Advertisement

ಸರಕಾರ ವಿರುದ್ಧ ಹೋರಾಟಕ್ಕೆ ಮೀನುಗಾರರ ಸಜ್ಜು

08:50 PM Jan 03, 2019 | Karthik A |

ಮಲ್ಪೆ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ 7 ಮಂದಿ ಮೀನುಗಾರರು ಸಹಿತ ಬೋಟ್‌ ನಾಪತ್ತೆಯಾಗಿ ಈವರೆಗೂ ತುರ್ತು ಕ್ರಮ ಕೈಗೊಳ್ಳದ ಕೇಂದ್ರ ಹಾಗೂ ರಾಜ್ಯ ಸರಕಾರ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಜ. 6ರಂದು ಕರಾವಳಿಯ ಮೂರು ಜಿಲ್ಲೆಯ ಮೀನುಗಾರರು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ರಾಷ್ಟ್ರೀಯ ಹೆದ್ದಾರಿ ತಡೆಗೊಳಿಸಿ ಪ್ರತಿಭಟನೆ ನಡೆಸುವ ಬಗ್ಗೆ ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನಡೆದ ಬೃಹತ್‌ ಸಮಾಲೋಚರ ಸಭೆಯಲ್ಲಿ ಒಕ್ಕೊರಲ ತೀರ್ಮಾನ  ಕೈಗೊಳ್ಳಲಾಗಿದೆ.

Advertisement

ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ಮಾತನಾಡಿ ಮೀನುಗಾರರು ನಾಪತ್ತೆಯಾಗಿ ಈಗಾಗಲೇ 19 ದಿನ ಕಳೆದಿವೆ. ಇವರ  ಪತ್ತೆಗೆ ಗಂಭೀರ ಪ್ರಯತ್ನ ನಡೆದಿಲ್ಲ. ಜೀವವನ್ನು ಪಣಕ್ಕಿಟ್ಟು ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರ ರಕ್ಷಣೆ ಮುಖ್ಯ. ಮೀನುಗಾರರೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದರು.

ಬೋಟ್‌ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್‌ ಸುವರ್ಣ ಮಾತನಾಡಿ ಕಡಲಲ್ಲಿ ಮೀನುಗಾರರಿಗೆ ಸುರಕ್ಷತೆ ಮತ್ತು ಭದ್ರತೆ ಇಲ್ಲವಾಗಿದೆ. ಮುಂದೆ ಕಡಲಿಗಿಳಿಯಲು ಭಯವಾಗುತ್ತಿದೆ. ಮೀನುಗಾರರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಬೀದಿಗೆ ಬರುವಂತಾಗಿದೆ. 45 ಲಕ್ಷ ಜನಸಂಖ್ಯೆ ಹೊಂದಿರುವ ಮೀನುಗಾರರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ, ಮುಂದೆ ರಾಜ್ಯ ಸರಕಾರಕ್ಕೆ ಉಳಿಗಾಲ ಇಲ್ಲದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಗುಂಡು ಬಿ. ಅಮೀನ್‌, ವಾಸುದೇವ ಬೋಳಾರ್‌, ನಿತಿನ್‌ ಕುಮಾರ್‌, ನಾಗರಾಜ್‌ ಸುವರ್ಣ, ಗುರುದಾಸ್‌ ಬಂಗೇರ, ದಾಸ ಕುಂದರ್‌, ನಿತಿನ್‌ ಕುಮಾರ್‌,  ಬಿ.ಬಿ. ಕಾಂಚನ್‌, ವಿನಯ ಕರ್ಕೇರ, ಜಯ ಸಿ. ಕೋಟ್ಯಾನ್‌, ವಿಜಯ ಬಂಗೇರ ಹೆಜಮಾಡಿ, ಪ್ರಶಾಂತ್‌ ಕುಮಾರ್‌, ಶಶಿಧರ ತಿಂಗಳಾಯ, ಕಿಶೋರ್‌ ಪಡುಕರೆ, ಚಂದ್ರಕಾಂತ್‌ ಕರ್ಕೇರ, ಹರಿಶ್ಚಂದ್ರ ಕಾಂಚನ್‌, ಮಂಜು ನೀಲಾವರ, ಬೇಬಿ ಎಚ್‌. ಸಾಲ್ಯಾನ್‌, ಜಲಜಾ ಕೋಟ್ಯಾನ್‌ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಬಂದ್‌ಗೆ ಬೆಂಬಲ
ಜ. 6ರಂದು ನಡೆಯಲಿರುವ ಹೆದ್ದಾರಿ ಬಂದ್‌ ಪ್ರತಿಭಟನೆಗೆ ಮಲ್ಪೆ ಕನ್ನಿ ಪಾರ್ಟಿ ಮೀನುಗಾರರ ಸಂಘ ಪೂರ್ಣ ಬೆಂಬಲ ಸೂಚಿಸಿದ್ದು, ಕನ್ನಿ ಮತ್ತು ಕೊಟ್ಟು ಸೇರಿದಂತೆ ಎರಡು ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಅಧ್ಯಕ್ಷ ದಾಸ ಕುಂದರ್‌ ತಿಳಿಸಿದ್ದಾರೆ. ಜತೆಗೆ ಮಲ್ಪೆ ಮಂಜುಗಡ್ಡೆ ಸ್ಥಾವರ ಮಾಲಕರ ಸಂಘದ ಮಲ್ಪೆ ಘಟಕವೂ ಬಂದ್‌ಗೆ ಬೆಂಬಲ ಸೂಚಿಸಿದೆ.

