Advertisement

ಹವಾಮಾನ ವೈಪರೀತ್ಯ; ಕರಾವಳಿ ಮೀನುಗಾರಿಕೆ ಸ್ತಬ್ಧ

04:15 AM Oct 05, 2018 | Karthik A |

ಮಂಗಳೂರು/ಮಲ್ಪೆ/ಗಂಗೊಳ್ಳಿ: ಡೀಸೆಲ್‌ ಬೆಲೆ ಏರಿಕೆಯಿಂದ ತತ್ತರಿಸಿ ಅರ್ಧದಷ್ಟು ಯಾಂತ್ರೀಕೃತ ಮೀನುಗಾರಿಕಾ ಬೋಟುಗಳು ಕಡಲಿನಿಂದ ವಾಪಸಾದ ಬೆನ್ನಿಗೆ ಈಗ ಹವಾಮಾನ ವೈಪರೀತ್ಯ ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅರಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತದ ಭೀತಿ ಇರುವುದರಿಂದ ಮಂಗಳೂರಿನಲ್ಲಿ ಶೇ. 70 ಹಾಗೂ ಮಲ್ಪೆ, ಗಂಗೊಳ್ಳಿಯಲ್ಲಿ ಶೇ. 80 ಯಾಂತ್ರೀಕೃತ ಮೀನು ಗಾರಿಕೆ ಬೋಟುಗಳು ಬಂದರಿಗೆ ವಾಪಸಾಗಿವೆ.

Advertisement

ಕೋಸ್ಟ್‌ ಗಾರ್ಡ್‌ ಎಚ್ಚರಿಕೆ
ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಲಿದ್ದು, ಈಗಾಗಲೇ ಸಮುದ್ರಕ್ಕೆ ಇಳಿದಿರುವ ಮೀನುಗಾರರು ಶೀಘ್ರ ತೀರ ಪ್ರದೇಶಕ್ಕೆ ಮರಳಬೇಕು ಎಂದು ಎಚ್ಚರಿಸಲಾಗಿದೆ. ಈ ನಡುವೆ ಸಮುದ್ರದಲ್ಲಿ ಕೋಸ್ಟ್‌ ಗಾರ್ಡ್‌ ಸಿಬಂದಿ ಬೋಟ್‌ಗಳನ್ನು ಹಿಂದಕ್ಕೆ ಕಳುಹಿಸುತ್ತಿದ್ದು, ವಾಯುಭಾರ ಸೃಷ್ಟಿಯಾಗುವ ಪ್ರದೇಶದಲ್ಲಿ ಯಾವುದೇ ಹಡಗು ಸಂಚರಿಸದಂತೆ ಕ್ರಮ ತೆಗೆದುಕೊಳ್ಳಲಾಗಿದೆ.

ವ್ಯಾಪಕ ನಷ್ಟ
ಮೀನುಗಾರಿಕೆಗೆ ತೆರಳಿದರೂ ಮೀನು ಸಿಗುತ್ತಿಲ್ಲ. ಕೆಲವು ಬೋಟುಗಳಿಗೆ ಅಲ್ಪಸ್ವಲ್ಪ ಸಿಕ್ಕಿದರೆ, ಇನ್ನು ಕೆಲವು ಬರಿಗೈಯಲ್ಲಿ ವಾಪಸಾಗಿವೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಬೋಟು ಒಮ್ಮೆ ಕಡಲಿಗಿಳಿದರೆ ಅಂದಾಜು 4.50 ಲಕ್ಷ ರೂ. ಆದಾಯ ಸಂಗ್ರಹವಾಗುತ್ತಿತ್ತು. ಆದರೆ ಈ ಬಾರಿ 10 ದಿನಗಳಲ್ಲಿ ಗಳಿಸಿದ ಆದಾಯ 70 ಸಾವಿರ ರೂ. ಸುಮಾರು 3 ಲಕ್ಷ ರೂ.ನ ಡೀಸೆಲ್‌ ಖರ್ಚಾಗಿದೆ ಎಂದು ಮಲ್ಪೆಯ ಬೋಟ್‌ ಮಾಲಕರು ಅಳಲು ತೋಡಿಕೊಂಡಿದ್ದಾರೆ.

