Advertisement

ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡಲು ಬದ್ಧ: ಅಂಗಾರ

07:30 PM Oct 20, 2022 | Team Udayavani |

ಬೆಂಗಳೂರು: ಸಾಂಪ್ರಾದಾಯಿಕ ಒಳನಾಡು ಮೀನುಗಾರಿಕೆಗೆ  ಸರಕಾರ ಸಂಪೂರ್ಣ ಉತ್ತೇಜನ ನೀಡಲಿದೆ ಎಂದು ಮೀನುಗಾರಿಕೆ ಸಚಿವ ಎಸ್‌. ಅಂಗಾರ ಹೇಳಿದ್ದಾರೆ.

Advertisement

ಒಳನಾಡು ಮೀನುಗಾರಿಕೆ ಸಮಸ್ಯೆಗಳ ಕುರಿತು ಗುರುವಾರ ವಿಕಾಸಸೌಧದಲ್ಲಿ  ಸಚಿವರು, ಶಾಸಕರು ಹಾಗೂ ಮೀನುಗಾರಿಕೆ ಸಂಘಟನೆಗಳೊಂದಿಗೆ ಸಭೆ ನಡೆಸಿದ ಅವರು, ಸಾಂಪ್ರದಾಯಿಕವಾಗಿ ಮೀನುಗಾರಿಕೆ ಮಾಡಿ ಬದುಕು ಕಟ್ಟಿಕೊಳ್ಳುವ ಮೀನುಗಾರರಿಗೆ ಹಾಗೂ ಒಳನಾಡು ಮೀನುಗಾರಿಕೆಗೆ ಸರಕಾರದಿಂದ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.

ಒಳನಾಡು ಮೀನುಗಾರಿಕೆಯಲ್ಲಿ ತೊಡಗಿರುವವರು ಆಯಾ ಪ್ರದೇಶಗಳಲ್ಲಿ ಸಂಘಟಿತರಾಗಿ ಗುಂಪುಗಳಾಗಬೇಕು. ಆಗ ಸರಕಾರದಿಂದ ಸೌಲಭ್ಯ ವಿತರಣೆಗೆ ಅನುಕೂಲವಾಗಲಿದೆ. ಅಲ್ಲದೆ, ಮೀನು ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮೀನುಗಾರರ ಕುಟುಂಬದವರು ತಮ್ಮ ಭೂಮಿಯಲ್ಲಿ ಮೀನುಗಾರಿಕೆಗೆ ಹೊಂಡಗಳನ್ನು ಮಾಡುವುದಾದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೊಂಡ ನಿರ್ಮಿಸಲು ಅವಕಾಶ ಕಲ್ಪಿಸಲಾಗುವುದು. ಅಲ್ಲದೆ ಅವರಿಗೆ ಉಚಿತವಾಗಿ ಮೀನುಮರಿಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಜಿಲ್ಲೆಗೊಂದು ಮೀನುಗಾರರ ಒಕ್ಕೂಟಗಳನ್ನು ರಚಿಸಿಕೊಳ್ಳುವುದರಿಂದ ಅನುಕೂಲವಾಗಲಿದೆ. ಅಲ್ಲದೆ, ಇಲಾಖೆಯಿಂದ ಮೀನುಗಾರಿಕೆಗೆ ತರಬೇತಿ ಹಾಗೂ ಪಂಜರ ಮೀನುಗಾರಿಕೆಗೆ ಉತ್ತೇಜನದ ಅಗತ್ಯವಿದೆ ಎಂದರು.

Advertisement

ಮೀನುಗಾರಿಕೆ ಇಲಾಖೆ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು, ಉತ್ತರ ಕರ್ನಾಟಕ ಹಾಗೂ ಬಯಲುಸೀಮೆಯ ಒಳನಾಡು ಮೀನುಗಾರಿಕೆಗೆ ವಿಶೇಷ ಆದ್ಯತೆ ನೀಡಬೇಕು. ಈ ಮೂಲಕ ಸಾಂಪ್ರದಾಯಿಕ ಮೀನುಗಾರರಿಗೆ ಹೆಚ್ಚಿನ ಅನುಕೂಲವಾಗಲಿವೆ ಎಂದರು.

ಸಭೆಯಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಮೀನುಗಾರರ ಸಂಘಗಳ ಪದಾಧಿಕಾರಿಗಳು ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡುವ ಸಂಬಂಧ ಸಲಹೆಗಳನ್ನು ನೀಡಿದರು.

ಶಾಸಕರಾದ ರೂಪಾಲಿ ನಾಯಕ್‌, ತಳವಾರ ಸಾಬಣ್ಣ, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಾಹಿಮ್, ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಾಚಾರಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next