ಕೌಶಂಬಿ(ಉತ್ತರಪ್ರದೇಶ): ಯಮುನಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಲೆಗೆ ಬಿದ್ದ ಡಾಲ್ಫಿನ್ ಅನ್ನು ಮನೆಗೆ ತಂದು ಅಡುಗೆ ಮಾಡಿ ತಿಂದ ಆರೋಪದಲ್ಲಿ ನಾಲ್ವರು ಮೀನುಗಾರರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:Geethika Sharma case: 11 ವರ್ಷಗಳ ಬಳಿಕ ಹರ್ಯಾಣ ಶಾಸಕ ಗೋಪಾಲ್ ಕಾಂಡ ಖುಲಾಸೆ
ಮೀನುಗಾರರು ಡಾಲ್ಫಿನ್ ಅನ್ನು ಹೊತ್ತು ತರುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪೊಲೀಸರು ಓರ್ವ ಮೀನುಗಾರನನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಚೈಲ್ ಫಾರೆಸ್ಟ್ ರೇಂಜರ್ ರವೀಂದ್ರ ಕುಮಾರ್ ಈ ಬಗ್ಗೆ ದೂರು ನೀಡಿದ್ದರು. ಜುಲೈ 22ರಂದು ನಾಸೀರ್ ಪುರ್ ಗ್ರಾಮದ ಮೀನುಗಾರರು ಯಮುನಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಡಾಲ್ಫಿನ್ ಬಲೆಗೆ ಬಿದ್ದಿರುವುದಾಗಿ ದೂರಿನಲ್ಲಿ ತಿಳಿಸಿರುವುದಾಗಿ ಪಿಪ್ರಿ ಪೊಲೀಸ್ ಠಾಣಾಧಿಕಾರಿ ಶ್ರವಣ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ನದಿಯಲ್ಲಿ ಸಿಕ್ಕ ಡಾಲ್ಫಿನ್ ಅನ್ನು ಮೀನುಗಾರ ಹೆಗಲ ಮೇಲೆ ಇಟ್ಟು ಹೊತ್ತು ತರುತ್ತಿದ್ದಾಗ, ಮಾರ್ಗದಲ್ಲಿ ಹೋಗುತ್ತಿದ್ದವರು ಈ ದೃಶ್ಯವನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದರು.
ಡಾಲ್ಫಿನ್ ಅನ್ನು ಹಿಡಿದು ತಿಂದ ಆರೋಪದಲ್ಲಿ ನಾಲ್ವರು ಮೀನುಗಾರರಾದ ರಂಜಿತ್ ಕುಮಾರ್, ಸಂಜಯ್, ದೇವನ್ ಹಾಗೂ ಬಾಬಾ ಎಂಬಾತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ(1972)ಯಡಿ ಪ್ರಕರಣ ದಾಖಲಿಸಲಾಗಿದ್ದು, ರಂಜಿತ್ ಕುಮಾರ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇನ್ನುಳಿದ ಆರೋಪಿಗಳನ್ನು ಸೆರೆಹಿಡಿಯಲು ಶೋಧ ಕಾರ್ಯ ನಡೆಯುತ್ತಿರುವುದಾಗಿ ಠಾಣಾಧಿಕಾರಿ ಸಿಂಗ್ ತಿಳಿಸಿದ್ದಾರೆ.