ದಡದಲ್ಲೇ ಉಳಿದ ಬೋಟುಗಳು
ಈ ಬಾರಿ ಜುಲೈ ಹಾಗೂ ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗಿದೆ. ಅದಲ್ಲದೆ 3-4 ಬಾರಿ ಸಮುದ್ರದಲ್ಲಿ ತೂಫಾನ್‌ ಎದ್ದಿತ್ತು. ಸಾಮಾನ್ಯವಾಗಿ ತೂಫಾನ್‌ ಎದ್ದ ಬಳಿಕ ಉತ್ತಮ ಪ್ರಮಾಣದಲ್ಲಿ ಮೀನುಗಳು ಸಿಗುತ್ತಿದ್ದವು. ಆದರೆ ಈ ಬಾರಿ ಸುಗ್ಗಿಕಾಲ ಇದ್ದರೂ ಮೀನು ಸಿಗುತ್ತಿಲ್ಲ. ಮಂಗಳೂರಿನ ದಕ್ಕೆಯಲ್ಲಿ ಮೋಟಾರ್‌ ಅಳವಡಿಸಿದ ಸುಮಾರು 1,420 ನಾಡ ದೋಣಿ ಹಾಗೂ 1,234ರಷ್ಟು ಯಾಂತ್ರೀಕೃತ ದೋಣಿಗಳಿವೆ. ಮಲ್ಪೆ ಯಲ್ಲಿ 700 ನಾಡದೋಣಿಗಳು, 2,200 ಮೋಟಾರ್‌ ಅಳವಡಿಸಿದ ದೊಡ್ಡ ದೋಣಿಗಳಿದ್ದರೆ, ಗಂಗೊಳ್ಳಿಯಲ್ಲಿ ಟ್ರಾಲರ್‌, ಪಸೀìನ್‌, ಪಾತಿ ಸೇರಿ ಸುಮಾರು 3,700ಕ್ಕೂ ಹೆಚ್ಚು ಬೋಟುಗಳಿವೆ. ಇವುಗಳಲ್ಲಿ ಬಹುಪಾಲು ದಡದಲ್ಲೇ ಇವೆ. 

ಸಂಕಷ್ಟದಲ್ಲಿ ಮೀನುಗಾರರು
ಡೀಸೆಲ್‌ ಬೆಲೆ ಏರಿಕೆ, ಹವಾಮಾನ ವೈಪರೀತ್ಯ, ಮೀನಿನ ಕ್ಷಾಮದಿಂದ ತತ್ತರಿಸಿದ್ದ ಮೀನುಗಾರರಿಗೆ ಚಂಡಮಾರುತ ಮತ್ತಷ್ಟು ನಿರಾಸೆ ಮೂಡಿಸಿದೆ. ಈಗಾಗಲೇ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಸರಕಾರ ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ ಎಂದು ಮೀನುಗಾರಿಕಾ ಬೋಟು ಮಾಲಕ ರಾಜರತ್ನ ಸನಿಲ್‌ ಅವರು ಆಗ್ರಹಿಸಿದರು.

Advertisement

ಮೀನು ಅಲಭ್ಯತೆಗೆ ಕಾರಣಗಳೇನು?
ಆಗಾಗ ಸಂಭವಿಸುವ ಹವಾಮಾನ ಏರುಪೇರಿನಿಂದಾಗಿ ಮೀನುಗಳು ಮೇಲೆ ಬರುವುದಿಲ್ಲ. ವರ್ಷ ಕಳೆದಂತೆ ಮೀನಿನ ಪ್ರಮಾಣ ಕಡಿಮೆಯಾಗುತ್ತಿರುವುದು ಕೂಡ ಮೀನಿನ ಕೊರತೆಗೆ ಕಾರಣ. ಸಂತಾನೋತ್ಪತ್ತಿ ಅನಂತರ ಸೆಪ್ಟಂಬರ್‌- ಅಕ್ಟೋಬರ್‌ನಲ್ಲಿ ಮರಿ ಮೀನುಗಳು ಆಳ ಸಮುದ್ರದಿಂದ ಮೇಲಕ್ಕೆ ಬರುತ್ತವೆ. ಸಣ್ಣ ರಂಧ್ರದ ಬಲೆ ಬಳಸುವುದರಿಂದ ಇವು ಬಲೆಗೆ ಸಿಲುಕಿ ಸಾಯುತ್ತವೆ. ಇದರಿಂದಲೂ ಮತ್ಸ್ಯ ಸಂತತಿ ಇಳಿಮುಖವಾಗುತ್ತಿದೆ ಎಂಬುದು ಪರಿಣಿತರ ಅಭಿಪ್ರಾಯ.

