Advertisement

ಮೀನುಗಾರಿಕೆ; 15 ದಿನಗಳಲ್ಲಿ 20 ಕೋ.ರೂ. ನಷ್ಟ

01:06 AM Aug 17, 2019 | mahesh |

ಮಹಾನಗರ: ತೂಫಾನ್‌, ಸಮುದ್ರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಹಾಗೂ ಹವಾಮಾನ ವೈಪರೀತ್ಯದಿಂದ ಮೀನುಗಾರಿಕ ಕ್ಷೇತ್ರ ಈ ವರ್ಷದ ಆರಂಭದಲ್ಲೇ ಭಾರಿ ಆಘಾತವನ್ನು ಅನುಭವಿಸಿದ್ದು, ಮೀನುಗಾರಿಕಾ ಋತು ಆರಂಭವಾಗಿ 15 ದಿನಗಳಲ್ಲೇ 20 ಕೋ.ರೂ.ಗೂ ಅಧಿಕ ನಷ್ಟ ಅನುಭವಿಸಿದೆ.

Advertisement

60 ದಿನಗಳ ರಜೆಯ ಬಳಿಕ ಬಹುನಿರೀಕ್ಷೆಯೊಂದಿಗೆ ಆ. 1ರಂದು ಸಮುದ್ರಕ್ಕೆ ತೆರಳಿದ್ದ ಬೋಟುಗಳು ತೂಫಾನ್‌ನಿಂದಾಗಿ ಮೀನುಗಾರಿಕೆ ನಡೆಸಲು ಸಾಧ್ಯವಾಗದೆ ಮರಳಿ ದಡ ಸೇರಿವೆ. ಪರಿಣಾಮ ಮೀನುಗಾರಿಕೆ, ಇದಕ್ಕೆ ಹೊಂದಿಕೊಂಡಿರುವ ಮಂಜುಗಡ್ಡೆ, ಮೀನು ಮಾರಾಟಗಾರರು, ಸಾಗಾಟಗಾರರು ಸಹಿತ ಇತರ ಕ್ಷೇತ್ರಗಳು ಭಾರಿ ಹಿನ್ನಡೆ ಅನುಭವಿಸಿವೆ. ಮೀನುಗಾರಿಕೆಯೊಂದೇ ಸುಮಾರು 20 ಕೋ.ರೂ. ಗೂ ಅಧಿಕ ನಷ್ಟ ಅನುಭವಿಸಿದೆ ಎಂದು ಮೀನುಗಾರಿಕೆ ಇಲಾಖೆ ಅಂದಾಜಿಸಿದೆ.

ಮಂಗಳೂರು ಮೀನುಗಾರಿಕಾ ದಕ್ಕೆಯ ಮೂಲಕ ಸುಮಾರು 850 ಟ್ರಾಲ್ ಬೋಟುಗಳು, 90 ಪರ್ಸಿನ್‌ ಬೋಟು ಆಗಸ್ಟ್‌ 1ರಿಂದ ಮೀನುಗಾರಿಕೆ ಆರಂಭಿಸಿದ್ದವು. ಪ್ರತಿಯೊಂದು ಬೋಟ್ನ್ನು ಮೀನುಗಾರಿಕೆಗೆ ಅಣಿಗೊಳಿಸಿ ಸಮುದ್ರಕ್ಕಿಳಿಸಲು ಆರಂಭದಲ್ಲಿ ಲಕ್ಷಾಂತರ ರೂ. ವಿನಿಯೋಗಿಸಬೇಕಾಗುತ್ತದೆ. ಮೀನುಗಾರಿಕೆಗೆ ತೆರಳಿದ ಬಳಿಕ ಟ್ರಾಲ್ಬೋಟು ಸುಮಾರು 8ರಿಂದ 10 ದಿನಗಳವರೆಗೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಹಿಂದಿರುಗುತ್ತವೆ. ಸುಮಾರು 5,000 ಲೀಟರ್‌ ಡೀಸಿಲ್ ತುಂಬಿಸಬೇಕಾಗುತ್ತದೆ. ಒಂದು ಬಾರಿ ಮೀನುಗಾರಿಕೆ ನಡೆಸಿ ಹಿಂದಿರುಗುವಾಗ ಅಂದಾಜು 6 ಲಕ್ಷ ರೂ.ಮೌಲ್ಯದ ಮೀನು ದೊರೆತರೆ ಮಾತ್ರ ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗುತ್ತದೆ ಎಂದು ಮೀನುಗಾರರು ತಿಳಿಸುತ್ತಾರೆ.

