ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆಗೆ ಹೆಚ್ಚಿನ ಅವಕಾಶಗಳಿದ್ದು, ಜಿಲ್ಲೆಯ ಆರ್ಥಿಕತೆಗೂ ಮೀನುಗಾರಿಕೆ ಉತ್ತಮ ಕೊಡುಗೆಗಳನ್ನು ನೀಡಿದೆ. ಜಿಲ್ಲೆಯ ಮೀನುಗಾರರ ಸಮಸ್ಯೆಗಳನ್ನು ಅರಿಯುವಲ್ಲಿ ಐಸಿಎಆರ್-ಸಿಎಂಎಫ್‌ಆರ್‌ಐ ಸಂಸ್ಥೆಯು ಜಿಲ್ಲಾಡಳಿತದೊಂದಿಗೆ ಹೊಂದಾಣಿಕೆಯಿಂದ ಕೆಲಸ ನಿರ್ವಹಿಸುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ತಿಳಿಸಿದರು.
ಭಾರತೀಯ ಕೃಷಿ ಅನುಸಂಧಾನ ಪರಿಷತ್-ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಐಸಿಎಆರ್-ಸಿಎಂಎಫ್‌ಆರ್‌ಐ)ಯ ಮಂಗಳೂರು ಸಂಶೋಧನಾ ಕೇಂದ್ರವು ಸೋಮವಾರ ನಗರದಲ್ಲಿ ಆಯೋಜಿಸಿದ್ದ ಸಮುದ್ರ ಪರಿಸರದ ಆರೋಗ್ಯದೊಂದಿಗೆ ಕರಾವಳಿಯ ಕೈಗಾರೀಕರಣದ ಸಾಮರಸ್ಯ ಎಂಬ ವಿಷಯದ ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊಬೈಲ್ ಆ್ಯಪ್: ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕೇಂದ್ರದ ವಿಜ್ಞಾನಿ ಮುಖ್ಯಸ್ಥೆ ಡಾ| ಪ್ರತಿಭಾ ರೋಹಿತ್ ಮಾತನಾಡಿ, ಮೀನುಗಾರರ ಅನುಕೂಲಕ್ಕಾಗಿ ಸಂಸ್ಥೆಯು ಮೊಬೈಲ್ ಆ್ಯಪೊಂದನ್ನು ಸಿದ್ಧಪಡಿಸಿದ್ದು, ಅದರಲ್ಲಿ ವಾತಾವರಣ, ಸೈಕ್ಲೋನ್, ಮೀನುಗಾರಿಕೆಗೆ ಸೂಕ್ತ ಸ್ಥಳ ಇವುಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಜತೆಗೆ ಕೇಂದ್ರವು ಮೀನಿನ ಆಹಾರೋತ್ಪನ್ನವನ್ನೂ ಮಾರುಕಟ್ಟೆಗೆ ನೀಡುತ್ತಿದೆ ಎಂದರು.
ಮಹಾರಾಷ್ಟ್ರ ಮ್ಯಾಂಗ್ರೂವ್ ಸೆಲ್‌ನ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎನ್. ವಾಸುದೇವನ್ ಹಾಗೂ ಹೊಸದಿಲ್ಲಿ ಐಸಿಎಆರ್‌ನ ಅಸಿಸ್ಟೆಂಟ್ ಡೈರೆಕ್ಟರ್ ಜನರಲ್ ಡಾ| ಪಿ. ಪ್ರವೀಣ್ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸಮುದ್ರ ಮೀನುಗಾರಿಕೆಯ ನೀತಿಯ ಪ್ರಕಟನೆಗಳನ್ನು ಬಿಡುಗಡೆಗೊಳಿಸಿದರು. ಕೇಂದ್ರದ ವಿಜ್ಞಾನಿಗಳಾದ ಡಾ| ಎ.ಪಿ. ದಿನೇಶ್ ಬಾಬು ಸ್ವಾಗತಿಸಿದರು. ಗೀತಾ ಶಶಿಕುಮಾರ್ ವಂದಿಸಿದರು.