Advertisement

ಮೀನುಗಾರಿಕೆ : ಇವರೆಲ್ಲರ ಸಂಕಷ್ಟಕ್ಕೂ ಮದ್ದು ಹುಡುಕಬೇಕು

08:48 AM May 18, 2020 | Sriram |

ಜಿಲ್ಲೆಯ ಸ್ಥಳೀಯ ಆರ್ಥಿಕತೆಗೆ ಮೀನುಗಾರಿಕೆಯೂ ಚೈತನ್ಯ ಶಕ್ತಿಯನ್ನು ತುಂಬಿದೆ. ಮೀನುಗಾರರು, ಅದಕ್ಕೆ ಹೊಂದಿಕೊಂಡ ಕಾರ್ಮಿಕ ವರ್ಗ ಹಾಗೂ ಉದ್ಯಮ- ಈ ಮೂರು ವಲಯದ ಸಕ್ರಿಯವಾಗಿದ್ದರೆ ಸ್ಥಳೀಯ ಆರ್ಥಿಕತೆಯ ಆರೋಗ್ಯವೂ ಚೆನ್ನಾಗಿದ್ದಂತೆ. ಸರಕಾರ, ಜಿಲ್ಲಾಡಳಿತ ಗಮನಿಸುವಾಗ ಈ ಮೂರು ವಲಯಗಳ ಸುಸ್ಥಿರ ಅಭಿವೃದ್ಧಿಗೆ ಗಮನ ಕೊಡುವುದು ಸೂಕ್ತ. ಇಂದು ನಾನಾ ಕಾರಣಗಳಿಂದ ಮೀನುಗಾರಿಕೆ ತೆರೆಗೆ ಸರಿಯುವ ಆತಂಕವೂ ಕಾಡುತ್ತಿದೆ.

Advertisement

ಉದಯವಾಣಿ ಅಧ್ಯಯನ ತಂಡ- ಉಡುಪಿ: ಸದ್ಯಕ್ಕೆ ಕೇಳಿಬರುತ್ತಿರುವ ಮಾತು ಒಂದೇ  “ಸಮುದ್ರದಲ್ಲಿ ಮೀನು ಮುಗಿದಿದೆ’ !

ಮೀನುಗಾರಿಕೆ ಉಡುಪಿಯ ಸ್ಥಳೀಯ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ಹೊಂದಿದೆ. ಲಕ್ಷಾಂತರ ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಲ್ಗೊಂಡಿರುವ ಈ ಕ್ಷೇತ್ರದಲ್ಲೂ ಎರಡು ವಲಯಗಳಿವೆ. ಒಂದು ಮೀನುಗಾರರು, ಮೀನುಗಾರಿಕಾ ಕಾರ್ಮಿಕರು ಹಾಗೂ ಸಂಸ್ಕರಣಾ ಕ್ಷೇತ್ರ. ಇವುಗಳ ಮಧ್ಯೆ ಅವಿನಾಭಾವ ಸಂಬಂಧವಿದೆ.

ಈ ವಲಯಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ವಹಿವಾಟು ನಡೆಸುತ್ತಿವೆ ಎನ್ನುವುದರ ಜತೆಗೆ ಹೊಸ ಹೊಸ ಸಮಸ್ಯೆಗಳನ್ನು ಎದುರಿಸುತ್ತಿವೆ. ಎಲ್ಲರ ಸಮಸ್ಯೆಗಳಲ್ಲಿ ಸಾಮ್ಯತೆ ಮೇಲ್ನೋಟಕ್ಕೆ ಕಾಣಸಿಗದು. ಉದಾಹರಣೆಗೆ ಇಂದಿನ ಮೀನುಗಾರರ ಮೊದಲಿಗೆ ಪಟ್ಟಿ ಮಾಡುವ ಸಮಸ್ಯೆಯೆಂದರೆ, ಈಗ ಮುಂಚಿನಂತೆ ಮೀನು ಗಳು ಸಿಗೋಲ್ಲ ಎಂಬುದು. ಆದ್ದರಿಂದಲೇ ನಾವು ಮೀನುಗಾರಿಕೆಗೆ ಹೋದರೆ ಆ ಖರ್ಚನ್ನೂ ನಿಭಾಯಿಸುವಷ್ಟು ಮೀನು ಕೆಲವೊಮ್ಮೆ ಸಿಗದು ಎನ್ನುತ್ತಾರೆ ಮೀನುಗಾರರು.

