Advertisement

ತೂಫಾನ್‌ಗಾಗಿ ಕಾಯುತ್ತಿದ್ದಾರೆ ನಾಡದೋಣಿ ಮೀನುಗಾರರು

12:28 AM Jul 04, 2020 | Sriram |

ಮಲ್ಪೆ: ಸಮುದ್ರದಲ್ಲಿ ದೊಡ್ಡಮಟ್ಟದ ತೂಫಾನ್‌ ಉಂಟಾಗದ ಪರಿಣಾಮ ಕರಾವಳಿಯಲ್ಲಿ ನಾಡದೋಣಿ ಮೀನುಗಾರರು ಇನ್ನೂ ಕಡಲಿಗೆ ಇಳಿಯಲಿಲ್ಲ.

Advertisement

ಮಳೆಗಾಲದ ನಾಡದೋಣಿ ಮೀನುಗಾರಿಕೆಗೆ ನಡೆಯಬೇಕಾದರೆ ಸಮುದ್ರದಲ್ಲಿ ಧಾರಾಕಾರ ಮಳೆ ಸುರಿಯಬೇಕು ಮತ್ತು ದೊಡ್ಡ ಮಟ್ಟದ ತೂಫಾನ್‌ ಉಂಟಾಗಬೇಕು. ಆಗ ಮಾತ್ರ ನಾಡದೋಣಿ ಮೀನುಗಾರರಿಗೆ ಹಬ್ಬ. ಆದರೆ ಈ ಬಾರಿ ಇದುವರೆಗೂ ಸಮುದ್ರದಲ್ಲಿ ತೂಫಾನ್‌ ಎದ್ದಿಲ್ಲ. ಪರಿಣಾಮ ನಾಡದೋಣಿಗಳು ಕಡಲಿಗಿಳಿದಿಲ್ಲ. 2-3 ಮಂದಿ ಇರುವ ಕಂತುಬಲೆ, ಬೋಳಂಜಿಲ್‌ ದೋಣಿಗಳಷೇr ಮೀನುಗಾರಿಕೆ ನಡೆಸುತ್ತವೆ. ಅದರಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ.

ತೂಫಾನ್‌ ಏಕೆ ?
ಸಮುದ್ರದಲ್ಲಿ ತೂಫಾನ್‌ ಉಂಟಾ ದಾಗ ಸಮುದ್ರ ಪ್ರಕ್ಷುಬ್ಧಗೊಂಡು ಭಾರಿ ಗಾತ್ರದ ಆಲೆಗಳು ಎದ್ದು ಸಮುದ್ರದಡಿ ಭಾಗದಲ್ಲಿರುವ ಕೆಸರು ಮೇಲೆ ಬರುತ್ತದೆ, ನೀರು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ಉತ್ತಮ ಮೀನುಗಾರಿಕೆಯ ಶುಭ ಸಂಕೇತ. ಈ ವೇಳೆಯಲ್ಲಿ ಅಸಂಖ್ಯಾತ ಮೀನುಗಳು ಸಮುದ್ರದಂಚಿಗೆ ಬರುತ್ತವೆ. ಇದರಿಂದ ತೀರಪ್ರದೇಶದಲ್ಲಿ ಮೀನುಗಾರಿಕೆ ನಡೆ ಸುವ ನಾಡದೋಣಿಗಳಿಗೆ ಹೇರಳ ಪ್ರಮಾಣದಲ್ಲಿ ವಿವಿಧ ತರಹದ ಮೀನುಗಳು ಬಲೆಗೆ ಬೀಳುತ್ತವೆ.

ಸಾಮಾನ್ಯವಾಗಿ ನಿರಂತರವಾಗಿ ಮಳೆಯಾಗಿ ಗುಡ್ಡಕಾಡುಗಳಿಂದ ರಭಸವಾಗಿ ನೆರೆನೀರು ನದಿಗಳ ಮೂಲಕ (ನೆರೆನೀರಿನ ಜತೆಗೆ ಬರುವ ತ್ಯಾಜ್ಯ ಕಸ, ಗೊಬ್ಬರಗಳು) ಸಮುದ್ರವನ್ನು ಸೇರುವಾಗ ಮೀನುಗಳು ಆಹಾರವನ್ನು ಅರಸಿಕೊಂಡು ತೀರಪ್ರದೇಶಕ್ಕೆ ಬರುತ್ತವೆ ಎನ್ನುವುದು ಮೀನು ಗಾರರ ಲೆಕ್ಕಾಚಾರ.

