Advertisement

ಭರಪೂರ ಮೀನುಗಾರಿಕೆ; ಮೀನುಗಾರರಲ್ಲಿ ಮಂದಹಾಸ

08:42 PM Oct 03, 2021 | Team Udayavani |

ಮಹಾನಗರ: ಈ ವರ್ಷದ ಮೀನುಗಾರಿಕೆ ಋತುವಿನ ಶುರುವಲ್ಲೇ ಭರಪೂರ ಮೀನುಗಾರಿಕೆಯಾಗಿದ್ದು, ಮೀನುಗಾರರ ಮನದಲ್ಲಿ ಮಂದಹಾಸ ಮೂಡಿಸಿದೆ.

Advertisement

ಕಳೆದ ವರ್ಷ ಕೋವಿಡ್‌, ಚಂಡ ಮಾರುತದಿಂದ ಮೀನುಗಾರಿಕೆ ಉದ್ಯಮ ತತ್ತರಿಸಿ ಹೋಗಿತ್ತು. ಹೀಗಾಗಿ ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಸಾವಿರಾರು ಮಂದಿ ಸಂಕಷ್ಟದಲ್ಲಿದ್ದರು. ಆದರೆ ಈ ಬಾರಿಯ ಮೀನುಗಾರಿಕೆ ಋತು ಆರಂಭವಾದಂದಿನಿಂದ ಇಲ್ಲಿಯವರೆಗೆ ಉತ್ತಮ ಮೀನುಗಾರಿಕೆ ನಡೆದಿದ್ದು, ಮೀನು ಲಭ್ಯತೆ ಕೂಡ ಕಳೆದ ಬಾರಿಗಿಂತ ಅಧಿಕವಾಗಿದೆ. ಹೀಗಾಗಿ ಮೀನು ಪ್ರಿಯರಿಗೆ ಸ್ಥಳೀಯವಾಗಿ ಅಗ್ಗದ ದರದಲ್ಲಿ ವಿವಿಧ ಬಗೆಯ ಮೀನುಗಳು ಸಿಗಲಾರಂಭಿಸಿದೆ.

ಟ್ರಾಲ್‌ಬೋಟ್‌ನವರಿಗೆ ಕಪ್ಪೆ ಬೊಂಡಾಸ್‌, ಕೋಲು ಬೊಂಡಾಸ್‌, ರಾಣಿ ಫಿಶ್‌ ಮೊದಲಾದ ವಿದೇಶಕ್ಕೆ ರಫ್ತಾಗುವ ಮೀನುಗಳು ಕೂಡ ವಿಪುಲ ಪ್ರಮಾಣದಲ್ಲಿ ಲಭಿಸಿವೆ. ಪರ್ಶಿಯನ್‌ ಬೋಟ್‌ಗಳಿಗೂ ಇಳುವರಿ ಉತ್ತಮವಾಗಿದೆ.

ಜೂನ್‌-ಜುಲೈ ತಿಂಗಳ ರಜೆ ಬಳಿಕ ಆ. 1ರಂದು ಮೀನುಗಾರಿಕೆ ಋತು ಆರಂಭಗೊಳ್ಳಬೇಕಿತ್ತು. ಬೋಟ್‌ ಮಾಲಕರಿಗೆ ಡೀಸೆಲ್‌ ಸಬ್ಸಿಡಿಯ ಪಾಸ್‌ ಬುಕ್‌ ಸಿಗುವಾಗ ಆದ ವಿಳಂಬದಿಂದಾಗಿ ಹೆಚ್ಚಿನ ಬೋಟ್‌ಗಳು ಆ. 15ರ ಬಳಿಕ ಡೀಸೆಲ್‌ ಡೆಲಿವರಿ ಪಾಯಿಂಟ್‌ನಲ್ಲಿ ಕರ ರಹಿತ ದರದಲ್ಲಿ ಡೀಸೆಲ್‌ ಪಡೆದು ಪೂರ್ಣ ಪ್ರಮಾಣದಲ್ಲಿ ಮೀನುಗಾರಿಕೆಗೆ ತೆರಳಿವೆ.

ಈ ವರ್ಷದ ಮೀನುಗಾರಿಕೆಯಲ್ಲಿ ಅಂಜಲ್‌, ಬೊಂಡಾಸ್‌, ಕಪ್ಪೆ ಬೊಂಡಾಸ್‌, ಮದ್ಮಲ್‌, ಫಿಶ್‌ ಮೀಲ್‌ಗೆ ಹೋಗುವ ಮುರಿ ಮೀನ್‌ ಸಹಿತ ಉತ್ತಮ ಮೀನುಗಾರಿಕೆ ನಡೆಯುತ್ತಿದೆ. ಮಂಗಳೂರು ಸಹಿತ ಜಿಲ್ಲಾದ್ಯಂತ ಮೀನು ಸಾಗಾಟ ಅಧಿಕವಾಗಿದೆ.

Advertisement

ಇದನ್ನೂ ಓದಿ:ಪಂಜಾಬ್ ಗೆ ಸೋಲುಣಿಸಿದ ಕೊಹ್ಲಿ ಪಡೆ ಪ್ಲೇ ಆಫ್ ನತ್ತ

ಜತೆಗೆ ಮೀನು ಹೊರ ಜಿಲ್ಲೆ/ರಾಜ್ಯಗಳಿಗೆ ಹೋಗುತ್ತಿದೆ. ಸಮುದ್ರ ಪ್ರಶಾಂತವಾಗಿರುವುದರಿಂದ ಆಳ ಸಮುದ್ರ ದಲ್ಲಿ ಉತ್ತಮ ರೀತಿಯಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಇದೇ ರೀತಿಯಲ್ಲಿ ಕೊನೆಯ ತನಕ ಮುಂದುವರಿದರೆ ಈ ವರ್ಷ ಮೀನುಗಾರರಿಗೆ ಲಾಭದಾಯಕವಾಗಲಿದೆ.

