Advertisement
ನಾಲ್ಕು ವರ್ಷಗಳ ಹಿಂದೆಯೇ 54.7 ಕೋ. ರೂ. ವೆಚ್ಚದಲ್ಲಿ ಮುಗಿಯುತ್ತಿದ್ದ ಯೋಜನೆಯ ಗಾತ್ರ ಹಿಂದೆ ವೆಚ್ಚವಾದ 45 ಕೋಟಿ ರೂ. ಜತೆಗೆ ಈಗಿನ 85 ಕೋಟಿ ರೂ. ಸೇರಿ ಬಹಳಷ್ಟು ಹಿಗ್ಗುವಂತಾಗಿದೆ. ಮಾ. 12ರಂದು ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ 85 ಕೋಟಿ ರೂ. ನೀಡಿರುವುದು ಮರವಂತೆ ಭಾಗದ ಸಾವಿರಾರು ಮೀನುಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.
ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಉಸ್ತುವಾರಿಯಲ್ಲಿ ತಮಿಳುನಾಡಿನ ಮೆ| ಎನ್‌ಎಸ್‌ಕೆ ಬಿಲ್ಡರ್ 2013ರ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಿಸಿತ್ತು. ಎರಡು ವರ್ಷಗಳಲ್ಲಿ ಉತ್ತರ ಮತ್ತು ದಕ್ಷಿಣದ ತಡೆಗೋಡೆ ಹೆಚ್ಚಾ ಕಡಿಮೆ ಪೂರ್ಣಗೊಂಡಿತ್ತು. ಪಶ್ಚಿಮದ ಗೋಡೆ ಭಾಗಶಃ ನಿರ್ಮಾಣವಾಗಿತ್ತು. ಮಳೆಗಾಲದಲ್ಲಿ ಒಂದು ಹಂತದಲ್ಲಿ ಎರಡೂ ಕಡೆಯ ತಡೆಗೋಡೆಗಳು ಅಲ್ಲಲ್ಲಿ ಕುಸಿದವು. ಮಳೆಗಾಲದ ಬಳಿಕ ಕಾಮಗಾರಿ ಮರು ಆರಂಭವಾಯಿತಾದರೂ ನೆಪಮಾತ್ರಕ್ಕೆಂಬಂತೆ ನಡೆಯಿತು. ಪರಿಣಾಮವಾಗಿ 2016ರಲ್ಲಿ ಮುಕ್ತಾಯವಾಗಬೇಕಿದ್ದ ಕಾಮಗಾರಿ 2018ರ ವರೆಗೂ ಸಾಗಿ ಸ್ಥಗಿತವಾಯಿತು. ಆ ವೇಳೆಗೆ 45 ಕೋಟಿ ರೂ. ಕಾಮಗಾರಿಗಾಗಿ ವೆಚ್ಚಮಾಡಲಾಗಿತ್ತು. ಯೋಜನೆಯ ಮೂಲ ಬಜೆಟ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸುವುದು ಅಸಾಧ್ಯವೆಂದು ಅರಿತ ಕಂಪೆನಿ ಅರ್ಧಕ್ಕೆ ನಿಲ್ಲಿಸಿತ್ತು. ಅಂತಿಮವಾಗಿ ಇಲಾಖೆ ಆ ಹಂತದಲ್ಲಿ ಗುತ್ತಿಗೆ ಮುಕ್ತಾಯಗೊಳಿಸಿತು.