ಲಾಭವಿಲ್ಲ; ನಷ್ಟವೇ ಹೆಚ್ಚು
ಆಗಸ್ಟ್‌ನಲ್ಲಿ ಮೀನುಗಾರಿಕೆ ಆರಂಭಗೊಂಡರೂ ಪ್ರಕ್ಷುಬ್ಧ ಕಡಲಿನಿಂದಾಗಿ ಮೀನುಗಾರಿಕೆ ಸಾಧ್ಯವಾಗಿರಲಿಲ್ಲ. ಬಳಿಕವೂ ಅಷ್ಟೇನೂ ಆದಾಯ ಬಂದಿಲ್ಲ. ಕಳೆದ 10 ದಿನಗಳಲ್ಲಿ ಎಲ್ಲ ಬೋಟುಗಳಿಗೂ ಟ್ರಿಪ್‌ವೊಂದಕ್ಕೆ ಸುಮಾರು 50 ಸಾವಿರ ರೂ. ನಷ್ಟ ಉಂಟಾಗಿದೆ. ಮೀನುಗಾರಿಕೆಗೆ ತೆರಳಿದರೆ ನಷ್ಟದಲ್ಲಿಯೇ ವಾಪಸು ಬರುವಂತಾಗಿದೆ. 
– ಅನಿಲ್‌, ಮೀನುಗಾರ ಮುಖಂಡರು, ಮಂಗಳೂರು 

ವಾಯುಭಾರ ಕುಸಿತದ ಪರಿಣಾಮದ ನೇರ ಪೆಟ್ಟು ಮೀನುಗಾರರ ಮೇಲಾಗಿದೆ. ಈ ಹಿಂದೆಯೇ ನಷ್ಟದಲ್ಲಿದ್ದ ಮೀನುಗಾರಿಕಾ ಬೋಟುಗಳು ಈಗ ಮತ್ತಷ್ಟು ತತ್ತರಿಸಿವೆ. ಈಗಾಗಲೇ ಶೇ. 70 ಬೋಟುಗಳು ದಡ ಸೇರಿವೆ. ಸುಮಾರು 800 ಬೋಟುಗಳು ಏಕಕಾಲಕ್ಕೆ ಬಂದಾಗ ನಿಲ್ಲಿಸಲು ಜಾಗದ ಸಮಸ್ಯೆಯೂ ಎದುರಾಗಿದೆ.
– ನಿತೀನ್‌ ಕುಮಾರ್‌, ಮಂಗಳೂರು ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ

ಹಿಂದಿನ ವರ್ಷಗಳಲ್ಲಿ  ಸೆ. 25ರ ವರೆಗೆ ಒಂದು ಬೋಟು ಸುಮಾರು 8-9 ಟ್ರಿಪ್‌ಗ್ಳನ್ನು ಮುಗಿಸು ತ್ತಿತ್ತು. ಇದರಿಂದ ಸುಮಾರು 35ರಿಂದ 40 ಲಕ್ಷ ರೂ. ಆದಾಯ ಬರುತ್ತಿತ್ತು. ಆ. 1ರಿಂದ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಿದ್ದರೂ ಈ ಬಾರಿ 3-4 ಟ್ರಿಪ್‌ಗ್ಳಷ್ಟೇ ಆಗಿವೆ. ಪ್ರತಿ ಬೋಟಿಗೆ ಕನಿಷ್ಠ 10 ಲಕ್ಷ ರೂ. ಕೂಡ ಆದಾಯ ಬಂದಿಲ್ಲ. 
– ಸತೀಶ್‌ ಕುಂದರ್‌, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next