ಉಪ್ಪುಂದ: ಸಂಘಟನೆ ಒಂದು ಶಕ್ತಿಯಾಗಿದ್ದು, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ತನ್ನ ಕ್ರಿಯಾಶೀಲತೆಯಿಂದ ಮೀನುಗಾರರ ಧ್ವನಿಯಾಗಿ ಗುರುತಿಸಿ ಕೊಂಡಿದೆ. ತಮ್ಮ ದುಡಿಮೆಯ ಜತೆಗೆ ಇತರರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿರುವ ಮೀನುಗಾರರು ವಿಶ್ವಾಸ, ನಂಬಿಕೆಗೆ ಹೆಸರಾಗಿದ್ದಾರೆ ಎಂದು ಶಿಕಾರಿಪುರ ಶಾಸಕ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಬೆಳ್ಳಿಹಬ್ಬದ ಅಂಗವಾಗಿ ಶನಿವಾರ ಉಪ್ಪುಂದ ಕೊಡೇರಿಯಲ್ಲಿ ನಡೆದ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರಕಾರವು ಸೀಮೆ ಎಣ್ಣೆ ಪಡೆಯಲು ಕೇಂದ್ರ ಸರಕಾರಕ್ಕೆ ಅಗತ್ಯ ವರದಿಯನ್ನು ಸಲ್ಲಿಸಿದಾಗ ಕೇಂದ್ರದಿಂದ ಅನುದಾನ ದೊರಕಿಸಿ ಕೊಡಲಾಗುವುದು ಎಂದರು.
ಜೀವರಕ್ಷಕ ಪ್ರಶಸ್ತಿ ವಿತರಣೆ: ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಜೀವರಕ್ಷಕ ಪ್ರಶಸ್ತಿ ವಿತರಿಸಿ ಮಾತನಾಡಿ, ರಾಜ್ಯ ಸರಕಾರದಿಂದ ಮಾರ್ಚ್‌ವರೆಗೆ ಸೀಮೆ ಎಣ್ಣೆ ನೀಡಲು ಆದೇಶವಾಗಿದ್ದು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕೇಂದ್ರ ಸರಕಾರದಿಂದ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಬಜೆಟ್‌ನಲ್ಲಿ ಮೀನುಗಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕು ಎಂಬ ಬಗ್ಗೆ ಮನವಿ ಸಲ್ಲಿಸಲಾಗಿದೆ. ಸಿಆರ್‌ಝಡ್ ವ್ಯಾಪ್ತಿಯನ್ನು 3ರಿಂದ 2ನೇ ನಿಯಮಕ್ಕೆ ತರುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಸಮಸ್ತ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಿರುವುದರಿಂದ ಮುಂದಿನ ದಿನಗಳಲ್ಲಿ ತನ್ನ ಕೈಹಿಡಿಯಬೇಕು ಎಂದು ಮನವಿ ಮಾಡಿದರು.
ಉಪ್ಪುಂದ ಗ್ರಾ.ಪಂ. ಅಧ್ಯಕ್ಷೆ ದುರ್ಗಮ್ಮ ಪರಿಹಾರ ನಿಧಿ ಯೋಜನೆ ಅನಾವರಣಗೊಳಿಸಿದರು. ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಖಾರ್ವಿ ಕೊಡೇರಿ ಮೀನುಗಾರಿಕಾ ಮಾಹಿತಿ ಕೇಂದ್ರ ಲೋಕಾರ್ಪಣೆಗೊಳಿಸಿದರು. ಉತ್ತರ ಕನ್ನಡ ನಾಡದೋಣಿ ಮೀನುಗಾರರ ಸಂಘ ಅಧ್ಯಕ್ಷ ಸದಾನಂದ ಜಟ್ಟಿ ಹರಿ ಕಂತ್ರ ಸಂಘದ ಸದಸ್ಯರ ವೆಬ್‌ಸೈಟ್ ಅನಾವರಣ ಮಾಡಿದರು. ಸಂಘದ ಅಧ್ಯಕ್ಷ ಸೋಮಶೇಖರ ಕೆ.ಎಂ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸಂಘದ ಸ್ಥಾಪಕಾಧ್ಯಕ್ಷ ಮದನ್‌ಕುಮಾರ ಉಪ್ಪುಂದ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಶಿರೂರು ಅಲ್ಪಸಂಖ್ಯಾಕರ ನಾಡದೋಣಿ ಮೀನುಗಾರರ ಸಂಘ ಅಧ್ಯಕ್ಷ ಅಬ್ದುಲ್ ಅಜೀದ್, ಉಡುಪಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಚಂದ್ರಕಾಂತ ಕರ್ಕೇರ, ಸಂಘದ ನಿಕಟಪೂರ್ವ ಅಧ್ಯಕ್ಷರಾದ ಡಿ. ರಾಮಚಂದ್ರ ಖಾರ್ವಿ, ಬಿ. ಕುಮಾರ್ ಖಾರ್ವಿ ಉಪ್ಪುಂದ, ಕಾರ್ಯದರ್ಶಿ ನರೇಶ ಕೊಡೇರಿ ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ನವೀನಚಂದ್ರ ಸ್ವಾಗತಿಸಿದರು. ಅರುಣ ಕುಮಾರ್ ನಿರೂಪಿಸಿದರು. ಕೋಶಾಧಿಕಾರಿ ಅಣ್ಣಯ್ಯ ಖಾರ್ವಿ ವಂದಿಸಿದರು.