Advertisement
ಹಿಂದೆಲ್ಲ ಇದೇ ಅವಧಿಯಲ್ಲಿ ಮೀನುಗಾರರು ಬಲೆ ತುಂಬ ಮೀನು ಹಿಡಿದು ತರುತ್ತಿದ್ದರು. ಈ ಬಾರಿ ದೋಣಿ ಇಳಿಸಲೇ ಆಗಿಲ್ಲ. ಇದೀಗ ಮಳೆಗಾಲದ ನಾಡದೋಣಿ ಮೀನುಗಾರಿಕೆ ಅವಧಿಯೂ ಮುಗಿಯುತ್ತಾ ಬಂದಿದ್ದು, ಸಾಲದ ಹೊರೆಯಲ್ಲಿರುವ ನಾವು ದಿಕ್ಕೇ ತೋಚದಂತಾಗಿದ್ದೇವೆ ಎನ್ನುತ್ತಾರೆ ಸಾಂಪ್ರದಾಯಿಕ ನಾಡ ಟ್ರಾಲ್‌ದೋಣಿ ಮೀನುಗಾರ ಪುರಂದರ ಕೋಟ್ಯಾನ್.
ಈ ಬಾರಿ ಕರಾವಳಿ ತೀರದುದ್ದಕ್ಕೂ ನಿರಂತರವಾಗಿ ಸುರಿಯುತ್ತಿರುವ ಮಳೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರನ್ನು ಕಂಗಾಲಾಗಿಸಿವೆ. ನಾಡದೋಣಿ ಮೀನುಗಾರರಿಗೆ ಕಡಲಿಗಿಳಿಯಲು ಸಾಧ್ಯವಾಗುತ್ತಿಲ್ಲ. ಜೂನ್ 1ರಿಂದ ಜು.31ರವರೆಗೆ 60 ದಿನಗಳು ನಾಡದೋಣಿ ಮೀನುಗಾರಿಕೆಗೆ ಅವಕಾಶವಿದ್ದರೂ ಈಗಾಗಲೇ 45ದಿನಗಳು ಕೈತಪ್ಪಿ ಹೋಗಿವೆ. ಆ. 1ರಿಂದ ಯಾಂತ್ರಿಕ ಮೀನುಗಾರಿಕೆ ಆರಂಭಗೊಳ್ಳುತ್ತಿರುವುದರಿಂದ ಇನ್ನು ಕೇವಲ ಬೆರಳೆಣಿಕೆ ದಿನಗಳು ಮಾತ್ರ ಉಳಿದಿದೆ. ಸಾಮಾನ್ಯವಾಗಿ ಪುನರ್ವಸು, ಪುಷ್ಯ ಮಳೆ ಆರಂಭಗೊಂಡಾಗ ನಾಡದೋಣಿ ಗಳಿಗೆ ಉತ್ತಮ ಮೀನುಗಾರಿಕೆ ಆಗುತ್ತಿತ್ತು. ಕಳೆದ ವರ್ಷದಲ್ಲಿ ಜುಲೈ ತಿಂಗಳ ಪ್ರಥಮ ವಾರದಲ್ಲೇ ಹೇರಳ ಪ್ರಮಾಣದಲ್ಲಿ ಸಿಗಡಿ ಮೀನುಗಳು ನಾಡದೋಣಿ ಬಲೆ ಬಿದ್ದಿದ್ದವು. ಈಗ ಕಡಲಿಗಿಳಿದರೆ ಮೀನು ಸಿಗುವ ಲಕ್ಷಣ ಇದೆ. ಆದರೆ ಮಳೆಗಾಳಿಯಿಂದಾಗಿ ಸಮುದ್ರಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ. ಸಂಕ್ರಮಣದ ಬಳಿಕ ಮೀನುಗಾರಿಕೆಗೆ ಪೂರಕವಾಗಬಹುದು ಎನ್ನುತ್ತಾರೆ ಮೀನುಗಾರರಾದ ಕೃಷ್ಣ ಸುವರ್ಣ.
Related Articles
ಮಲ್ಪೆ ಬಂದರು ವ್ಯಾಪ್ತಿಯಲ್ಲಿ 650ಕ್ಕೂ ಹೆಚ್ಚು ಸಾಂಪ್ರದಾಯಿಕ ನಾಡ ಟ್ರಾಲ್‌ದೋಣಿಗಳು ಮಳೆಗಾಲದ ಮೀನುಗಾರಿಕೆ ನಡೆಸುತ್ತಿವೆ. ಬಹುತೇಕ ದೋಣಿಗಳು ಸಾಲ ಮಾಡಿ ಮೀನುಗಾರಿಕೆಗೆ ತೊಡಗಿದ್ದು ಸಾಲ ಮರುಪಾವತಿ ಹೇಗೆ ಎಂಬ ಚಿಂತೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ 15 ದಿನ ಹೆಚ್ಚುವರಿಯಾಗಿ ಮೀನುಗಾರಿಕೆಗೆ ಅವಕಾಶ ನೀಡಬೇಕು. ಅಲ್ಲಿವರೆಗೆ ಯಾಂತ್ರೀಕೃತ ಮೀನುಗಾರಿಕೆ ಬೇಡ ಎನ್ನುವುದು ಮೀನುಗಾರರ ಸಂಘದ ಆಗ್ರಹವಾಗಿದೆ.
Advertisement
ಸ್ಥಿತಿ ದುಸ್ತರ ಮೊದಲೇ ಮೀನಿಗೆ ಕೆಮಿಕಲ್ ಬಳಸಿದ್ದಾರೆ ಎಂಬ ಭಯದಿಂದ ಗ್ರಾಹಕರು ದೂರ ಸರಿದಿದ್ದಾರೆ. ಅದಕ್ಕೆ ಸರಿಯಾಗಿ ಮೀನುಗಾರಿಕೆಗೆ ಹೋಗಲು ಸಮುದ್ರ ಬಿಡುತ್ತಿಲ್ಲ. ಒಟ್ಟಿನಲ್ಲಿ ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ನಮ್ಮ ಸ್ಥಿತಿ ದುಸ್ತರವಾಗಿದೆ.
– ಆನಂದ ಸಾಲ್ಯಾನ್,ಮಲ್ಪೆ ಮಲ್ಪೆಯಲ್ಲಿ ಮತ್ಸ್ಯಮೇಳ
ಒಂದೆಡೆ ನಾಡದೋಣಿ ಕಡಲಿಗೆ ಇಳಿಯದೆ ಮೀನಿಗೆ ಬರ. ಇನ್ನೊಂದೆಡೆ ಮೀನು ಕೊಳ್ಳುವ ಗ್ರಾಹಕರು ಕೆಮಿಕಲ್ ಭಯದಿಂದ ಹಿಂದೇಟು ಹಾಕುತ್ತಿರುವುದು ಮೀನು ಮಾರಾಟಗಾರರನ್ನು ಆತಂಕಕ್ಕೀಡು ಮಾಡಿವೆ. ಭಯ ಹೋಗಲಾಡಿಸಲು ಮುಂದಿನ ದಿನದಲ್ಲಿ ಮಲ್ಪೆಯಲ್ಲಿ ಮತ್ಸéಮೇಳ ಆಯೋಜಿಸಲಾಗುವುದು.
– ಯಶಪಾಲ್ ಸುವರ್ಣ
ಅಧ್ಯಕ್ಷ , ಮೀನುಮಾರಾಟ ಫೆಡರೇಶನ್