ಪಣಂಬೂರು/ ಮಂಗಳೂರು: ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರರೊಬ್ಬರನ್ನು ಬುಧವಾರ ಕರಾವಳಿ ತಟ ರಕ್ಷಣಾ ಪಡೆಯವರು ಪ್ರಕ್ಷುಬ್ಧ ಸಮುದ್ರ ಮಧ್ಯೆ ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಒಡಿಶಾದ ಮೀನುಗಾರ ಲೋಂಡ (35) ರಕ್ಷಿಸಲ್ಪಟ್ಟ ಮೀನುಗಾರ. ಮಂಗಳೂರಿನಿಂದ ಅ. 23ರಂದು ಬೆಳಗ್ಗೆ 3 ಗಂಟೆಗೆ ಎಫ್‌ಬಿ ಶೈನಲ್ ಏಂಜಲ್ ದೋಣಿ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಸಮುದ್ರ ಪ್ರಕ್ಷುಬ್ಧವಾಗಿದ್ದುದರಿಂದ ಲೋಂಡ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದರು. ಅವರು ಸಮುದ್ರಕ್ಕೆ ಬಿದ್ದಿರುವುದು ಸಹಮೀನುಗಾರರ ಅರಿವಿಗೆ ಬಂದಿರಲಿಲ್ಲ. ಬಳಿಕ ಅವರ ಮೊಬೈಲ್ ಫೋನ್ ಬೋಟ್‌ನಲ್ಲೇ ಇದ್ದುದರಿಂದ ತಿಳಿಯಿತು. ತತ್‌ಕ್ಷಣ ಸಹ ಮೀನು ಗಾರರು ಕರಾವಳಿ ಕಾವಲು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು.
ಸಮುದ್ರ ಪ್ರಕ್ಷುಬ್ಧವಾಗಿದ್ದುದರಿಂದ ಸ್ಪೀಡ್ ಬೋಟ್‌ಗಳು ತಲುಪಲು ಸಾಧ್ಯವಾಗದ ಕಾರಣ ಕಣ್ಗಾವಲಿನಲ್ಲಿ ನಿರತವಾಗಿದ್ದ ಕೋಸ್ಟ್‌ಗಾರ್ಡ್‌ನ ಸಾವಿತ್ರಿಬಾಯಿ ಫುಲೆ ಹಡಗಿಗೆ ಮಾಹಿತಿ ನೀಡಿ ರಕ್ಷಣೆಗೆ ಕಳುಹಿಸಲಾಯಿತು. ನಾಪತ್ತೆಯಾದ ಮೀನುಗಾರನನ್ನು ಮಲ್ಪೆ ಲೈಟ್ ಹೌಸ್‌ನಿಂದ 10 ನಾಟಿ ಕಲ್ ಮೈಲು ದೂರದಲ್ಲಿ ಪತ್ತೆಹಚ್ಚಿ ರಕ್ಷಿಸಲಾಯಿತು. ಜೀವ ಉಳಿಸಿಕೊಳ್ಳಲು ಸತತವಾಗಿ ಈಜುತ್ತ ಬಸವಳಿದಿದ್ದ ಲೋಂಡ ಅವರಿಗೆ ಆಹಾರ ಮತ್ತು ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಅವರನ್ನು ಎನ್‌ಎಂಪಿಟಿಗೆ ಕರೆತಂದು ಕೋಸ್ಟಲ್ ಪೊಲೀಸರಿಗೆ ಹಸ್ತಾಂತರಿಸಲಾಯಿತು.
ಥರ್ಮೊಕೋಲ್ ಸಹಾಯ
ಕೋಸ್ಟ್ ಗಾರ್ಡ್ ಹಡಗು ಲೋಂಡ ಅವರನ್ನು ಪತ್ತೆ ಹಚ್ಚುವುದಕ್ಕೆ ಮುನ್ನ ಅವರು ಸತತ 12 ಗಂಟೆಗಳ ಕಾಲ ಸಮುದ್ರದಲ್ಲಿ ಈಜುತ್ತಾ ಸಹಾಯಕ್ಕಾಗಿ ಎದುರು ನೋಡುತ್ತಿದ್ದರು. ಮಾತ್ರವಲ್ಲದೆ ಸಮುದ್ರಕ್ಕೆ ಬಿದ್ದ ಸ್ಥಳದಿಂದ ನಿಧಾನವಾಗಿ ಈಜುತ್ತಾ ಮುಂದೆ ಹೋಗಿದ್ದರು. ಸಮುದ್ರದಲ್ಲಿ ತೇಲುತ್ತಿದ್ದ ಥರ್ಮೊಕೋಲ್ ತುಂಡು ಸಿಕ್ಕಿದ್ದು, ಅದರ ನೆರವಿನಿಂದ ಈಜುತ್ತ ಸಹಾಯ ಎದುರು ನೋಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಬಲವಾದ ಗಾಳಿ ಬೀಸುತ್ತಿತ್ತು. ಕೋಸ್ಟ್‌ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸರು ಇಂಥ ಅಪಾಯದ ಸನ್ನಿವೇಶದಲ್ಲಿಯೂ ಸಮುದ್ರದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.