Advertisement

ಜ. 6ರ ಹೆದ್ದಾರಿ ತಡೆಗೆ ಬೆಂಬಲ: ಕಡ್ಡಾಯ ರಜೆ ಘೋಷಣೆ
ಕರಾವಳಿಯ ಮೀನುಗಾರಿಕಾ ಸಂಘಟನೆಗಳು ಜ.6ರಂದು ಆಯೋಜಿಸಿರುವ ರಾಷ್ಟ್ರೀಯ ಹೆದ್ದಾರಿ ತಡೆಗೆ ನಮ್ಮ ಸಂಘದ ಸಂಪೂರ್ಣ ಬೆಂಬಲವಿದೆ ಎಂದು ಉಡುಪಿ ತಾ| ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್‌.ಸಾಲ್ಯಾನ್‌ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಉಡುಪಿ ತಾಲೂಕು ಹಸಿಮೀನು ಮಾರಾಟಗಾರರ ಸಂಘ ಸೇರಿದಂತೆ ಕುಂದಾಪುರ ತಾ| ಜೈ ಕರ್ನಾಟಕ ಚಿಲ್ಲರೆ ಮೀನುವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಅಂದು ಉಡುಪಿ ಜಿಲ್ಲೆಯ ಎಲ್ಲ ಮೀನು ಮಾರುಕಟ್ಟೆಗಳಿಗೆ ಕಡ್ಡಾಯ ರಜೆ ಘೋಷಿಸಲಾಗಿದೆ. ಅಂದು ಮೀನುಮಾರುಕಟ್ಟೆಗಳಲ್ಲಿ ವಹಿವಾಟು ನಡೆಯುವುದಿಲ್ಲ ಗ್ರಾಹಕರು ಸಹಕರಿಸಬೇಕು. ಉಡುಪಿ ಮತ್ತು ಕುಂದಾಪುರದ ಎರಡೂ ಸಂಘಟನೆಗಳ ಮಹಿಳೆಯರು ಬೆಳಗ್ಗಿನಿಂದಲೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಲಲಿದ್ದಾರೆೆ ಎಂದು ಉಡುಪಿ ತಾಲೂಕು ಮಹಿಳಾ ಹಸಿಮೀನುಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್‌.ಸಾಲ್ಯಾನ್‌ ಮತ್ತು ಕುಂದಾಪುರ ತಾಲೂಕು ಜೈಕರ್ನಾಟಕ ಚಿಲ್ಲರೆ ಮೀನುವ್ಯಾಪಾರಸ್ಥರ ಸಂಘದ ಅಧ್ಯಕ್ಷೆ ರತ್ನ ಮೊಗವೀರ ಬೀಜಾಡಿ ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸರಕಾರದ ಚೆಲ್ಲಾಟ
ಸರಕಾರ ಹಿಂದಿನಿಂದಲೂ ಮೀನುಗಾರ ಜತೆ ಚೆಲ್ಲಾಟವಾಡುತ್ತಾ ಬಂದಿದ್ದು, ಈ ಪ್ರಕರಣದಿಂದ ಅದು ಸಾಬೀತಾಗಿದೆ. ಮೀನುಗಾರಿಕೆ ಸಚಿವರಾಗಲಿ, ಉಸ್ತುವಾರಿ ಮಂತ್ರಿಯಾಗಲಿ ಸಭೆ ಕರೆದು ಇದುವರೆಗೂ ಮೀನುಗಾರರೊಂದಿಗೆ ಚರ್ಚಿಸಿಲ್ಲ. ಜ. 6ರಂದು ನಡೆಯುವ ರಾಸ್ತಾ ರೋಕೋ ಚಳವಳಿ ಪಾಲ್ಗೊಳ್ಳುವ ಮೂಲಕ ನಮ್ಮ ಶಕ್ತಿ ಪ್ರದರ್ಶಿಸಿ ಸರಕಾರಕ್ಕೆ ಬಿಸಿ ಮುಟ್ಟಿಸಬೇಕು.
– ಯಶ್‌ಪಾಲ್‌ ಸುವರ್ಣ, ಅಧ್ಯಕ್ಷರು, ಮೀನು ಮಾರಾಟ ಫೆಡರೇಶನ್‌

ನ್ಯಾಯ ಸಿಗುವವರೆಗೆ ಹೋರಾಟ
ನಾಪತ್ತೆಯಾದ ಮೀನುಗಾರರ ಹುಡುಕಾಟದ ಎಲ್ಲ ಪ್ರಯತ್ನ ವಿಫಲವಾಗಿದೆ. ಸರಕಾರದಿಂದ ಸೂಕ್ತ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಸಮಾಲೋಚನ ಸಭೆ ನಡೆಸಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗಿದೆ. ಉಪ್ಪಳದಿಂದ ಕಾರವಾರದವರೆಗೆ ಸಂಪೂರ್ಣವಾಗಿ ಮೀನುಗಾರಿಕೆ ಸ್ಥಗಿತಗೊಳಿಸಿ ರಾಷ್ಟ್ರೀಯ ಹೆದ್ದಾರಿ ತಡೆ ಮೂಲಕ ಪ್ರತಿಭಟನೆ ಕೈಗೊಂಡು ನಮ್ಮ ಬಲ ಪ್ರದರ್ಶಿಸಬೇಕು.  
– ಕಿಶೋರ್‌ ಡಿ. ಸುವರ್ಣ, ಮಲ್ಪೆ ಡೀಪ್‌ ಸೀ ಟ್ರಾಲ್‌ ಬೋಟ್‌ ಅಸೋಸಿಯೇಶನ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next