40268 ಕ್ಕೂ ಹೆಚ್ಚು ಕುಟುಂಬಗಳ ವೃತ್ತಿಪರ ಮೀನುಗಾರರು ಮೀನುಗಾರಿಕೆ ಯನ್ನು ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ 53 ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಗಳಿದ್ದು, ಮಲ್ಪೆ ಮೀನುಗಾರಿಕಾ ಬಂದರು ಜಿಲ್ಲೆಯ ಪ್ರಮುಖ ಸರ್ವ ಋತು ಮೀನುಗಾರಿಕಾ ಬಂದರು. ಮೀನು ಕಡಿಮೆಯಾಗುತ್ತಿದೆ

Advertisement

2018-19 ರ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 1, 21 ಲಕ್ಷ ಟನ್‌ ಮೀನು ಸಿಕ್ಕಿತ್ತು. 2017-18 ರಲ್ಲಿ ಈ ಪ್ರಮಾಣ 1, 28, 136 ಟನ್‌ಗಳಿದ್ದರೆ, 2016-17 ರಲ್ಲಿ 1, 44, 525 ಟನ್‌ ಸಿಕ್ಕಿತ್ತು ಎನ್ನುತ್ತವೆ ಅಂಕಿ ಅಂಶಗಳು. ಇದು ಕಡಿಮೆಯಾಗುತ್ತಿರುವ ಪ್ರಮಾಣವನ್ನು ಸೂಚಿಸುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ. ಆದರೆ ನಾವೂ ಕಾರಣವಾಗಿದ್ದೇವೆ. ಸಮುದ್ರ ಕಲುಷಿತಗೊಳಿಸುತ್ತಿರುವುದಷ್ಟೇ ಅಲ್ಲ, ನಾವು ಸಮುದ್ರವನ್ನು ಅಕ್ಷಯ ಪಾತ್ರೆ ಎಂದು ತಿಳಿದಿರುವುದೂ ಮತ್ಸ್ಯ ಕ್ಷಾಮಕ್ಕೆ ಕಾರಣವಾಗುತ್ತಿದೆ ಎಂಬುದೂ ಸತ್ಯ.

ಇದರೊಂದಿಗೆ ಮಲ್ಪೆಯ ಹಿರಿಯ ಮೀನುಗಾರರೊಬ್ಬರು ಹೇಳುವಂತೆ, ಅದಕ್ಕಿಂತ ಹೆಚ್ಚಾಗಿ ನಾವು ಮೀನುಗಾರಿಕೆ ಮಾಡುವ ವಿಧಾನ ಬದಲಿಸಿದ್ದೇವೆ. ಸ್ಪೀಡ್‌ ಬೋಟ್‌, ಪರ್ಸಿನ್‌ ಇತ್ಯಾದಿ ಎನ್ನುತ್ತಾ ಸಮುದ್ರದಲ್ಲಿರುವ ಮೀನು ಮೊಟ್ಟೆ, ಮರಿ ಏನೂ ಬಿಡದೇ ಎಲ್ಲವನ್ನೂ ಬಾಚಿ ದಡಕ್ಕೆ ತಂದು ಸುರಿದರೆ ಹೇಗೆ ಮತ್ಸ್ಯ ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ಅವರ ಪ್ರಶ್ನೆ.

ಅನಗತ್ಯವಾಗಿ ಕಡಿಮೆ ಬೆಲೆಗೆ ಹೆಚ್ಚು ಸಣ್ಣ ಮೀನುಗಳನ್ನು ಕಾರ್ಖಾನೆಗಳಿಗೆ ಕೊಟ್ಟು ನಾವು ಭವಿಷ್ಯಕ್ಕೆ ಮತ್ಸ್ಯ ಸಂಪತ್ತನ್ನು ನಾಶ ಪಡಿಸುತ್ತಿದ್ದೇವೆ ಎನ್ನುತ್ತಾರೆ ಅವರು.

ಒಮ್ಮೆ ಮೀನು ಗಾರಿಕೆಗೆ ತೆರಳಿದರೆ ಕನಿಷ್ಠ 3 ದಿನ ಸಮುದ್ರ ದಲ್ಲೇ ಕಳೆಯಬೇಕು. ಕನಿಷ್ಠ 1 ಸಾವಿರ ಲೀಟರ್‌ ಡೀಸೆಲ್‌ ಅಗತ್ಯವಿದ್ದು, 70 ಸಾವಿರ ರೂ. ಬೇಕು. 25 ರಿಂದ 30 ಮೀನುಗಾರರು ಇರುತ್ತಾರೆ. ಆಹಾರ, ಕಾರ್ಮಿಕ ವೆಚ್ಚ ಎಲ್ಲ ಸೇರಿ ಏನಿಲ್ಲವೆಂದರೂ 1.25 ಲಕ್ಷರೂ. ಕನಿಷ್ಠ ಖರ್ಚಾಗುತ್ತದೆ. ಆದರೆ ಖರ್ಚಾದಷ್ಟು ಕೂಡ ಮೀನು ಸಿಗುತ್ತಿಲ್ಲ ಎನ್ನುತ್ತಾರೆ ಪರ್ಸಿನ್‌ ಮೀನುಗಾರರು.