ಮೀನು ದುಬಾರಿ
ನಾಡದೋಣಿ ಮೀನುಗಾರಿಕೆ ಚುರುಕುಗೊಳ್ಳದ ಕಾರಣ ಮಾರುಕಟ್ಟೆಯಲ್ಲಿ ಮೀನಿನ ಅಭಾವ ಸೃಷ್ಟಿಯಾಗಿದೆ. ಈ ನಡುವೆ ಮೀನು ವ್ಯಾಪಾರಿಗಳು ಹೊರರಾಜ್ಯದಿಂದ ಮೀನುಗಳನ್ನು ತರಿಸಿ ಇಲ್ಲಿ ವ್ಯಾಪಾರ ನಡೆಸುತ್ತಾರೆ. ಬೂತಾಯಿ ಕೆ.ಜಿ.ಗೆ. 140-150 ರೂ., ದೊಡ್ಡ ಬೂತಾಯಿಗೆ 300 ರೂ., ಬಂಗುಡೆ ಕೆ.ಜಿ.ಗೆ 250-300, ಗೋಲಾಯಿ 80-90 ರೂಪಾಯಿ ಇದೆ. ಫ್ರೀಜರ್‌ನ ಪ್ಯಾಕೆಟ್‌ ಮೀನಿಗೂ ಭಾರೀ ಬೇಡಿಕೆ ಇದೆ. ಬಂಗುಡೆ ಕೆ.ಜಿ.ಗೆ 250 ರೂ.. ಕೊಡ್ಡೆಯಿ ಕಲ್ಲರ್‌ 180ರೂ., ಪಾಂಬೊಲು- 120 ರೂ., ತಾಟೆ -550 ರೂ., ಬೊಂಡಸ -200ರೂ., ಸಿಗಡಿ (ಬಿಗ್‌)- 600 ರೂ., ಸಿಗಡಿ (ಟೈಗರ್‌)- 1200 ರೂ. ಪಾಂಪ್ರಟ್‌- 400 ರೂ.ಗೆ ಮಾರಾಟವಾಗುತ್ತಿದೆ.

Advertisement

ಈ ಬಾರಿ ನಿರೀಕ್ಷೆ ಉಳಿದಿಲ್ಲ
ಮುಹೂರ್ತ ಮಾಡಿ ಬಂದಿದೇªವೆ. ನಾಡದೋಣಿ ಮೀನುಗಾರಿಕೆಗೆ ಪೂರಕವಾಗಿ ಸಮುದ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೇವಲ ಮಳೆ ಬಂದರೆ ಪ್ರಯೋಜನವಿಲ್ಲ. ಮಳೆಯ ಜತೆಗೆ ಗಾಳಿಯೂ ನಿರಂತರವಾಗಿ ಬೀಸಿದರೆ ಸಮುದ್ರದ ವಾತಾವರಣದಲ್ಲಿ ಬದಲಾವಣೆಯಾಗುತ್ತದೆ. ಹಿಂದಿನ ವರ್ಷ ಈ ವೇಳೆಯಲ್ಲಿ ಸಣ್ಣ ಮಟ್ಟದ ಒಂದೆರಡು ತೂಫಾನ್‌ ಆಗಿ ಹೋಗಿತ್ತು. ಹಿಂದೆ ಹುಣ್ಣಿಮೆ, ಏಕಾದಶಿ ಸಮಯದಲ್ಲಿ ತೂಫಾನ್‌ ಆಗುತ್ತದೆಂಬ ನಿರೀಕ್ಷೆ ಇತ್ತು. ಈಗ ಆಗಾಗ ಉಂಟಾಗುತ್ತಿರುವ ಚಂಡಮಾರುತದಿಂದಾಗಿ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ.
– ಕೃಷ್ಣ ಎಸ್‌. ಸುವರ್ಣ ಪಡುತೋನ್ಸೆ, ನಾಡದೋಣಿ ಮೀನುಗಾರರು

ಹೆಚ್ಚಿನ ದೋಣಿಗಳು ಇನ್ನೂ ಕಡಲಿಗಿಳಿದಿಲ್ಲ
ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಜೂ. 22ರಂದು ನಾಡದೋಣಿ ಮೀನುಗಾರರು ಸಮುದ್ರಕ್ಕೆ ಪ್ರಸಾದ ಅರ್ಪಿಸಿ ಮೀನುಗಾರಿಕೆಗೆ ತೊಡಗಿದ್ದಾರೆ. ಆದರೆ ತೂಫಾನ್‌ ಬಾರದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಮೀನು ಸಿಗದೆ ವಾಪಸಾಗಿದ್ದಾರೆ. ಕೆಲವೊಂದು ದೋಣಿಗಳು ಮೂಹೂರ್ತ ಮಾಡಿ ದಡದಲ್ಲಿ ಕಟ್ಟಿದ್ದಾರೆ. ಹೆಚ್ಚಿನ ದೋಣಿಗಳು ಇನ್ನೂ ಕಡಲಿಗೆ ಇಳಿದಿಲ್ಲ.
-ಜನಾರ್ದನ ತಿಂಗಳಾಯ, ಅಧ್ಯಕ್ಷರು,
ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next