Related Articles
ಈ ಭಾಗದ ಮೀನುಗಾರರಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಕೇರಳ ಮಾದರಿಯ ಔಟ್‌ಡೋರ್ ಬಂದರು ಕಾಮಗಾರಿ ಅಪೂರ್ಣಗೊಂಡ ಪರಿಣಾಮ ಸಾಕಷ್ಟು ಸಮಸ್ಯೆಯನ್ನು ಅನುಭವಿಸುವಂತಾಯಿತ್ತು. ಉತ್ತರ ಹಾಗೂ ದಕ್ಷಿಣದ ತಡೆಗೋಡೆಯ ಮಧ್ಯ ಭಾಗದಲ್ಲಿ ಗಾಳಿಯ ಒತ್ತಡ ಅಧಿಕಗೊಂಡು ಕಡಲಿನ ಆರ್ಭಟ ಹೆಚ್ಚುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಸ್ಥಳೀಯ ನಿವಾಸಿಗಳ ಮನೆಗಳಿಗೆ ಸಮುದ್ರದ ಬೃಹತ್ ಅಲೆಗಳು ಬಂದು ಅಪ್ಪಳಿಸುತ್ತಿದ್ದವು. ಈಗ ಕಾಮಗಾರಿ ಪೂರ್ಣಗೊಳಿಸಲು ಬಜೆಟ್‌ನಲ್ಲಿ ಅನುದಾನ ನೀಡಿರು ವುದರಿಂದ ಕಾಮಗಾರಿ ಪೂರ್ಣಗೊಂಡರೆ ಈ ಪ್ರದೇಶದ ಕಡಲ್ಕೊರೆತದ ಸಮಸ್ಯೆಗೆ ಮುಕ್ತಿ ದೊರಕಲಿದೆ ಎನ್ನುವುದು ಮೀನುಗಾರರ ಅಭಿಪ್ರಾಯ.
Advertisement
ಬದಲಾದ ವಿನ್ಯಾಸಬಂದರಿನ 2ನೇ ಹಂತಕ್ಕೆ ಪುಣೆಯ ಕೇಂದ್ರೀಯ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರ, ಮೀನುಗಾರರ ಅಪೇಕ್ಷೆಯಂತೆ ಬದಲಿ ವಿನ್ಯಾಸ ಸಿದ್ಧಪಡಿಸಿದೆ. ಅದರಲ್ಲಿ ಮುಖ್ಯವಾಗಿ ಪಶ್ಚಿಮದ ತಡೆಗೋಡೆಯಲ್ಲಿ ದೋಣಿಗಳಿಗೆ ಇರಬೇಕಾದ ಪ್ರವೇಶಾವಕಾಶ ಗೋಡೆಯ ಉತ್ತರ ಅಂಚಿನ ಬದಲಿಗೆ ಮಧ್ಯದಲ್ಲಿ ಇರಲಿದೆ. ವಿನ್ಯಾಸ
ತೀರದಲ್ಲಿ 780 ಮೀಟರ್ ಅಂತರದಲ್ಲಿ ಉತ್ತರದಲ್ಲಿ 215ಮೀಟರ್, ದಕ್ಷಿಣದಲ್ಲಿ 190 ಮೀಟರ್ ಅಲೆ ತಡೆಗೋಡೆ, ಪಶ್ಚಿಮದಲ್ಲಿ ಅವೆರಡನ್ನು ಜೋಡಿಸಲು 645 ಮೀಟರ್ ಗೋಡೆ; ಪಶ್ಚಿಮದ ಗೋಡೆಯಲ್ಲಿ 150 ಮೀಟರ್ ಅಗಲದ ಪ್ರವೇಶ ದ್ವಾರ ಇರಲಿದೆ. ಕೇರಳ ಮಾದರಿ ರಾಜ್ಯದಲ್ಲೇ ಪ್ರಥಮ