ಆಗಸ್ಟ್‌ ತಿಂಗಳಿನಲ್ಲಿ ಮೀನುಗಾರರಿಗೆ ಹೆಚ್ಚು ಲಾಭ ತರುವ ಕಪ್ಪ ಬಂಡಾಸ್‌, ಮದಿಮಲ್ ಮೀನು ಲಭ್ಯವಾಗುತ್ತವೆ. ಆದರೆ ಈ ಬಾರಿ ಹವಾಮಾನ ವೈಪ ರೀತ್ಯದಿಂದ ಈ ಮೀನುಗಳ ಲಭ್ಯತೆ ಕೂಡ ಕುಸಿದಿದೆ. ಸಮುದ್ರ ಶಾಂತವಾಗಿದ್ದ ಸಂದರ್ಭದಲ್ಲೂ ಮೀನುಗಾರಿಕೆಗೆ ತೆರಳಿದ ಬೋಟ್‌ಗಳು ನಿರೀಕ್ಷಿತ ಮಟ್ಟದಲ್ಲಿ ಮೀನು ಲಭ್ಯವಾಗದೆ ನಷ್ಟ ಅನುಭವಿಸಿದೆ.

ಮೀನುಗಾರಿಕೆ ಆರಂಭಗೊಂಡಿರುವುದರಿಂದ ಇನ್ನು ಯಥೇಚ್ಛವಾಗಿ ಕಡಿಮೆ ದರದಲ್ಲಿ ಮೀನು ಲಭ್ಯವಾಗಬಹುದು ಎಂಬ ನಿರೀಕ್ಷೆ ಮೀನುಪ್ರಿಯರಲ್ಲಿ ಮೂಡಿಸಿತ್ತು. ಇದೀಗ ಅವರಲ್ಲಿ ನಿರಾಸೆ ಮೂಡಿಸಿದೆ. ಕಳೆದ ಮೀನುಗಾರಿಕಾ ಋತುವಿನಲ್ಲಿ ಮೀನುಕ್ಷಾಮದ ಜತೆಗೆ ಚಂಡಮಾರುತದಿಂದಾಗಿ ಪದೇ ಪದೇ ಸಮುದ್ರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಗೊಂಡು ಮೀನುಗಾರರು ಸಂಕಷ್ಟ ಎದುರಿಸಿದ್ದರು. ಆರಂಭದಲ್ಲೇ ಮತ್ತೆ ಇದೇ ಪರಿಸ್ಥಿತಿ ಎದುರಾಗಿರುವುದು ಮೀನುಗಾರರನ್ನು ಆತಂಕದಲ್ಲಿ ಸಿಲುಕಿಸಿದೆ.

ಮೀನುಗಾರರಿಗೆ ನಿರಾಸೆ
ಸಮುದ್ರದಲ್ಲಿ ಚಂಡಮಾರುತದಿಂದಾಗಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಗಳು ಹಿಂದಿರುಗಿವೆ. ಇದರಿಂದ ಮೀನುಗಾರರಿಗೆ ನಿರಾಸೆಯಾಗಿದೆ.
ಮೀನುಗಾರಿಕಾ ಕ್ಷೇತ್ರಕ್ಕೆ ನಷ್ಟ
ಚಂಡಮಾರುತದಿಂದಾಗಿ ಆಗಸ್ಟ್‌ ಆರಂಭದಲ್ಲೇ ಬೋಟ್‌ಗಳಿಗೆ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಲು ಸಾಧ್ಯವಾಗದೆ ದಕ್ಕೆಯಲ್ಲೇ ಲಂಗರು ಹಾಕಿದ್ದವು. ಇದರಿಂದ ಒಟ್ಟು ಮೀನುಗಾರಿಕಾ ಕ್ಷೇತ್ರ ಹೆಚ್ಚಿನ ನಷ್ಟ ಅನುಭವಿಸಿದೆ. ಇನ್ನೆರಡು ದಿನಗಳಲ್ಲಿ ಬೋಟುಗಳು ಸಮುದ್ರಕ್ಕೆ ಇಳಿಯುವ ಸಾಧ್ಯತೆ ಇದೆ.
– ತಿಪ್ಪೇಸ್ವಾಮಿ, ಮೀನುಗಾರಿಕಾ ಉಪ ನಿರ್ದೇಶಕರು
Advertisement

•ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next