ಯಶಸ್ವಿ ವ್ಯಾಪಾರ
ಮೀನುಗಾರಿಕೆ ಉದ್ಯಮದ ಜತೆಗೆ ಬಂದರಿನಲ್ಲಿ ಮಂಜುಗಡ್ಡೆ ಅಂಗಡಿ, ಹೊಟೇಲ್‌, ಫಿಶ್‌ ಕಟ್ಟಿಂಗ್‌, ಟ್ರಾನ್ಸ್‌ ಪೋರ್ಟ್‌ ಸಹಿತ ಎಲ್ಲ ಉದ್ಯಮಗಳೂ ಸದ್ಯ ಯಶಸ್ವಿಯಾಗಿ ನಡೆಯುತ್ತಿವೆ. ಕಾರ್ಮಿಕರಿಗೂ ಕೈ ತುಂಬಾ ಸಂಬಳ ಸಿಗುತ್ತಿದೆ. ಟೆಂಪೋ, ಬೈಕ್‌ಗಳಲ್ಲಿ ಮನೆ ಮನೆಗೆ ಕೊಂಡೊಯ್ದು ಮಾರುವವರಿಗೆ ಸಹಿತ ಎಲ್ಲರಿಗೆ ಉತ್ತಮ ವ್ಯಾಪಾರವಾಗುತ್ತಿದೆ.

ಅಂಜಲ್‌ ಅಗ್ಗ!
ಯಾಂತ್ರೀಕೃತ ಪರ್ಸಿನ್‌ ಬೋಟು, ಟ್ರಾಲ್‌ ಬೋಟ್‌ಗಳು ಈ ಬಾರಿ ಟನ್‌ಗಳಟ್ಟಲೆ ಅಂಜಲ್‌ ಹೇರಿಕೊಂಡು ದಡಕ್ಕೆ ವಾಪಸಾಗುತ್ತಿದ್ದಾರೆ. ಹೀಗಾಗಿ ಅಂಜಲ್‌ ದರ ಕೂಡ ಕಡಿಮೆಯಾಗಿದೆ. ಕೆಲವು ವಾರಗಳ ಹಿಂದಿನ ತನಕ ಕೆಜಿಗೆ 700 ರೂ. ಇದ್ದ ಅಂಜಲ್‌ ದರ ಏಕಾಏಕಿ ಈಗ 300 ರೂ. ಆಸುಪಾಸಿಗೆ ಇಳಿದಿದೆ. 4 ಕೆಜಿಗಿಂತ ಅಧಿಕ ತೂಕದ ಅಂಜಲ್‌ ದರ ಮಾತ್ರ ಕೊಂಚ ಅಧಿಕವಿದೆ. ಕೆಜಿಗೆ 400 ರೂ. ಇದ್ದ ಮಾಂಜಿ ಮೀನಿನ ದರ ಕೂಡ ಈಗ 230 ರೂ. ಆಸುಪಾಸಿನಲ್ಲಿದೆ. ಮೀನು ಅಧಿಕ ಲಭ್ಯವಾಗುತ್ತಿದ್ದಂತೆ ದರ ಕೂಡ ಕಡಿಮೆಯಾಗುತ್ತದೆ.

ದರ ಕಡಿಮೆ
ಮೀನುಗಾರಿಕೆ ಈ ಬಾರಿ ಉತ್ತಮವಿದೆ. ಮುರು, ಕಪ್ಪೆ ಬೊಂಡಾಸ್‌ ಸಹಿತ ಹಲವು ಮೀನುಗಳ ಲಭ್ಯತೆ ಅಧಿಕವಿದೆ. ಬೂತಾಯಿ ಕಡಿಮೆಯಿದೆ. ಮೀನಿನ ಗಾತ್ರದ ಆಧಾರದಲ್ಲಿ ದರ ಈ ಬಾರಿ ಕಡಿಮೆಯಿದೆ.
-ರಾಜರತ್ನ ಸನಿಲ್‌, ಬೋಟ್‌ ಮಾಲಕರು, ಮಂಗಳೂರು

ಸಮೃದ್ಧವಾಗಿದೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೀನುಗಾರಿಕೆ ಅತ್ಯಂತ ಸಮೃದ್ಧವಾಗಿದೆ. ಮೀನು ಲಭ್ಯತೆ ಕೂಡ ಅಧಿಕವಿದೆ. ಆ. 5ರಿಂದ ಇಲ್ಲಿಯವರೆಗೆ ಉತ್ತಮ ಮೀನುಗಾರಿಕೆ ನಡೆದಿದೆ. ಅಂಜಲ್‌ ಸಹಿತ ಹಲವು ಮೀನುಗಳು ಯಥೇತ್ಛವಾಗಿ ದೊರಕುತ್ತಿದೆ. ಬಂಗುಡೆಗೆ ರಫ್ತು ಬೇಡಿಕೆ ಇದೆ.
-ಮೋಹನ್‌ ಬೆಂಗ್ರೆ, ಮೀನುಗಾರ ಮುಖಂಡರು

Advertisement

Udayavani is now on Telegram. Click here to join our channel and stay updated with the latest news.

Next