Advertisement

ನಾಡದೋಣಿ ಮೀನುಗಾರಿಕೆಗೆ ಮೀನುಗಾರರು ಸಜ್ಜು

01:22 PM Jun 15, 2019 | sudhir |

ಮಲ್ಪೆ: ಮಳೆಗಾಲ ಆರಂಭವಾಗುತ್ತಿರುವಂತೆಯೇ, ಸಹಕಾರಿ ತತ್ವದಡಿ
ನಡೆಯುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಮೀನುಗಾರರು ಸಜ್ಜಾಗುತ್ತಿದ್ದಾರೆ.

Advertisement

ಯಾಂತ್ರೀಕೃತ ಮೀನುಗಾರಿಕೆ ಮುಗಿದ ಬೆನ್ನಲ್ಲೇ ಎರಡು ತಿಂಗಳ ಕಾಲ 10 ಅಶ್ವಶಕ್ತಿ ಸಾಮರ್ಥ್ಯದ ಎಂಜಿನ್‌ ಬಳಸಿ ಮೀನುಗಾರಿಕೆ ನಡೆಸಲು ನಾಡದೋಣಿ ಮೀನುಗಾರರಿಗೆ ಅವಕಾಶವಿದೆ. ಇದಕ್ಕಾಗಿ ಮೀನುಗಾರರಿಂದ ದಾರದ ಪ್ರಕ್ರಿಯೆ ನಡೆಯುತ್ತಿದೆ.

ಏನಿದು ದಾರ?
ಕಳೆದ ವರ್ಷದ ಮಳೆಗಾಲದಲ್ಲಿ ಮೀನುಗಾರಿಕೆ ಋತು ಕೊನೆಗೊಂಡ
ಬಳಿಕ ಮೀನುಗಾರಿಕೆಗೆ ಬಳಸಿದ ಬಲೆಗಳನ್ನು ವಿಭಜಿಸಿ ಸಂಗ್ರಹಿಸಿಡುತ್ತಾರೆ. ಈ ಋತುವಿ ನಲ್ಲಿ ಮಳೆಗಾಲ ಆರಂಭಗೊಂಡ ಬಳಿಕ ಕಳೆದ ವರ್ಷ ಸಂಗ್ರಹಿಸಿಟ್ಟ ಬಲೆಗಳನ್ನು ತಂದು ನಿರ್ದಿಷ್ಟ ದಿನದಂದು ಎಲ್ಲರೂ ಒಟ್ಟಾಗಿ ಪೋಣಿಸುವ ಪ್ರಕ್ರಿಯೆ ನಡೆಯ ುತ್ತದೆ. ಕರಾವಳಿ ಮೀನುಗಾರರ ಭಾಷೆಯಲ್ಲಿ ಇದಕ್ಕೆ ದಾರ ಎಂದು ಕರೆಯ ಲಾಗುತ್ತದೆ. ಎಲ್ಲವನ್ನೂ ಮುಹೂರ್ತ ನೋಡಿಯೇ, ದಾರ, ದೋಣಿ ಇಳಿಸುವ ಸಂಪ್ರದಾಯವನ್ನು ನಡೆಸುತ್ತಾರೆ.

ಸಹಕಾರಿ ತತ್ವ
ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧೀನದಲ್ಲಿ ಸುಮಾರು 38 ಡಿಸ್ಕೊ ಫಂಡ್‌ಗಳಿವೆ, ಅಂದರೆ 38 ಗುಂಪುಗಳು ಮೀನುಗಾರಿಕೆ ನಡೆಸುತ್ತದೆ. ಒಂದು ಗುಂಪಿನಲ್ಲಿ ಸುಮಾರು 30ರಿಂದ 60 ಮಂದಿ ಮೀನುಗಾರರು ಇರುತ್ತಾರೆ. ಇಲ್ಲಿ ಮಾಲಕ, ಕಾರ್ಮಿಕ ಎನ್ನುವ ವಿಭಾಗ ಇಲ್ಲ.

ಖರ್ಚು ಮತ್ತು ಆದಾಯವನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಇದೇ ರೀತಿ ಮಂಗಳೂರು, ಹೆಜಮಾಡಿ, ಕಾಪು, ಉಚ್ಚಿಲ, ಬೆಂಗ್ರೆ, ಹಂಗಾರಕಟ್ಟೆ, ಗಂಗೊಳ್ಳಿ, ಬೈಂದೂರು ಸೇರಿದಂತೆ ಉತ್ತರ ಕನ್ನಡದಲ್ಲೂ ಇಂತಹ ಗುಂಪುಗಳು
ಇವೆ.