ಜಿಲ್ಲೆಯಲ್ಲಿ 87 ಪರ್ಸಿನ್‌ ದೋಣಿಗಳು, 1650 ಟ್ರಾಲ್ ಗಳು, 3918 ಒ.ಬಿ.ಎಂ. ಚಾಲಿತ ನಾಡದೋಣಿಗಳು ಮತ್ತು 1865 ಯಾಂತ್ರೀಕೃತವಲ್ಲದ ನಾಡದೋಣಿಗಳು ಕಾರ್ಯನಿರ್ವಹಿಸುತ್ತಿವೆ.

ಸಮಸ್ಯೆಗಳು ಏನು?
ಪ್ರತಿಕೂಲ ಹವಾಮಾನ, ಮತ್ಸ್ಯಕ್ಷಾಮ ಇತ್ಯಾದಿ ಕಾರಣಗಳಿಂದ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಮೀನುಗಾರಿಕೆಗೆ ತೆರಳಿದರೂ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಕಾರಣಕ್ಕೆ ಗಂಗೊಳ್ಳಿ, ಮಲ್ಪೆ, ಮರವಂತೆ, ಕೊಡೇರಿ, ಶಿರೂರು ಅಳ್ವಿಗದ್ದೆ, ಸಹಿತ ಹೆಚ್ಚಿನ ಎಲ್ಲ ಬಂದರುಗಳಲ್ಲಿ ಬೋಟುಗಳು ದಡದಲ್ಲೇ ಲಂಗರು ಹಾಕಿವೆ. ಕಾರ್ಮಿಕರೂ ಕೆಲಸವಿಲ್ಲದೇ ಹತಾಶರಾಗಿದ್ದು, ಅವರಿಗೂ ಸಾಕಷ್ಟು ಸೌಲಭ್ಯಗಳು ಸಿಗಬೇಕಿವೆ.

ಕಾರ್ಖಾನೆ ಇತ್ಯಾದಿ ಸ್ಥಿತಿ
ಮೀನುಗಳನ್ನು ತಾಜಾಸ್ಥಿತಿಯಲ್ಲಿ ಸಂಗ್ರಹಿಸಿಡಲು 17 ಶೀತಲೀಕರಣ ಕೇಂದ್ರಗಳು, 87 ಮಂಜುಗಡ್ಡೆ ತಯಾರಿಕಾ ಕಾರ್ಖಾನೆಗಳಿವೆ. 112 ಮೀನು ಮಾರುಕಟ್ಟೆಗಳಿವೆ. ಕಡಲ ಮೀನು ಉತ್ಪಾದನೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಹೊಂದಿದೆ. ಹಲವಾರು ಫಿಶ್‌ ಕತ್ತರಿಸುವ ಫ್ಯಾಕ್ಟರಿ(ಶೆಡ್‌)ಗಳಿವೆ. ಇಲ್ಲಿ ದೊಡ್ಡ ಮೀನುಗಳನ್ನು ಕತ್ತರಿಸಿ, ಬೋನ್‌ ಲೆಸ್‌ ಫಿಶ್‌ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ವಿದೇಶದಲ್ಲಿ ಹೆಚ್ಚು ಬೇಡಿಕೆ ಇದೆ. ಇಲ್ಲಿ ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದಾರೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 5 ಫಿಶ್‌ಮಿಲ್‌ಗ‌ಳಿವೆ. ಅವುಗಳಿಗೆ ನಿತ್ಯ 5,000 ಟನ್‌ ಹಸಿ ಮೀನಿನ ಅಗತ್ಯವಿದ್ದು, ತಿಂಗಳಿಗೆ 62,500 ಟನ್‌ ಬೇಕೇಬೇಕು. ಒಂದು ಫಿಶ್‌ಮಿಲ್‌ ವಾರ್ಷಿಕ 250 ರಿಂದ 300 ಕೋಟಿ. ರೂ. ವಹಿವಾಟು ನಡೆಸುತ್ತದೆ.