ಮರವಂತೆಯ ಮೀನುಗಾರರು ಅಂದು ಸಂಸದರಾಗಿದ್ದ ಬಿ.ವೈ. ರಾಘವೇಂದ್ರ ಅವರ ಮೂಲಕ ಕೇರಳ ಮಾದರಿಯ ಔಟ್‌ಡೋರ್ ಯೋಜನೆಯನ್ನು ಮರವಂತೆಯಲ್ಲಿ ಕಾರ್ಯಗತಗೊಳಿಸಲು ಯಶಸ್ವಿಯಾಗಿದ್ದರು. ಆದರೆ ಕಾಮಗಾರಿ ನಡೆಸುವಾಗ ಗುತ್ತಿಗೆದಾರ ಕಂಪೆನಿ ಮೀನುಗಾರರ ಆಗ್ರಹಕ್ಕೆ ಮಣಿದು ಮೂಲ ವಿನ್ಯಾಸಕ್ಕಿಂತ ಹೆಚ್ಚು ವಿಸ್ತಾರವಾಗಿ ಹೊರಬಂದರು ನಿರ್ಮಾಣಕ್ಕೆ ಮುಂದಾದಾಗ ವೆಚ್ಚ ಹೆಚ್ಚಾಗಿದ್ದರಿಂದ ಕಾಮಗಾರಿ ನಡೆಯುತ್ತಿರುವ ವೇಗ ಕುಂಠಿತಗೊಂಡಿತು. ಯೋಜನೆಯ ಉದ್ದೇಶ
ಪಾರಂಪರಿಕ ಫೈಬರ್‌ಗ್ಲಾಸ್ ಮೋಟರೀಕೃತ ದೋಣಿಗಳು ತಂಗಲು ಸುರಕ್ಷಿತ ಇಳಿದಾಣ ನಿರ್ಮಿಸುವ ಮೂಲಕ ಗಾಳಿ, ಮಳೆ, ಸಮುದ್ರದ ಅಲೆ, ತೂಫಾನ್, ಅಬ್ಬರಗಳ ಪರಿಣಾಮವಾಗಿ ಸಂಭವಿಸುವ ದೋಣಿಗಳ ಪರಸ್ಪರ ಢಿಕ್ಕಿ, ಜೀವ, ಆಸ್ತಿ ಹಾನಿ ನಿವಾರಣೆಗೆ ಮೂರು ಕಡೆ ತಡೆಗೋಡೆಗಳಿಂದ ಆವೃತವಾದ ತಂಗುದಾಣ ನಿರ್ಮಾಣ ಮಾಡುವುದಾಗಿದೆ. ಇದರಿಂದ ಸುಮಾರು 10 ಸಾವಿರ ಮೀನುಗಾರರಿಗೆ ಅನುಕೂಲವಾಗಲಿದೆ. ಸಾಕಷ್ಟು ಅನುಕೂಲ
ಹೊರಬಂದರಿನ ವಿನ್ಯಾಸದಲ್ಲಿ ಬದಲಾವಣೆಯಿಂದಾಗಿ ಮೀನುಗಾರರಿಗೆ ಸಾಕಷ್ಟು ಅನುಕೂಲಕರವಾಗಿ ಪರಿಣಮಿಸಲಿದೆ. ಈ ಬಂದರಿನಿಂದ ಗಂಗೊಳ್ಳಿ, ಕೊಡೇರಿ, ಕಿರಿಮಂಜೇಶ್ವರ, ಉಪ್ಪುಂದ ಭಾಗದ ಮೀನುಗಾರರಿಗೆ ಸಹಾಯಕವಾಗಲಿದೆ. ಗುಣಮಟ್ಟದ ಕಾಮಗಾರಿಯನ್ನು ನಡೆಸಲು ಉತ್ತಮವಾದ ಸಂಸ್ಥೆಗೆ ಟೆಂಡರ್ ನೀಡಬೇಕಿದೆ.
– ಮೋಹನ ಖಾರ್ವಿ ಮರವಂತೆ,
ಮೀನುಗಾರರ ಮುಖಂಡ ಕಳಪೆ ಕಾಮಗಾರಿ ನಡೆಯಲು ಬಿಡುವುದಿಲ್ಲ
ಮೀನುಗಾರರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮರವಂತೆಯ ಔಟ್‌ಡೋರ್ ಯೋಜನೆಗೆ 2ನೇ ಹಂತದ ಅನುದಾನ ನೀಡಿದ್ದಾರೆ. ಇದರಿಂದ ಸಾವಿರಾರು ಮೀನುಗಾರರಿಗೆ ಅನುಕೂಲವಾಗಲಿದೆ. ಕಳಪೆ ಕಾಮಗಾರಿ ನಡೆಯಲು ಬಿಡುವುದಿಲ್ಲ. ಮೀನುಗಾರರ ಬಗ್ಗೆ ಕಾಳಜಿ ಹೊಂದಿರುವ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗುವುದು.
– ಬಿ.ಎಂ. ಸುಕುಮಾರ್ ಶೆಟ್ಟಿ, ಶಾಸಕರು -ಕೃಷ್ಣ ಬಿಜೂರು