Advertisement

ತೂಫಾನ್‌ ಆಗಬೇಕು
ಮೀನಿನ ಫಸಲು ಸಿಗಲು ಹೆಚ್ಚಾಗ ಬೇಕಾದರೆ ತೂಫಾನ್‌ ಅಗಬೇಕು. ಕಡಲು ಪ್ರಕ್ಷುಬ್ಧಗೊಳ್ಳಬೇಕು. ಗುಡ್ಡಗಾಡುಗಳಿಂದ ನೆರೆನೀರು ರಭಸವಾಗಿ ಹರಿದುಬಂದು ಸಮುದ್ರ ಸೇರಬೇಕು. ಸಮುದ್ರದಲ್ಲಿ ಕೆಸರು ಮೇಲೆ ಬರಬೇಕು. ಆಗ ಮೀನುಗಳು ದಡದತ್ತ ಸೇರುತ್ತವೆ. ಅದನ್ನು ಹಿಡಿಯಲು ಸಮುದ್ರ ಶಾಂತವಾಗಬೇಕು. ಆಗ ಬಂಗುಡೆ, ಸಿಗಡಿಯಂತಹ ಮೀನುಗಳು ಹೇರಳವಾಗಿ ನಾಡದೋಣಿಗಳ ಬಲೆಗೆ ಬೀಳುತ್ತದೆ.

ಸಿಗಡಿ ಮೀನಿನ ನಿರೀಕ್ಷೆ
ಕಳೆದ ವರ್ಷ ಆರಂಭದಲ್ಲಿ ನಾಡದೋಣಿಗೆ ಮೀನು ದೊರೆತಿಲ್ಲ. ಅಂತ್ಯದ 10 ದಿನಗಳಲ್ಲಿ ಮೀನು ಸಿಕ್ಕಿದ್ದು ಲಾಭದಾಯಕವಾಗಿದೆ. ಈ ಬಾರಿ ಯಾಂತ್ರಿಕ ಮೀನುಗಾರಿಕೆ ಋತು ಅಂತ್ಯದಲ್ಲಿ ಕೆಲವೊಂದು ಬೋಟ್‌ಗಳಿಗೆ ಅಲ್ಪ ಪ್ರಮಾಣದಲ್ಲಿ ಸಿಗಡಿ ಮೀನು ದೊರಕಿದ್ದು, ಆ ಮೀನು ಮಳೆಗಾಲದಲ್ಲಿ ನಾಡದೋಣಿ ಮೀನುಗಾರರಿಗೆ ಸಿಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಸಾಮೂಹಿಕ ಪ್ರಾರ್ಥನೆ
ಜೂ. 12ರಂದು ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಪ್ರಸಾದವನ್ನು ಗಂಗಾಮಾತೆಗೆ ಅರ್ಪಿಸಲಾಗಿದೆ. ಮೀನುಗಾರರು ಸಮುದ್ರದ ವಾತಾವರಣವನ್ನು ನೋಡಿಕೊಂಡು ಯಾವಾಗ ಬೇಕಾದರೂ ಸಮುದ್ರಕ್ಕೆ ಇಳಿಯಬಹುದು.
-ಜನಾರ್ದನ ತಿಂಗಳಾಯ, ಅಧ್ಯಕ್ಷರು, ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ

ಕರ ರಹಿತ ಸೀಮೆ ಎಣ್ಣೆ ಒದಗಿಸಿ
ನಾಡದೋಣಿ ಮೀನುಗಾರಿಕೆ ಉಳಿಯಬೇಕಾದರೆ ಕರ ರಹಿತ ಸೀಮೆಎಣ್ಣೆ ಅಗತ್ಯ. ಸರಕಾರ ನಾಡದೋಣಿ ಮೀನುಗಾರರಿಗೆ ಈಗಾಗಲೇ ನೀಡು ತ್ತಿರುವ ಕರ ರಹಿತ ಸೀಮೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತ ಮಾಡಬಾರದು.
-ಕೃಷ್ಣ ಎಸ್‌. ಸುವರ್ಣ, ಪಡುತೋನ್ಸೆ ಬೆಂಗ್ರೆ, ನಾಡದೋಣಿ ಮೀನುಗಾರ

Advertisement

Udayavani is now on Telegram. Click here to join our channel and stay updated with the latest news.

Next