ಫಿಶ್‌ ಮಿಲ್‌ಗ‌ಳಲ್ಲಿ ಮೀನಿನ ಪುಡಿ ಹಾಗೂ ಎಣ್ಣೆ ತಯಾರಿಸ ಲಾಗುತ್ತದೆ. ಎಣ್ಣೆ ತಯಾರಿಕೆಗೆ ಹೆಚ್ಚಾಗಿ ಭೂತಾಯಿ ಮೀನು ಬಳಸಿಕೊಳ್ಳಲಾಗುತ್ತದೆ. 2 ವರ್ಷದಿಂದ ಭೂತಾಯಿ ಸಿಗದೆ ಫಿಶ್‌ ಮಿಲ್‌ಗ‌ಳು ನಷ್ಟ ಅನುಭವಿಸುತ್ತಿವೆ. ಪ್ರಸ್ತುತ ಲಾಕ್‌ಡೌನ್‌ನಿಂದಾಗಿ ಫಿಶ್‌ಮಿಲ್‌ಗ‌ಳೂ ಸ್ಥಗಿತಗೊಂಡಿವೆ. ಇದರಿಂದಾಗಿ ಸಾವಿರಾರು ಕಾರ್ಮಿಕರಿಗೆ ಕೈಯಿಂದ ವೇತನ ನೀಡುವಂತಾಗಿದೆ ಎನ್ನುತ್ತಾರೆ ಉದ್ಯಮಿಗಳು.

ಮೀನುಗಾರಿಕೆ ಸಂಪೂರ್ಣ ಸ್ಥಗಿತವಾಗಿದ್ದು, ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಬೋಟ್‌ಗಳಿಗೆ ನೀಡುವ ಡಿಸೇಲ್‌ ಮೇಲೆ ವಿಧಿಸಲಾಗುವ ಶೇ. 13 ಕರ (ರಸ್ತೆ ತೆರಿಗೆ) ರದ್ದುಗೊಳಿಸಬೇಕು. ಮೀನಿನ ಎಣ್ಣೆಯ ಮೇಲಿನ ತೆರಿಗೆಯನ್ನು ಶೇ 4ಕ್ಕೆ ಇಳಿಸಬೇಕೆಂಬ ಬೇಡಿಕೆಗಳೂ ಇವೆ.

ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ ?
1. ಡೀಸೆಲ್‌ನ ಸಬ್ಸಿಡಿ ಈಗ ತೀರಾ ವಿಳಂಬವಾಗಿ ಸಿಗುತ್ತಿದ್ದು, ಬಂಕ್‌ನಲ್ಲಿಯೇ ಸಬ್ಸಿಡಿರಹಿತವಾಗಿ ಡೀಸೆಲ್‌ ಸಿಗಬೇಕು.
2.ಬೋಟ್‌ಗಳಿಗೆ ಬಳಸುವ ಎಂಜಿನ್‌, ನೆಟ್‌ ಸಹಿತ ನಾನಾ ವಸ್ತುಗಳ ಮೇಲಿನ ಜಿಎಸ್‌ಟಿ ಇಳಿಸಬೇಕು.
3.ಬೋಟ್‌ ಮಾಲಕರು ಎಪಿಎಲ್‌ ಕಾರ್ಡ್‌ನಡಿ ಬರುತ್ತಿದ್ದು, ಸರಕಾರಿ ಸವಲತ್ತು ಪಡೆಯಲು ಅನುಕೂಲ ಕಲ್ಪಿಸಬೇಕು.
4.ಸರಕಾರವು ಸಬ್ಸಿಡಿ ಸಹಿತ ಬೆಂಬಲ ನೀಡಿ ಮೀನು ರಫ್ತು ಸಂಬಂಧ ಪ್ಯಾಕೇಜಿಂಗ್‌ ಘಟಕಗಳನ್ನು ಪ್ರೋತ್ಸಾಹಿಸಬೇಕು.
5.ವಿಮಾ ಸೌಲಭ್ಯ ನೀಡಿದರೂ ಅದು ಕಠಿನ ಮಾರ್ಗಸೂಚಿಯ ಸರಪಳಿಯೊಳಗಿದೆ. ಇದನ್ನು ಸರಳಗೊಳಿಸಬೇಕು.
6.ಮೀನುಗಾರಿಕಾ ಕಾರ್ಮಿಕರಿಗೆ ಅಸಂಘಟಿತ ವಲಯಕ್ಕಿಂತ ಹೆಚ್ಚಿನ ಸೌಲಭ್ಯ ಸಿಗಬೇಕು.
7.ಕಾರ್ಮಿಕರಿಗೆ ಅವಘಡ ಮೊತ್ತವನ್ನು ಹೆಚ್ಚು ಮಾಡಿ, ಕ್ಷೇಮಾಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.

ಬಂದರು ಅಭಿವೃದ್ಧಿಗೆ ಗಮನ ಅಗತ್ಯ
ಸರಕಾರವು ಘೋಷಿಸಿರುವ ಪ್ಯಾಕೇಜ್‌ ತಳಮಟ್ಟದವರೆಗೆ ತಲುಪುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಬಂದರು ಅಭಿವೃದ್ಧಿಗೆ ಗಮನ ನೀಡಬೇಕು.
-ಕೃಷ್ಣ ಎಸ್‌. ಸುವರ್ಣ
ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next