Advertisement

ಮಹಾರಾಷ್ಟ್ರದತ್ತ ತೆರಳಲು ಮೀನುಗಾರರು ಹಿಂದೇಟು

01:00 AM Feb 24, 2019 | Team Udayavani |

ಮಲ್ಪೆ: ಸುವರ್ಣ ತ್ರಿಭುಜ ಬೋಟ್‌ ನಾಪತ್ತೆ ಪ್ರಕರಣದ ಬಳಿಕ ರಾಜ್ಯ ಕರಾವಳಿಯ ಮೀನುಗಾರರು ಮಹಾರಾಷ್ಟ್ರದತ್ತ¤ ತೆರಳಲು ಹಿಂದೇಟು ಹಾಕುತ್ತಿರುವ ಪರಿಣಾಮ ಸ್ಥಳೀಯ ಮೀನು ಮಾರುಕಟ್ಟೆಯೂ ಕಳೆಗುಂದಿದೆ.

Advertisement

ಒಂದೆಡೆ ಮೀನು ಕೊರತೆ ಉದ್ಭವಿಸಿ ಮಾರುಕಟ್ಟೆಯಲ್ಲಿ ಲಭ್ಯ ಮೀನಿನ ದರ ದುಬಾರಿಯಾಗಿದ್ದರೆ, ಮತ್ತೂಂದೆಡೆ ಮೀನುಗಾರರು ಕನಿಷ್ಠ ಸಂಪಾದನೆಗೂ ಸಂಕಷ್ಟ ಎದುರಿಸುವಂತಾಗಿದೆ. ದೋಣಿಗಳೆಲ್ಲಾ ದಡ ಸೇರಿವೆ.

ಸುವರ್ಣ ತ್ರಿಭುಜ ಬೋಟ್‌ ಪ್ರಕರಣದ ಮೊದಲು 1000 ದಿಂದ 1200 ರಷ್ಟು ದೋಣಿಗಳು ಮಹಾರಾಷ್ಟ್ರದತ್ತ ಆಳ ಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದವು.ಯಾಕೆಂದರೆ ಕರ್ನಾಟಕ, ಗೋವಾದ ಸಮುದ್ರದಲ್ಲಿ ಆಳದ ಪ್ರದೇಶಗಳು (ಗುಂಡಿ ಪ್ರದೇಶದಲ್ಲಿ ಸಿಗುವ ಮೀನುಗಳ ಪ್ರಮಾಣ ಹೆಚ್ಚು)ಸಿಗಬೇಕೆಂದರೆ ಸುಮಾರು 20 ರಿಂದ 24 ನಾಟಿಕಲ್‌ ಮೈಲು ದೂರ ಸಾಗಬೇಕು. ಮಹಾರಾಷ್ಟ್ರ ಪ್ರದೇಶದಲ್ಲಿ 12 ನಾಟಿಕಲ್‌ ಮೈಲ್‌ ಸಾಗಿದರೆ ಸಾಕು. ಹತ್ತರಿಂದ ಹನ್ನೊಂದು ದಿನಗಳ ಮೀನುಗಾರಿಕೆಯಲ್ಲಿ ಸುಮಾರು 5ರಿಂದ 7 ಲಕ್ಷ ರೂ. ಮೌಲ್ಯದ ಮೀನು ಸಿಗುತ್ತಿತ್ತು. ಇದಕ್ಕಾಗಿ ಕೆಲವೊಮ್ಮೆ ಆ ಭಾಗದ ಮೀನುಗಾರರ ಕಿರುಕುಳ, ಅಧಿಕಾರಿಗಳಿಂದ ದಂಡ ಇತ್ಯಾದಿ ಸಂಕಷ್ಟವನ್ನೂ ಎದುರಿಸಬೇಕಾಗುತ್ತಿತ್ತು. ಈಗ ಬೋಟ್‌ ನಾಪತ್ತೆ ಬಳಿಕ ಆ ಭಾಗಕ್ಕೆ ತೆರಳುವವರು ಕಡಿಮೆ ಎನ್ನುತ್ತಾರೆ ಕೆಲವರು.

ಪಸೀìನ್‌ ಮೀನುಗಾರಿಕೆ ಸ್ಥಗಿತ
ಅತ್ತ ದಡದಲ್ಲಿ ಶೇ. 30 ರಷ್ಟು ಆಳ ಸಮುದ್ರ ಮೀನುಗಾರಿಕೆಯ ಬೋಟುಗಳು ಲಂಗರು ಹಾಕಿದ್ದರೆ, ಇತ್ತ
ಮೀನಿನ ಅಲಭ್ಯತೆಯಿಂದ ಪಸೀìನ್‌ ಮೀನುಗಾರಿಕೆಯೂ ಸ್ಥಗಿತಗೊಂಡಿದೆ. ಡೀಸೆಲ್‌ ದರದ ಹೊರೆಗೂ ಸಿಗುವ ಮೀನಿನ ಪ್ರಮಾಣಕ್ಕೂ ಸರಿಹೊಂದದೇ ನಷ್ಟವಾಗುತ್ತಿದೆ. ಜತೆಗೆ ಸಣ್ಣಟ್ರಾಲ್‌ದೋಣಿ, ತ್ರಿಸೆವೆಂಟಿ ಬೋಟ್‌ಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ ಎಂಬುದು ಹಲವರ ಕೊರಗು.

