Advertisement

ಮೀನುಗಾರರ ಸಾಲ ಶೀಘ್ರ ಖಾತೆಗೆ: ಕೋಟ

01:25 AM Sep 19, 2020 | mahesh |

ಕುಂದಾಪುರ: ಮೀನುಗಾರ ಮಹಿಳೆಯರ ಸಾಲ ಮಂಜೂರಾತಿಗೆ ಎಲ್ಲ ಕೆಲಸ ಕಾರ್ಯಗಳಾಗಿದ್ದು ಶೀಘ್ರ ಅವರ ಖಾತೆಗೆ ಹಣ ಜಮೆಯಾಗಲಿದೆ. ಆಬಳಿಕ ಅವರು ಸುಸ್ತಿದಾರರು ಪಟ್ಟಿದಿಂದ ಹೊರಬೀಳಲಿದ್ದಾರೆ ಎಂದು ಸಚಿವ ಕೋಟಿ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.

Advertisement

ಶುಕ್ರವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿ, ಮಾಧ್ಯಮದ ಜತೆ ಮಾತನಾಡಿದ ಅವರು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿಹೆಚ್ಚು ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು ಮರವಂತೆ ಕಡಲತಡಿಯ ಕಾಮಗಾರಿಗೂ ಅನುದಾನ ಮಂಜೂರಾಗಲಿದೆ. ಮರಳು ನೀತಿ ಪರಿಷ್ಕರಿಸಲಾಗಿದ್ದು ಗ್ರಾಮ ಹಂತದಲ್ಲೂ ಮರಳು ವಿತರಣೆ ಆರಂಭಿಸಲಾಗಿದೆ. ಮರವಂತೆಯಲ್ಲಿ ಜಪಾನ್‌ ಮಾದರಿಯಲ್ಲಿ ತಡೆಗೋಡೆ ರಚನೆಗೆ ಸಂಬಂಧಿಸಿದಂತೆ ಮಂಜೂರಾತಿಯ ಕಡತ ರಚನೆ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದರು.

ಲಾಬಿ ಮಾಡಿಲ್ಲ: ಕೋಟ
ಇಲಾಖಾ ಅನುದಾನ ಮಂಜೂರಾತಿಗೆ ಹೋಗಿದ್ದೆ ವಿನಃ ಸಚಿವ ಸ್ಥಾನ ಉಳಿಸಿಕೊಳ್ಳಲು ದಿಲ್ಲಿಗೆ ಹೋಗಿಲ್ಲ. ಸಚಿವ ಸಂಪುಟ ವಿಸ್ತರಣೆ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು, ಕೇಂದ್ರದವರ ಜತೆ ಚರ್ಚಿಸಿ ತೀರ್ಮಾನಿಸುತ್ತಾರೆ ಎಂದು ಸಚಿವರು ಈ ಸಂದರ್ಭ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ 84 ಎ ದರ್ಜೆ ದೇವಾಲಯಗಳ ವ್ಯವಸ್ಥಾಪನ ಸಮಿತಿ ರಚನೆಗೆ ಅನುಮೋದನೆಗೆ ಧಾರ್ಮಿಕ ದತ್ತಿ ಇಲಾಖೆ ಮುಂದಾಗಿದ್ದು 1 ವಾರದಲ್ಲಿ ಮೊದಲ ಹಂತದ ಸಮಿತಿ ರಚನೆ ಪೂರ್ಣವಾಗಲಿದೆ. ಜಿಎಸ್ಟಿ ಪಾಲು ಕೇಂದ್ರದಲ್ಲಿ ಬಂದಿಲ್ಲ ಎನ್ನುವ ಕುರಿತು ಗಮನ ಸೆಳೆದಾಗ, ಖಂಡಿತವಾಗಿ ಬರಲಿದೆ. ಮೋದಿ ಸರಕಾರ ಈ ಹಿಂದಿನ ಸರಕಾರಗಳಿಗಿಂತ ಎರಡು ಪಟ್ಟು ಅನುದಾನ ನೀಡುತ್ತಿದೆ. ರಾಜ್ಯದಿಂದ ತೊಡಗಿ ಗ್ರಾ.ಪಂ. ಹಂತದವರೆಗೂ ಅನುದಾನದಲ್ಲಿ ಹೆಚ್ಚಳವಾಗಿದೆ ಎಂದರು.

ಆಕ್ಸಿಜನ್‌ ಕೊರತೆ ಕುರಿತು ಆರೋಗ್ಯ ಸಚಿವರು, ಉಪಮುಖ್ಯಮಂತ್ರಿಗಳ ಜತೆ ಮಾತನಾಡಿದ್ದು ಎರಡು ಜಿಲ್ಲೆಗಳ ಆಕ್ಸಿಜನ್‌ ಕೊರತೆ ನಿವಾರಣೆಯಾಗಲಿದೆ. ಎಲ್ಲ ಖಾಸಗಿ ಆಸ್ಪತ್ರೆಗಳೂ ಆಯುಷ್ಮಾನ್‌ ಭಾರತ್‌ ಯೋಜನೆಗೆ ನೋಂದಾಯಿಸಲು ಸೂಚಿಸಿದ್ದು ನೋಂದಾವಣೆ ಮಾಡದೇ ಹೆಚ್ಚುವರಿ ಬಿಲ್‌ ವಿಧಿಸಿದರೆ ಅದರ ಕುರಿತು ತನಿಖೆ ನಡೆಸಲಾಗುವುದು ಎಂದ ಅವರು ಆರ್ಥಿಕ ಸ್ಥಿತಿ ಹದಗೆಟ್ಟಿಲ್ಲ. ಸರಕಾರವನ್ನು ಟೀಕಿಸುವುದು ವಿರೋಧ ಪಕ್ಷಗಳ ಕರ್ತವ್ಯ. ಅವರ ಎಲ್ಲ ಆರೋಪಗಳಿಗೆ ಸದನದಲ್ಲಿ ಉತ್ತರಿಸಲಾಗುವುದು ಎಂದು ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next