ಮಂಗಳೂರು/ಮಲ್ಪೆ: ಕರ್ನಾಟಕ ಕರಾವಳಿಯಲ್ಲಿ ಈ ಬಾರಿಯ ಮೀನುಗಾರಿಕಾ ಋತು ಆ. 1ರಿಂದ ಆರಂಭಗೊಳ್ಳಲಿದೆ. ಆದರೆ ವಿವಿಧ ಕಾರಣಗಳಿಗಾಗಿ ಮಂಗಳೂರು ಮತ್ತು ಮಲ್ಪೆಯಿಂದ ಮೊದಲ ದಿನ ಹೆಚ್ಚಿನ ಸಂಖ್ಯೆಯ ಯಾಂತ್ರೀಕೃತ ಬೋಟ್‌ಗಳು ಮೀನುಗಾರಿಕೆ ನಡೆಸುವುದಿಲ್ಲ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಕಾರ್ಮಿಕರು ಈಗಷ್ಟೇ ಆಗಮಿಸುತ್ತಿದ್ದಾರೆ. ಅಗತ್ಯ ಸಿದ್ಧತೆಗಳು ನಡೆಯುತ್ತಿವೆ. ಮೀನುಗಾರರ ಬೇಡಿಕೆಯಂತೆ ಈ ಬಾರಿ ಸರಕಾರವು ಡೀಸೆಲ್ ಡೆಲಿವರಿ ಪಾಯಿಂಟ್‌ಗಳಲ್ಲಿಯೇ ಮಾರಾಟ ತೆರಿಗೆ ಕಡಿತ ಮಾಡಿ ಡೀಸೆಲ್ ನೀಡಲಿದೆ. ಇದಕ್ಕೆ ಸಂಬಂಧಿಸಿದ ಪಾಸ್‌ಬುಕ್‌ಗಳ ವಿತರಣೆ ನಡೆಯುತ್ತಿದೆ. ಶನಿವಾರ ಟ್ರಾಲ್‌ಬೋಟ್ ಮೀನುಗಾರರ ಸಂಘದ ವಾರ್ಷಿಕ ಸಭೆ ನಡೆದಿದ್ದು ಸಭೆಯಲ್ಲಿ ಪಾಸ್‌ಬುಕ್‌ಗಳ ವಿತರಣೆ ಪ್ರಕ್ರಿಯೆ ತ್ವರಿತಗೊಳಿಸುವ ಕುರಿತು ಚರ್ಚಿಸಲಾಗಿದೆ ಎಂದು ಮಂಗಳೂರು ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ತಿಳಿಸಿದ್ದಾರೆ.
ಈಗಿರುವ ಡೀಸೆಲ್ ದರ, ಕಾರ್ಮಿಕರ ವೇತನ ಸೇರಿದಂತೆ ಬೋಟಿನ ಬಲೆ, ರೋಪ್, ಕಬ್ಬಿಣದ ಸಾಮಗ್ರಿಗಳ ದರ ಹೆಚ್ಚಳದಿಂದಾಗಿ ಬೋಟುಗಳನ್ನು ಕಡಲಿಗಿಳಿಸಿ ಮೀನುಗಾರಿಕೆ ನಡೆಸುವುದೇ ಕಷ್ಟವಾಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ ಸಂಕಷ್ಟ ತೋಡಿಕೊಂಡಿದ್ದಾರೆ.
ಮಂಗಳೂರು ಮೀನುಗಾರಿಕಾ ದಕ್ಕೆಯಲ್ಲಿ 1,200 ಟ್ರಾಲ್‌ಬೋಟ್‌ಗಳಿದ್ದು ಹವಾಮಾನ ವೈಪರೀತ್ಯ ಉಂಟಾಗದಿದ್ದರೆ ಹೆಚ್ಚಿನ ಬೋಟ್‌ಗಳು 2-3 ದಿನಗಳಲ್ಲಿ ಮೀನುಗಾರಿಕೆ ಆರಂಭಿಸಲಿವೆ. 90 ಪಸೀìನ್ ಬೋಟ್‌ಗಳಿದ್ದು ಈ ಬೋಟ್‌ಗಳು ಆ. 9ರ ವೇಳೆಗೆ ಆರಂಭಿಸುವ ನಿರೀಕ್ಷೆ ಇದೆ ಎಂದು ಮುಖಂಡರು ತಿಳಿಸಿದ್ದಾರೆ.
ಮಂಗಳೂರು ಮೀನುಗಾರಿಕಾ ದಕ್ಕೆಯಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳು ಬಿರುಸುಗೊಂಡಿವೆ. ಬೋಟ್‌ಗಳನ್ನು ನೀರಿಗೆ ಇಳಿಸುವ, ಏಲಂ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಶನಿವಾರ ಆರಂಭಗೊಂಡಿವೆ.