ಮೀನಿನ ದರ ಹೆಚ್ಚಳ
ಇದರ ಬೆನ್ನಿಗೇ ರಾಜ್ಯದ ಬಂದರುಗಳಲ್ಲದೇ, ಕೇರಳ ಹಾಗೂ ತಮಿಳುನಾಡಿನ ಬಂದರುಗಳಲ್ಲೂ ಸಾಕಷ್ಟು ಮೀನುಗಳು ಲಭ್ಯವಾಗುತ್ತಿಲ್ಲ. ಪ್ರತಿಕೂಲ ಹವಾಮಾನ, ಮೀನು ಇಳುವರಿಯ ಕುಸಿತವೂ ಮೀನು ಅಭಾವಕ್ಕೆ ಕಾರಣ ಎನ್ನಲಾಗುತ್ತಿದೆ. ಹಾಗಾಗಿ ಮೀನಿನ ದರ ವಿಪರೀತ ಏರಿಕೆಯಾಗಿದೆ.

Advertisement

ಬೋಟಿನಿಂದ ನೇರ ವ್ಯಾಪಾರಸ್ಥರಿಗೆ ರಖಂ ಆಗಿ ಮಾರಾಟವಾಗುವ ದರ ತಿಂಗಳ ಹಿಂದೆ ದೊಡ್ಡ ಬಂಗುಡೆಗೆ ಕೆ.ಜಿ.ಗೆ 90 ರೂ. ಇತ್ತು. ಅದೀಗ 130ರಿಂದ 140 ರೂ. ಇದೆ. 60ರೂ. ಇದ್ದ ಸಣ್ಣ ಬಂಗುಡೆಗೆ 80ರೂ., 2ಕೆಜಿ. ಮೇಲ್ಪಟ್ಟ ತೂಕದ ಅಂಜಲ್‌ ಮೀನಿಗೆ 650ರಿಂದ 700ರೂ., ಅದಕ್ಕಿಂತ ಕಡಿಮೆ ತೂಕದ್ದಕ್ಕೆ 500ರಿಂದ 550 ರೂ. ದರವಿದೆ. ಹಿಂದೆ 110 ರೂ. ಇದ್ದ ಅಡೆಮೀನಿಗೆ 150ರೂ. ಆಗಿದೆ.

700 ರೂ. ಇದ್ದ ಬಿಳಿ ಪಾಂಪ್ರಟ್‌ಗೆ 1000 ರೂ., 400ರೂ. ಕಪ್ಪು ಪಾಂಪ್ರಟ್‌ 500 ರಿಂದ 550 ರೂ. ಗೆ ಏರಿದೆ. ಈ ಹಿಂದೆ ಕೆ. ಜಿ 30 ರೂ.ಗಿಂತ ಹೆಚ್ಚಾಗದ ಸಣ್ಣಗಾತ್ರದ ರಾಣಿ ಮೀನು 55ರೂ. ವರೆಗೆ ಏರಿಕೆ ಕಂಡಿದೆ. ಪಟ್ಟೆರಾಣಿಗೆ 80 ರಿಂದ 90 ರೂ. ಇದೆ.

ಕರಾವಳಿಯಲ್ಲಿ ಮೀನಿನ ಅಭಾವದ ಜತೆಗೆ ಇಂಧನ ದರ ಹೊರೆಯೂ ಹೆಚ್ಚಿದೆ. ಕೆಲವು ಬೋಟ್‌ಗಳು ಕನಿಷ್ಟ ಸಂಪಾದನೆ ಇಲ್ಲದೆ ನಷ್ಟ ಎದುರಿಸುತ್ತಿವೆ. ಮೀನಿನ ಇಳುವರಿ ಕಡಿಮೆಯಾಗಿದ್ದರಿಂದ ಸಣ್ಣಪುಟ್ಟ ಮೀನಿಗೂ ಬೇಡಿಕೆ ಬಂದಿದೆ.
– ಸತೀಶ್‌ ಕುಂದರ್‌, ಅಧ್ಯಕ್ಷರು ಮಲ್ಪೆ ಮೀನುಗಾರರ ಸಂಘ

ದೇಶದ ಕರಾವಳಿ ಭಾಗದ ಎಲ್ಲ ಬಂದರುಗಳಲ್ಲಿ ಮೀನಿನ ಕೊರತೆ ಇದೆ. ಕೇರಳದಲ್ಲಿ ಹೆಚ್ಚು ಮೀನು ಮಾರುಕಟ್ಟೆ ಇರುವ ಕಾರಣ ಮಲ್ಪೆ ಬಂದರಿನ ಶೇ. 90ರಷ್ಟು ಮೀನು ಅಲ್ಲಿಗೆ ರವಾನೆಯಾಗುತ್ತದೆ. ಈಗ ಅಲ್ಲಿಯೂ ಮೀನಿನ ಪ್ರಮಾಣ ಕುಸಿದಿದೆ.
– ಸಾಧು ಸಾಲ್ಯಾನ್‌, ಅಧ್ಯಕ್ಷರು ಮಲ್ಪೆ ಮೀನು ವ್ಯಾಪಾರಸ್ಥರ ಸಂಘ

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next