆಲಸ ಸಿಕ್ಕಿದ್ದಲ್ಲಿ ಸುಗಮವಾಗಿ ಸಂಸಾರ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

ಮೋಸಕ್ಕೊಳಗಾಗುವ 
ಮೀನು ಮಾರಾಟ ಮಹಿಳೆಯರು

ಬೆಸ್ತರ ಕುಟುಂಬದ ಮಹಿಳೆಯರೂ ಈ ಕಾಲಾವಧಿಯಲ್ಲಿ ಮೋಸ ಹೋಗುವುದೇ ಹೆಚ್ಚು. ಮೀನು ಮಾರಾಟ ಮಾಡುವ ಮಹಿಳೆಯರು ಕರ್ನಾಟಕ ಸಹಿತ ಬೇರೆ ರಾಜ್ಯಗಳಿಂದ ಬರುವ ಮೀನುಗಳನ್ನು ಹರಾಜಿನ ಮೂಲಕ ಪಡೆದುಕೊಂಡು ಮಾರಾಟ ಮಾಡುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ಮಹಿಳೆಯರು ಮೋಸ ಹೋಗುತ್ತಿದ್ದಾರೆ. 

ಐಸ್‌ ಬೆರೆಸಿದ ಮೀನನ್ನು ಹರಾಜಿನಲ್ಲಿ ಖರೀದಿಸುವಾಗ ಮೀನು ತುಂಬಿದ ಪೆಟ್ಟಿಗೆಯ ಅಡಿಭಾಗದಲ್ಲಿ ಐಸನ್ನು ತುಂಬಿ ತೂಕವನ್ನು ಹೆಚ್ಚುವಂತೆ ಮಾಡಲಾಗುತ್ತಿದೆ.  ಮೇಲ್ನೋಟಕ್ಕೆ    ಯಾರಿಗೂ ಐಸ್‌ ತುಂಬಿಸಿರುವ ಬಗ್ಗೆ ತಿಳಿಯುವುದಿಲ್ಲ. ಎಲ್ಲ ಮೀನುಗಳನ್ನು ಮಾರಾಟ ಮಾಡಿದ ಬಳಿಕವೇ ತಾವು ಮೋಸ ಹೋಗಿರುವುದು ತಿಳಿದು ಬರುತ್ತದೆ. 
ಆ ಸಂದರ್ಭದಲ್ಲಿ ಕಾಲ ಮಿಂಚಿರುತ್ತದೆ. ತಾವು ಮೋಸ ಹೋದ ಬಗ್ಗೆ ಯಾರಲ್ಲೂ ಹೇಳಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ತೊಳಲಾಡುತ್ತಾರೆ.

ಹೊಳೆಗಳೇ ಏಕೈಕ ಆಶ್ರಯ 
ಮೀನುಗಾರಿಕೆ ನಿಷೇಧ ಜಾರಿಗೆ ಬರುತ್ತಲೇ ಮೀನು ಕಾರ್ಮಿಕರಿಗೆ ಹೊಳೆಗಳೇ ಆಶ್ರಯ. ಆದರೆ ಸಮುದ್ರದಲ್ಲಿ ಮೀನು ಹಿಡಿಯುವುದಕ್ಕಿಂತಲೂ ಹೊಳೆ ಯಲ್ಲಿ ಮೀನುಗಾರಿಕೆ ಕಷ್ಟ ಎಂಬುದು ಮೀನು ಕಾರ್ಮಿಕರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾರೆ. 

Advertisement

ಹೊಳೆಯಲ್ಲಿ ಮೀನು ಹಿಡಿಯಲು ದೊಡ್ಡ ಬಲೆಗಳನ್ನು  ಉಪ ಯೋಗಿಸಲಾಗುತ್ತದೆ.ಸಂಜೆ 5 ಗಂಟೆಗೆ ಹೊಳೆಯಲ್ಲಿ ಬಲೆ ಬಿಡಿಸಿಟ್ಟರೆ ಬಳಿಕ ಮರುದಿನ ಮುಂಜಾನೆ ಮೂರು ಗಂಟೆಗೆ ಬಲೆಯನ್ನು ತೆಗೆಯಲಾಗುತ್ತದೆ. ಈ ಸಂದರ್ಭದಲ್ಲಿ ಮೀನು ಸಿಕ್ಕಿದರೆ ಸಿಕ್ಕಿತು.ಇಲ್ಲದಿದ್ದರೆ ಇಲ್ಲ.ಹೆಚ್ಚಿನ ಸಂದರ್ಭದಲ್ಲಿ ಬಲೆ ತುಂಬಾ ಕಲ್ಲು-ಮುಳ್ಳು ಎಂಬಂತೆ ತ್ಯಾಜ್ಯ ರಾಶಿಯೇ ತುಂಬಿಕೊಂಡಿರುತ್ತದೆ.ಇವುಗಳನ್ನು ತೆರವುಗೊಳಿಸಿ ಸ್ವತ್ಛಗೊಳಿಸುವ ಸಂದರ್ಭದಲ್ಲಿ ಬಲೆ ಹರಿದು ಹೋಗುವುದು ಸಾಮಾನ್ಯವಾಗಿದೆ.ಇದರಿಂದಾಗಿ ಭಾರೀ ನಷ್ಟ ಉಂಟಾಗುತ್ತಿದೆ.

ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಸಮುದ್ರ ಕಿನಾರೆಯಲ್ಲಿ ವಾಸಿಸುವ ಬೆಸ್ತರಿಗೆ ನಿದ್ದೆ ಇಲ್ಲದ ರಾತ್ರಿ ಗಳಾಗುತ್ತವೆ. ಈಗಾಗಲೇ ಸಮುದ್ರ ಕಿನಾರೆಯಲ್ಲಿ ಹಲವು ಮನೆಗಳು ಸಮುದ್ರ ಪಾಲಾಗಿದ್ದು, ಕುಟುಂಬಗಳು ಸಂಕಷ್ಟವನ್ನು ಎದುರಿಸುವಂತಾಗಿದೆ. ಕೆಲವು ಮನೆಗಳಂತೂ ಸೋರುತ್ತಿರುವುದು ಕೂಡ ಸಮಸ್ಯೆಯಾಗಿ ಕಾಡುತ್ತಿದೆ. ಮಳೆಗಾಲದಲ್ಲಿ ಎದುರಾಗುವ ಸಾಮಾನ್ಯ ರೋಗಗಳೂ ತೀವ್ರವಾಗಿ ಕಾಡುತ್ತಿದೆ.

ಇನ್ನೂ ಲಭಿಸದ ಧನಸಹಾಯ 
ಮಳೆಗಾಲದಲ್ಲಿ ಮೀನುಗಾರಿಕೆ ಕಷ್ಟ. ಅಲ್ಲದೆ ಸಾಂಪ್ರದಾಯಿಕ ದೋಣಿಗಳಲ್ಲಿ ಮೀನುಗಾರಿಕೆ ನಡೆಸಿದರೂ ಸಾಕಷ್ಟು ಮೀನು ಲಭಿಸುತ್ತಿಲ್ಲ. ಇದರಿಂದಾಗಿ ಮೀನು ಕಾರ್ಮಿಕರು ಉಪವಾಸ ಬೀಳುವ ಪರಿಸ್ಥಿತಿಯಿದೆ. ಮೀನು ಮಾರಾಟಗಾರರ ಪರಿಸ್ಥಿತಿಯೂ ಇದೇ ಆಗಿದೆ. 

ಮೀನುಗಾರಿಕೆ ಕಾಲಾವಧಿಯಲ್ಲಿ ಮೀನು ಕಾರ್ಮಿಕರಿಗೆ ಉಚಿತ ಪಡಿತರ ಮಂಜೂರು ಮಾಡಲಾಗುತ್ತಿದೆ. ಆದರೆ ಪಡಿತರ ಉತ್ತಮ ಗುಣಮಟ್ಟದಲ್ಲಿ ಇರುವುದಿಲ್ಲ. ಈ ಕಾರಣದಿಂದ ಪ್ರಸ್ತುತ ವರ್ಷ ಮೀನುಗಾರಿಕೆ ನಿಷೇಧದ ಮುಂಚಿತವಾಗಿ ಜಿಲ್ಲಾಧಿಕಾರಿ ಜೀವನ್‌ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಚಿತ ಪಡಿತರದ ಬದಲಾಗಿ ಧನಸಹಾಯ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಈ ವರೆಗೂ ಧನಸಹಾಯ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರವೇ ಧನಸಹಾಯ ವಿತರಿಸಬೇಕು.
– ಜಿ. ನಾರಾಯಣನ್‌
ಮೀನು ಕಾರ್ಮಿಕ ಕಾಂಗ್ರೆಸ್‌ ಮುಖಂಡ  

ಚಿತ್ರ : ಶ್ರೀಕಾಂತ್‌ ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next